ಪಿಟೀಲು ಮಾಂತ್ರಿಕನ ಪಿಟೀಲು ಮೌನಕ್ಕೆ ಶರಣಾಗಿದೆ. ರುಪಾಯಿ ಅಗಲದ ಕುಂಕುಮ ಬೊಟ್ಟು ಧರಿಸಿ, ಚಿನ್ನದ ಮಾಲೆ ಧರಿಸಿ ಪಿಟೀಲಿನ ತಂತಿಯ ಮೈಮೇಲೆ ಕೈಯಾಡಿಸಿದರೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದ ವಿಶ್ವ ವಿಖ್ಯಾತ ವಯಲಿನ್ ಮಾಂತ್ರಿಕ ಕುನ್ನಕುಡಿ ಆರ್. ವೈದ್ಯನಾಥನ್ ಸೋಮವಾರ ರಾತ್ರಿ ೮.೪೫ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅಲ್ಪ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ೭೫ ವರ್ಷ ಪ್ರಾಯದ ಕುನ್ನಕುಡಿ ಅವರು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
೨೦೦೫ರಲ್ಲಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಕುನ್ನಕುಡಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ)ಯಲ್ಲಿಯೂ ಅವರ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿದ್ದವು. ರಾಜ್ಯದ ಬೆಂಗಳೂರು, ಮಂಗಳೂರು, ಭದ್ರಾವತಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಅವರು ಕಾರ್ಯಕ್ರಮಗಳನ್ನು ನೀಡಿದ್ದರು.
ಇಂತಹ ಒಬ್ಬ ವಿಶ್ವ ವಿಖ್ಯಾತ ಕಲೆಗಾರನ ನಿಧನದ ಸುದ್ದಿಯನ್ನು ಬಿತ್ತರಿಸಲು ಯಾವುದೇ ನ್ಯೂಸ್ ಚಾನೆಲ್‌ಗಳು ಮುಂದಾಗಿಲ್ಲ ಎನ್ನುವುದು ದುಃಖದ ವಿಷಯ. ರಾತ್ರಿ ೯ರ ವೇಳೆಗೆ ಅವರು ನಿಧನ ಹೊಂದಿದ್ದರೂ ಬೆಳಗ್ಗಿನ ಜಾವದವರೆಗೂ ಯಾವುದೇ ನ್ಯೂಸ್ ಚಾನೆಲ್‌ಗಳಲ್ಲೂ ಬ್ರೇಕಿಂಗ್ ನ್ಯೂಸ್ ಬಿಡಿ, ಸುದ್ದಿಯ ಒಂದೇ ಒಂದು ಸಾಲು ಕಾಣಲೇ ಇಲ್ಲ. ಅನಗತ್ಯ ವಿಷಯಗಳಿಗೆ ಬ್ರೇಕಿಂಗ್ ನ್ಯೂಸ್ ಎಂದು ಹೊಡೆದು ಸದಾ ಕಾಲ ಸುದ್ದಿ ಮಾಡಿ ಸುದ್ದಿಗೆ ವಿಧ ವಿಧದ ಆಯಾಮಗಳನ್ನು ನೀಡುವ ಚಾನೆಲ್‌ಗಳು ಈ ಮಹಾನ್ ಕಲಾಕಾರನ ಸುದ್ದಿಗೆ ಕನಿಷ್ಟ ಪ್ರಾಮುಖ್ಯತೆಯನ್ನೂ ನೀಡಿಲ್ಲ. ಇದು ದಕ್ಷಿಣ ಭಾಗದ ಮೇಲೆ ಚಾನೆಲ್‌ಗಳು ತೋರಿದ ಅವಗಣನೆಯೋ ಇಲ್ಲ, ಯಾವುದೇ ಸುದ್ದಿ ಚಾನೆಲ್‌ಗಳಿಗೂ ಈ ವಿಷಯ ತಿಳಿದಿಲ್ಲವೋ?
