Sunday, June 08, 2014

ಹತ್ತಿರದ ಸಂಬಂಧಿ ದೂರವಾದ ಬಗೆ

ದುಕು, ಮನಸು, ಸುಖ, ದುಃಖ. ನಿನ್ನೆ ಕಣ್ಣಲ್ಲಿ ಆನಂದ ಭಾಷ್ಪ. ಇಂದು ಮನಸ್ಸನ್ನು ಕಾಡಿದ ದುಗುಡದಿಂದ ಬಂದ ನಿಜವಾದ ಕಣ್ಣೀರು. ಯಾವುದನ್ನು ನನ್ನ ಎದೆಗೊತ್ತಲಿ, ಯಾವುದನ್ನು ನಾನೇ ದೂರ ಮಾಡಲಿ. ಕಣ್ಣೀರು ಹೇಗೆ ಬಂದರೂ ಮುಂದಿರುವವರಿಗೆ ಅರ್ಥವಾಗುತ್ತದೆ. ಅದಕ್ಕೆ ಕಣ್ಣನ್ನು ಓದುವ ಸಾಮರ್ಥ್ಯ ಬೇಕು.
 
ಮಾನವ ಸಂಬಂಧ ಎಂದರೇನು..? ನಮಗೆ ಸಿಗುವ ಕ್ಷಣಿಕ ಸುಖ, ಅಪ್ಪ-ಅಮ್ಮ ಮೊಗೆದು ಕೊಡುವ ಪ್ರೀತಿ ಎಲ್ಲವನ್ನೂ ಕುರುಡಾಗಿಸುತ್ತಾ..? ಸಂಬಂಧಗಳಲ್ಲಿ ನಂಬಿಕೆ ಹೇಗೆ ಹುಟ್ಟಬೇಕು. ಕೆಲವೊಂದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೊರಡುವ ಹೊತ್ತಿಗೆ ನಾನು ಅನಾಥವಾಗಿ ಏಕಾಂಗಿಯಾಗಿ ನಿಂತ ಅನುಭವ. ತುಂಬಾ ನಂಬಿಕೆ ಹುಟ್ಟಿಸಿದವರು ಕಾಲ ಕಸವಾಗಿ ಮಾಡಿದ್ದಾರೆ. ಇವರು ಯಾವುದಕ್ಕೂ ಯೋಗ್ಯರಲ್ಲ ಎನಿಸಿಕೊಂಡವರು ನಮ್ಮನ್ನು ಬಿಟ್ಟು ಹೋದವರಿಗೆ ನಮ್ಮಿಂದ ಸಿಕ್ಕಿದ್ದ ಆಪ್ತತೆಯನ್ನು ಅವರಾಗೇ ಪಡೆಯಲು ಯತ್ನಿಸುತ್ತಾರೆ. ಯಾಕೆ ಹೀಗೆಂದು ಯೋಚಿಸಿದರೆ ಒಂದೂ ಗೊತ್ತಾಗುತ್ತಿಲ್ಲ. ಇನ್ನು ಮುಂದಿನದ್ದು ನಾನು ಆತ್ಮೀಯರೊಬ್ಬರ ಮುಂದೆ ಕುಳಿತಾಗ ಅವರು ಹೇಳಿದ ಮಾತು.
 
ನಾಲ್ಕೈದು ವರ್ಷ ಹಿಂದೆ ಸಿಕ್ಕಿ ಜೊತೆಗಿದ್ದವರು ಇಂದು ನೀನ್ಯಾರೋ ಎಂದು ಕೇಳುತ್ತಿದ್ದಾರೆ. ಎದುರಿಗೆ ನಿಂತಾಗ ಕೇಳುವ ನೇರ ಪ್ರಶ್ನೆಗೆ ಕಣ್ಣಲ್ಲೇ ಕಣ್ಣಿಟ್ಟು ಉತ್ತರ ಹೇಳಲು ಸಾಧ್ಯ ಇಲ್ಲದೇ ಇದ್ದವರು ತಾವು ಮಹಾನ್ ಪ್ರಚಂಡ ಬುದ್ಧಿಶಾಲಿಗಳು ಎಂದು ಕೊಳ್ಳುತ್ತಾರೆ. ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಾರೆ. ತಮ್ಮ ಜೊತೆಗಿರುವವರು ತಮ್ಮನ್ನು ಹೀನಾಯವಾಗಿ ನಡೆಸಿಕೊಂಡರೂ, ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಮಾತು ಹೇಳಿದರೂ ಸಹಿಸಿಕೊಂಡು ಯಾವುದೋ ಒಂದು ಹೆಸರಿಲ್ಲದ ಸಂಬಂಧ ಹೇಳಿಕೊಂಡು, ವಾಂಛೆಗೆ ಬಲಿಯಾಗಿ ತಮ್ಮನ್ನು ಅರ್ಪಿಸಿಕೊಂಡು ಆದರ್ಶದ ಮಾತುಗಳನ್ನಾಡುತ್ತಾರೆ.
 
