Friday, November 01, 2013

ಮನಸಿನ ಭಾವಗಳು ಬದಲಾದಾಗ...!


ಸಂಬಂಧಗಳು ಹಾಗೇನೇ... ಒಂದು ಸಾರಿ ತುಂಬಾ ಆಪ್ತವೆನಿಸುತ್ತದೆ. ಇನ್ನೊಂದು ಬಾರಿ ತುಂಬಾ ಬೋರ್ ಅನ್ನಿಸುತ್ತದೆ. ಕೆಲವು ಬಾರಿ ಹಿಂಸೆ, ಕೆಲವು ಸಾರಿ ವಿಕೃತಿಯನ್ನೂ ಮಾಡಿಸಿಬಿಡುತ್ತದೆ.

ನಾವು ತುಂಬಾ ಆಪ್ತರೆನಿಸಿಕೊಂಡವರ ಮೌನ ಕೆಲವು ಸಾರಿ ನಮಗೆ ಸಹಿಸಲಸಾಧ್ಯ ಎನ್ನುವ ಹಂತಕ್ಕೆ ನಮ್ಮನ್ನು ತಂದು ನಿಲ್ಲಿಸುತ್ತದೆ. ಆದರೆ ಆ ಸಂಬಂಧವೊಂದು ಕೆಡಲು ಕಾರಣವೂ ಇರುತ್ತದೆ. ಆದರೆ ಹೇಳಬೇಕಾದವರು ಮುನಿಸಿಕೊಂಡರೆ, ಏನೂ ಹೇಳದೆ ಸುಮ್ಮನಿರುವ ಭಾವ ಇದೆಯಲ್ಲಾ. ಅದು ಇಡೀ ದಿನ ನಮ್ಮ ಮನವನ್ನು  ಕಾಡುತ್ತಿರುತ್ತದೆ.

ಬಾಲ್ಯದಿಂದಲೂ ನಾನು ಕೆಲವೇ ಕೆಲವು ಸಂಬಂಧಗಳನ್ನು ತುಂಬಾ ಆಪ್ತವೆನಿಸಿಕೊಂಡು ಆರಾಧಿಸಿದ್ದೇನೆ. ನನ್ನ ಜೊತೆಗಿದ್ದಾರೆ ಎಂಬ ಅರಿವಾದ ಕೂಡಲೇ ಅವರಿಗೂ ನನಗಿಂತ ಹೆಚ್ಚು ಕಂಫರ್ಟ್ ಕೊಟ್ಟಿದ್ದೇನೆ. ಆದರೆ ಆ ಕಂಫರ್ಟ್ ನಲ್ಲಿ ಕೂರಲು ಇಷ್ಟವಿಲ್ಲದೇ ಇರುವವರು ಇರಬಾರದ ಕಾರಣ ಹುಡುಕಿ ಜಾಗ ಖಾಲಿ ಮಾಡಿದ್ದಾರೆ. ತಪ್ಪಿನ ಅರಿವಾದವರು ಹೋದಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ.

ಬಾರದೇ ಇರುವವರಿಗೆ ನಾನು ಎಂದಿನಂತೆ ಕಾಯುತ್ತಿರುತ್ತೇನೆ. ನನ್ನದಲ್ಲದ ತಪ್ಪಿಗೆ ನನ್ನಿಂದ ದೂರವಾದವರು ನನ್ನ ಅರ್ಥ ಮಾಡಿಕೊಂಡು ಮತ್ತೆ ವಾಪಸ್ ಬಂದೇ ಬರುತ್ತಾರೆ ಎಂಬ ಭರವಸೆಯೊಂದಿಗೆ. ನನ್ನ ತಪ್ಪೇನು ಎಂದು ಕುಳಿತು ಯೋಚಿಸಲು ಆರಂಭಿಸಿದರೆ ನನಗಿಂತ ನನ್ನ ಜೊತೆ ಸಿಟ್ಟು ಮಾಡಿಕೊಂಡು ಹೊರಟವರ ತಪ್ಪೇ ಹೆಚ್ಚಿರುತ್ತದೆ. ಆದರೂ ಮೌನವಾಗಿರುತ್ತೇನೆ. ಯಾಕೆಂದರೆ ನನ್ನ ಜೊತೆಗಿರುವವರ ಮನಸು ಅವರಿಗೆ ಇಷ್ಟವಿದ್ದೋ, ಇಲ್ಲದೆಯೋ ಎಲ್ಲವನ್ನೂ ಮಾಡಿಸಿರುತ್ತದೆ. ಅವರ ಮನಸ್ಸಿಗೆ ಸ್ವಂತಿಕೆ ಇಲ್ಲದೇ ಇದ್ದಾಗ, ನನ್ನನ್ನು ದೂರ ಮಾಡು ಎಂದು ಇನ್ಯಾರೋ ಊದಿದ ಪೀಪಿಗೆ ಕಿವಿಗೊಡುವವರಿಗೆ ನಮ್ಮ ಭಾವಗಳು ಅರ್ಥವಾಗುವುದೇ ಇಲ್ಲ. ಆದರೆ ಕೊನೆಗೊಂದು ದಿನ ಇದೆಲ್ಲಾ ಗೊತ್ತಾಗಿ ಅವರು ವಾಪಸ್ ಬಂದಾಗ ಅಷ್ಟೇ ಅಪ್ಯಾಯಮಾನತೆಯಿಂದ ಸ್ವೀಕರಿಸಿದ್ದೇನೆ.

ಬದುಕಿನಲ್ಲಿ ನಾನು ಯಾವುದನ್ನು ಕಳೆದುಕೊಂಡಾಗಲೂ ನನ್ನ ತಪ್ಪಿದೆಯಾ ಎಂದು ಯೋಚಿಸಿ, ತಪ್ಪಿದ್ದರೆ ನಾನೇ ಮುಂದೆ ಹೋಗಿ ದೂರವಾಗಲು ಹೋದವರನ್ನು ಹತ್ತಿರಕ್ಕೆಳೆಯುತ್ತೇನೆ. ಇದನ್ನೆಲ್ಲವನ್ನೂ ಮೀರಿ ನಾನಿರುವುದೇ ಹೀಗೆ ಎಂದು ಹೊರಟವರನ್ನು ದೂರದಲ್ಲೇ ನಿಂತು ಹಾರೈಸಿದ್ದೇನೆ. ಯಾವುದೇ ಕ್ಷಣದಲ್ಲಿ ಅವರು ವಾಪಸ್ ಬರಬಹುದು ಎಂಬ ಸದಾಶಯದೊಂದಿಗೆ...

ಅಷ್ಟಕ್ಕೂ ಜೊತೆಗಿದ್ದವರ ಮನಸಿನ ಭಾವಗಳು ಬದಲಾಗುವುದೇಕೆ ಎಂಬ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಗುತ್ತಿಲ್ಲ. ಇಷ್ಟು ಮುಗಿಸುತ್ತಿದ್ದಂತೆ ಮೊಬೈಲ್ ರಿಂಗ್ ಆಯ್ತು. ನನ್ನ ಬಿಟ್ಟು ಹೋದವರಿರಬಹುದಾ ಎಂಬ ನಿರೀಕ್ಷೆಯೊಂದಿಗೆ ಫೋನ್ ಎತ್ತಿ ಕಿವಿಗಿಡುತ್ತೇನೆ..

No comments: