Sunday, April 21, 2013

ಗಮ್ಯ ಹುಡುಕುತ್ತಾ ನಡುವೆ ವಿರಾಮದಲಿ...!!

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ


ನಿಸಾರ್ ಅಹಮದ್ ಅವರ ಈ ಸಾಲುಗಳನ್ನು ಈ ಹೊತ್ತಿಗೆ ಕೇಳುತ್ತಾ ಕುಳಿತರೆ ಮನದಲ್ಲಿ ಆದೇಕೋ ಒಂಥರಾ ಭಾವ. ಏನಾಗಿದೆ, ಏನಾಗ್ತಿದೆ. ಒಂದೂ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ಮನಸೇನು ಹಂಬಲಿಸುತ್ತಿದೆ ಅದೂ ಅರ್ಥ ಆಗುತ್ತಿಲ್ಲ.

ಬಹುಶಃ ಕಳೆದ ಬಾರಿ ನಾನು ಬರೆದಾಗ ನಾನೊಂದು ಗಮ್ಯದ ಬಗ್ಗೆ ಬರೆದಿದ್ದೆ. ಗಮ್ಯ ಸುಂದರವಾಗಿತ್ತು. ಗಮ್ಯದ ಹಾದಿಯನ್ನೂ ಚೆನ್ನಾಗಿಯೇ ಸವೆಸುತ್ತಿದ್ದೆ. ಆದರೆ ಹೊರಡುವ ಮೊದಲೇ ಹೇಳಿದ್ದೆ ಇದು ದುರ್ಗಮ ಹಾದಿ. ಕ್ಷಣ ಕ್ಷಣಕ್ಕೂ ಇಲ್ಲಿ ಎಲ್ಲವೂ ನನ್ನನ್ನು ಹೊಸಕಿ ಹಾಕುತ್ತದೆ. ಆದೇ ರೀತಿ ಆಗುತ್ತಿದೆ. ಆದರೆ ಗಮ್ಯ ಗಮ್ಯವೇ. ನಾನದನ್ನು ತಲುಪಿಯೇ ತಲುಪುತ್ತೇನೆ ಎಂಬ ಪರಿಪೂರ್ಣ ಆತ್ಮವಿಶ್ವಾಸ ನನಗಿದೆ. ತುಂಬಾ ದಿನಗಳ ಕಾಲ ಈ ಕಡೆ ತಲೆ ಹಾಕದೇ ಗಮ್ಯದ ಬಗ್ಗೆ ಗಮನ ಹರಿಸೋಣ ಅಂತಿದ್ದೆ. ಆದರೆ ಮನಸ್ಯಾಕೋ ಕೇಳುತ್ತಿಲ್ಲ. ಏನಾದ್ರೂ ಬರೀಬೇಕು ಎಂದು ತುಡಿಯುತ್ತಿದೆ. ಅದಕ್ಕೆ ಈ ಬರವಣಿಗೆ. ಇದೊಂದು ಕಾಲಹರಣದ ಬರಹ. ಆದರೆ ಕೆಲವು ನಿಮ್ಮ ಜೀವನದಲ್ಲಿ ಆಗಿರಬಹುದು.

ಮನದಲ್ಲಿ ಅದೇಕೋ ದುಗುಡ, ಮನದಲ್ಲಿ ಅದೇನೋ ಯೋಚನೆ. ಈ ಎಲ್ಲವನ್ನೂ ಮೆಟ್ಟಿ ನಿಂತು ನಾನು ಹೊರಗೆ ಬರುತ್ತೀನಾ? ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನ್ಯಾವತ್ತೂ ನನ್ನ ಆತ್ಮೀಯರನ್ನು ವಂಚಿಸಿಲ್ಲ. ಆದರೆ ಅವರು ವಂಚನೆಗೊಳಗಾಗುತ್ತಾರೆ ಎಂದು ಗೊತ್ತಾದಾಗಲೂ ನಾನು ಅವರಿಗೆ ಅದನ್ನು ಹೇಳದಿದ್ದರೆ ನಾನೊಬ್ಬ ಆತ್ಮೀಯ ಅಂತ ಹೇಳಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಅಂತಾ ಅವರಿಗೆ ನಾನು ಎಲ್ಲವನ್ನೂ ಹೇಳಿದ್ದೇನೆ. ಇದು ನಾನು ಪಿಯುಸಿ ಮುಗಿದಾಗಿನಿಂದಲೂ ರೂಢಿಸಿಕೊಂಡಿರೋ ಪದ್ಧತಿ. ಕೆಲವರಿಗೆ ಇದು ಇಷ್ಟವಾಗಿದೆ. ಹೆಚ್ಚಿನವರಿಗೆ ಕಷ್ಟವಾಗಿದೆ.