ಜೊತೆಗಿದ್ದವರನ್ನು ಬಲಿಕೊಟ್ಟವರು ಹೇಳಿದ ಮಾತನ್ನು ಒಂದು ದಿನ ಕೇಳಿಸಿಕೊಂಡಿದ್ದರೆ, ನನ್ನ ಜನ್ಮಕ್ಕೆ ಕಾರಣವಾದ ಅಪ್ಪ-ಅಮ್ಮ ಎಂಬ ಎರಡು ಮುದ್ದು ಜೀವದ ಯೋಚನೆಯಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿದ್ದು ಒಂದೂರು, ಕೆಲಸ ಕೊಟ್ಟಿದ್ದು ಒಂದೂರು. ಅಂತಹ ಒಂದು ಊರಲ್ಲಿ ಏನು ನಡೆದರೂ ಮನೆಯಲ್ಲಿ ಯಾರಿಗೂ ಗೊತ್ತಾಗಲ್ಲ ಎಂದು ಹೊರಟವರಿಗೆ ಎಂದೋ ಒಂದು ದಿನ ಜ್ಞಾನೋದಯವಾಗಿ ಅಪ್ಪ-ಅಮ್ಮನಿಗೆ ನಾನು ಮೋಸ ಮಾಡಿದ್ದೇನಾ ಎಂದು ಪ್ರಶ್ನಿಸಿಕೊಳ್ಳುತ್ತಾರೆ. ಉತ್ತರ 'ಹೌದು' ಎಂದು ಗೊತ್ತಿದ್ದರೂ ಮನಸ್ಸಿನ ಕೆರಳಿದ ಭಾವನೆಗಳು ಅವೆಲ್ಲವನ್ನೂ ಗೌಣವಾಗಿಸುತ್ತವೆ. ಅಲ್ಲಿ ಅಪ್ಪ ಅಮ್ಮನಿಗೆ ಮತ್ತದೇ ಆತ್ಮವಂಚನೆ. ಮುದ್ದು ಕಂದಮ್ಮಗಳ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಒಂಚೂರು ಒಳ್ಳೆಯ ಮಾತು ಹೇಳಿದರೆ ನೀನ್ಯಾವನೋ ಬಡವಾ ಅಂತಾ ಪ್ರಶ್ನೆ.
 
ಕಷ್ಟ ಕಾಲದಲ್ಲಿ ಕೇಳಲು ಕಿವಿಯಿತ್ತು ಎಂದುಕೊಂಡು ಮನದ ಸಂಕಟಗಳನ್ನೆಲ್ಲಾ ಹೇಳಿಕೊಂಡಾಗ ನಾ ಜೊತೆಗಿದ್ದೀನಿ ಎಂಬ ಭಾವ ನೀಡಿದವರು, ಅವರನ್ನು ಹಳ್ಳಕ್ಕೆ ಹಿಡಿದು ದೂಡಿದಾಗಲೂ ಅವರ ಬಗ್ಗೆ ಒಂದಕ್ಷರ ಮಾತು ಬರಲ್ಲ. ಅವರು ದೇವತಾ ಸ್ವರೂಪಿಗಳು. ಕೆಲವು ವಿಷಯಗಳು ಬಂದಾಗ ಎಲ್ಲವೂ ಮೌನ, ಮೌನ ಮೌನ. ಇಷ್ಟಪಟ್ಟವರು ಕೇಳಿದರೆ ಭದ್ರಕಾಳಿಯ ರೂಪ, ಇಷ್ಟ ಪಡದೇ ಇರುವವರು ತಮ್ಮ ತೆವಲಿಗೆ ಕೇಳಿದರೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಕೇಳಿಸಿಕೊಂಡವರೋ ಗಂಟಲಿಗೆ ಎಣ್ಣೆ ಬಿದ್ದಾಗ ಕೇಳಿಸಿಕೊಂಡಿದ್ದೂ ಅಲ್ಲದೆ ಒಂಚೂರು ಒಗ್ಗರಣೆಯನ್ನೂ ಸೇರಿಸಿ ಮಾತನಾಡುತ್ತಾರೆ. ಎಲ್ಲವನ್ನೂ ಕೇಳಿಸಿಕೊಂಡಿದ್ದೇನೆ, ಮೌನವಾಗಿದ್ದೇನೆ.
 