ಇರಲಿ, ಪಿಟೀಲು ಸ್ತಬ್ಧವಾಗಿದೆ. ಮಹಾಮಾಂತ್ರಿಕ ಮೂಡಿಸಿದ ತಂತಿಯ ಮಧುರ ನಿನಾದ ಕಿವಿಗಳಲ್ಲಿ ಮೊಳಗುತ್ತಿದೆ. ಕರ್ನಾಟಕ ಸಂಗೀತಕ್ಕೆ ಒಂದು ವಿಶೇಷವಾದ ಅರ್ಥವನ್ನು ಕೊಟ್ಟ ಕುನ್ನಕುಡಿ ಅವರು ಇಂದಿಗೂ ಎಲ್ಲರ ಮನದಲ್ಲಿ ನೆಲೆ ನಿಂತಿದ್ದಾರೆ. ಸ್ತಬ್ಧವಾಗಿರುವುದು ಪಿಟೀಲು ಮಾತ್ರ. ಪಿಟೀಲಿನ ತಂತಿಯ ಕಂಪನ ಈಗಲೂ, ಮುಂದೆಯೂ, ಎಂದೆಂದಿಗೂ ಅನುರಣಿಸುತ್ತಲೇ ಇರುತ್ತದೆ. ಕೇಳುಗರ ಮನತಣಿಸಿದ ಮಾಂತ್ರಿಕರಿಗಿದೋ ಭಾವ ನಮನ.
5 comments:
ಮೈ ಫೀಲಿಂಗ್ಸ್ ನಲ್ಲಿ ಮತ್ತೆ ಸಂಚಲನ
ಸದಾ ಹೀಗೆ.. ಇರಲಿ....
ವೈದ್ಯನಾಥನ್ ಬಗ್ಗೆ..
ಮನ ತಟ್ಟುವ ಸ್ಪಂದನ..
-ಅಲೆಮಾರಿ.
ಕಲಾವಿದರ ನಿಧನ ಸುದ್ದಿಯಾಗದಿರುವುದು ನಿಜಕ್ಕೂ ಬೇಸರ, ಕುನ್ನಕ್ಕುಡಿಯವರನ್ನು ವಯೊಲಿನ್ ಮಾ೦ತ್ರಿಕ ಎನ್ನದೇ ವಯೊಲಿನ್ ತಾ೦ತ್ರಿಕ ಎನ್ನುವುದು ಸೂಕ್ತ. ಅವರ ಕಛೇರಿಗಳನ್ನು ಆಸ್ವಾದಿಸಲು ಕಿವಿಗಳಷ್ಟೇ ಕೆಲಸ ಕಣ್ಣುಗಳಿಗೂ ಇರುತ್ತಿತ್ತು. ಅವರಿಗೆ ವಾದ್ಯದ ಮೇಲಿದ್ದ ಹಿಡಿತ ಅಪಾರ, ಆದರೂ ಮಾಧುರ್ಯ, ಮತ್ತು ಮನೋಧರ್ಮದ ನೆಮ್ಮದಿಯ ಸ೦ಗೀತ ಅವರಿ೦ದಮೂಡಿದುದು ಕಮ್ಮಿ.
ಜಿ೦ಕೆ ಸುಬ್ಬಣ್ಣ, ಪುತ್ತೂರು.
Namasthe. Nanna manasalli idduddane barediddira....dhanyavadagalu nimma sakalika hagu samayochita lekhanakke.
"Uttama samajavannu" nirmisuva "namma" channelgalu indu yavudo talukinalli nadeda ragi mudde sphardeyannu bittarisidavu!
aadare idara bagge ellu dodda suddi illave illa!
Idu namma madhyamagala mattavannu torisuttade.
Mattomme dhanyavadagalondige,
Malavika
ಅಲೆಮಾರಿ,
ಬಂದಿದ್ದಕ್ಕೆ ಸಂತೋಷ.
----
ಜಿ೦ಕೆ ಸುಬ್ಬಣ್ಣ, ಪುತ್ತೂರು,ಆಗಾಗ ಬರುತ್ತಿರಿ.
---
ಮಾಳವಿಕ, ಧನ್ಯವಾದಗಳು. ಇದು ಮಾಧ್ಯಮಗಳ ಇಂದಿನ ಮನೋಸ್ಥಿತಿ. ಬದಲಾದ ಜಗತ್ತಿಗೆ ಬದಲಾವಣೆ ಅಂದರೆ ಇದೇನಾ?
ನೀವು ಯಾಕೆ ನಿರಂತರ ಬರೀತಾ ಇಲ್ಲ?
Post a Comment