ಅಂದಿನಿಂದಲೂ ನಾನು ಹಲವು ಸಂಗತಿಗಳನ್ನು ಈಗಲೂ ನಾನು ನನ್ನಲ್ಲೇ ಇಟ್ಟುಕೊಂಡು ಬಿಟ್ಟಿದ್ದೇನೆ. ಅದೊಂಥರಾ ಚಿದಂಬರ ರಹಸ್ಯ. ಪ್ರಾಣ ಹೋದರೂ ನಾನು ಗುಟ್ಟು ಬಿಟ್ಟು ಕೊಡಲ್ಲ. ಆದರೆ ನಾನು ಸರಿ ಎಂಬ ಭಾವದಲ್ಲಿ ನಮಗೇ ಅಂತಹ ಒಂದು ನವಿರಾದ ಮೋಸವಾದಾಗ ನನಗೆ ಅದು ತಾಕಿಲ್ಲೆಂದು ಹೇಳುವವರಿಗೆ ನಾವೇನು ಹೇಳಲು ಸಾಧ್ಯ ಅಥವಾ ಅದು ನಮ್ಮ ಆತ್ಮೀಯರು ಅನಿಸಿಕೊಂಡವರಿಗೆ ತಾಕಲ್ಲ ಎಂದರೆ ನಾನೇನು ಮಾಡಲು ಸಾಧ್ಯ ಹೇಳಿ.

ಹೀಗೆ ನನ್ನ ಯೋಚನಾ ಲಹರಿ ಮುಂದುವರಿಯುತ್ತದೆ. ನಾನು ಯಾವತ್ತೂ ಬೆಳಕಿಗೆ ಹಾಗೂ ಕತ್ತಲಿಗೆ ಹೆದರಿದವನಲ್ಲ. ಆದರೆ ಬೆಳಕಿನ ಹೊತ್ತಲ್ಲೇ ನಮ್ಮ ಕಣ್ಣನ್ನು ಕತ್ತಲಾಗಿಸಲು ಯಾರಾದರೂ ಬಂದರೆ ಅದಕ್ಕೆ ನಾನು ಹೆದರುತ್ತೇನೆ. ಆದರೆ ಅದು ನನಗೆ ಗೊತ್ತಾಗೇ ಆಗುತ್ತೆ. ಬಹುಶಃ ಇದುವರೆಗೆ ನಾನು ನನ್ನ ಆತ್ಮೀಯರೆನಿಸಿಕೊಂಡ ಕೆಲವರನ್ನು ಕಳೆದುಕೊಳ್ಳುವ ಹಂತದವರೆಗೆ ಬಂದಿದ್ದು ಇದೇ ಕಾರಣಕ್ಕೆ. ಕೆಲವರು ತಾವು ತಪ್ಪು ಮಾಡುತ್ತಾ ತಾವೇನೂ ಮಾಡೇ ಇಲ್ಲವೇನೋ ಎಂಬಂತೆ ಮುಂದೆ ಬಂದು ನಿಂತರು. ಆತ್ಮವಿಶ್ವಾಸವಿಲ್ಲದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರನ್ನು ನಾವೇನು ಮಾಡಲು ಸಾಧ್ಯ ಹೇಳಿ. ಎಲ್ಲರನ್ನೂ ನಾನು ಅವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಹೇಳಿದಾಗ ಎಲ್ಲರೂ ಬೆರಗಾಗಿದ್ದಾರೆ. ನಮಗಿದೆಲ್ಲಾ ಗೊತ್ತಿರಲಿಲ್ಲ ಎಂದವರೂ ಇದ್ದಾರೆ.