ಎಷ್ಟೋ ಸಾರಿ ಕಠೋರ ಸತ್ಯದ ಅರಿವಿದ್ದರೂ, ಎರಡಲಗಿನ ಕತ್ತಿಯ ನಡುವೆ ನಾನಿದ್ದೀನಿ ಎಂದು ಗೊತ್ತಿದ್ದರೂ ಜೊತೆಗಿರುವವರಿಗೆ ನೋವಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಕಾರಣ ಒಂದೇ, ಸಂಬಂಧ ಒಳ್ಳೆಯದಿದ್ದಾಗ ನೀವು ನೀಡಿದ ಪ್ರೀತಿ. ಆ ಪ್ರೀತಿ ನಾನು ಯಾರ ಬಳಿ ಹೋದರೂ ಸಿಗಲ್ಲ. ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಿಲ್ಲ. ನಿಮ್ಮ ಮೇಲಿನ ಪ್ರೀತಿ ಅದು ಮೊದಲ ಭೇಟಿಯಾಗಿ ಆತ್ಮೀಯರಾಗುವಾಗ ಎಷ್ಟಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ಇದೆ. ಮುಂದೆಯೂ ಇರುತ್ತದೆ.
 
ಯಾರೋ ಹೇಳಿದ ಮಾತು ಕೇಳಿ ಅದರ ಬಗ್ಗೆ ಒಂದು ಸಣ್ಣ ಸ್ಪಷ್ಟನೆಯನ್ನೂ ಕೇಳದೇ ನಿರ್ಗಮಿಸೋ ನಿಮಗೆ ಒಳ್ಳೆಯದಾಗಲಿ. ಒಂದು ಕಾಲದಲ್ಲಿ ಕ್ಯಾಕರಿಸಿ ಉಗಿದೋರನ್ನು ಅಪ್ಪಿ ಮುದ್ದಾಡುವಾಗ ಎಲ್ಲರಿಗೂ ಒಂದು ನೆನಪಿರಬೇಕು. ಒಂದೊಮ್ಮೆ ಕಾಲ ಬಂದೇ ಬರುತ್ತದೆ. ಅಂದು ಎಲ್ಲವನ್ನೂ ತಿರುಗಿಸಿ ಹೇಳುವ ಮನಸ್ಸು ಹೇಳಿದ್ದನ್ನು ಕೇಳಬೇಕಾಗುತ್ತದೆ. ಆ ಅಸಹ್ಯ ಯಾರಿಗೂ ಬಾರದೇ ಇರಲಿ. ನನ್ನ ದ್ವೇಷಿಸಿದ ಎಲ್ಲರಿಗೂ ಒಳ್ಳೆಯದಾಗಲಿ. ಕೆಲವು ಸತ್ಯಗಳು ನನ್ನೊಂದಿಗೇ, ನನ್ನಲ್ಲೇ, ಮೂರನೇಯವರಿಗೆ ಗೊತ್ತಾಗದೇ ಮುಗಿದು ಹೋಗಲಿ. ಒಂದು ಸಂಬಂಧ ಮತ್ತೆ ಹುಟ್ಟುವ ಶುಭ ಘಳಿಗೆ ಅಂದ್ರೆ ಇದೇನಾ..?
 
(ಯಾರೋ ಆತ್ಮೀಯರೊಬ್ಬರು ತುಂಬಾ ಭಾವುಕರಾಗಿ ಮುಂದೆ ಕುಳಿತು ಹೇಳಿದ ಮಾತುಗಳಿದವು. ಇಲ್ಲಿರುವ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಮಾನವ ಸಂಬಂಧಗಳಲ್ಲಿ ನಂಬಿಕೆ ಇಟ್ಟುಕೊಂಡಿರುವವನಾಗಿದ್ದುಕೊಂಡು ಅವರು ಹೇಳಿದ ಮಾತನ್ನು ಈ ಪೋಸ್ಟ್ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ. ಓದಿದ್ದಕ್ಕೆ ಧನ್ಯವಾದ.)