ನಾನ್ಯಾವತ್ತೂ ಆತ್ಮೀಯರ ಆಯ್ಕೆಯಲ್ಲಿ ತುಂಬಾ ಚೂಸಿ. ಆದರೆ ಒಂದು ಸಾರಿ ಹಚ್ಚಿಕೊಂಡು ಬಿಟ್ಟರೆ ಮತ್ಯಾವತ್ತೂ ಅವರನ್ನು ಬಿಟ್ಟು ಕೊಟ್ಟೇ ಇಲ್ಲ. ಅವರಾಗೇ ಬಿಟ್ಟು ಹೋಗುತ್ತೇವೆ ಅಂದ್ರೂ ಮಧುರ ಸಂಬಂಧವೊಂದರ ಉಳಿಕೆಗಾಗಿ ನಾನು ಕಾಂಪ್ರಮೈಸ್ ಆಗ್ತೀನಿ. ಹೀಗಂತ ಹೇಳಿ ನಾನು ತಪ್ಪು ಮಾಡೇ ಇಲ್ವಾ. ನಾನಿಲ್ಲ ವೆಂದರೂ ನನ್ನ ಮನಸು ಒಪ್ಪಿಕೊಳ್ಳಲ್ಲ. ತಪ್ಪುಗಳಾದಾಗ ನಾನೇ ಅವರ ಮೊಗದಲ್ಲಿ ಒಂದು ನಗು ಅರಳುವವರೆಗೆ ಸುಮ್ಮನಿರಲ್ಲ. ಸಾರಿ ಕೇಳ್ತೀನಿ, ಕಾಲೆಳೆಯುತ್ತೀನಿ. ಕೊನೆಗೆ ಅವರೇ ಒಂದು ಥ್ಯಾಂಕ್ಸ್ ಅಂದು ಹೋಗಿ ಬಿಡ್ತಾರೆ. ಆ ಥ್ಯಾಂಕ್ಸ್ ನಲ್ಲಿ ಒಂದು ಪ್ರಾಮಾಣಿಕತೆಯಿದೆ ಎಂದು ನನಗನಿಸಿದರೆ ನನ್ನ ಕಣ್ಣು ತುಂಬಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ನನ್ನಲ್ಲೂ ಒಂದು ಸಂವೇದನೆ ಅನ್ನೋದು ಬಾಕಿ ಉಳಿದಿದೆ.

ಗಮ್ಯದ ಕಡೆ ಲಕ್ಷ್ಯ ಕೊಟ್ಟು ಹೊರಟ ನಾನೆಂಬ ದಾರಿ ಹೋಕನಿಗೆ ಹಾದಿಯಲ್ಲಿ ಹಲವು ಎಡರು ತೊಡರುಗಳು ಸಿಕ್ಕಿವೆ. ಯಾಕೋ ಈ ದಾರಿಯಲ್ಲಿ ನಾನು ಹೋಗುತ್ತಿರುವಾಗ ಸುಮಾರು ವರ್ಷಗಳ ಹಿಂದೆ ಹಾಗೂ ಇತ್ತೀಚೇಗೆ ನಡೆದ ಒಂದಷ್ಟು ವಿಷಯಗಳು ನೆನಪಾದವು. ಅದಕ್ಕೆ ಗಮ್ಯದ ಮಧ್ಯೆ ಒಂದು ನಿಲ್ದಾಣದಲ್ಲಿ ಕುಳಿತು ಬರೆಯುತ್ತಿದ್ದೇನೆ. ನಿಮಗಿಷ್ಟವಾಗಿದೆ ಎಂಬ ಭರವಸೆಯೊಂದಿಗೆ ವಿರಮಿಸುವೆ.

No comments: