Saturday, September 06, 2008

ಕೈ ಹಿಡಿದು ಮುನ್ನಡೆಸಿದವರ ನೆನೆಯುತ್ತಾ...

ಬರವಣಿಗೆ ಯಾಕೆ ಬೇಕು? ಬ್ಲಾಗ್ ಆರಂಭಿಸಿ ಇಷ್ಟು ದಿನವಾದರೂ ಒಂದೇ ಒಂದು ದಿನವೂ ಇಂತಹ ಯೋಚನೆ ಬಂದದ್ದಿಲ್ಲ. ಆದರೆ ಯಾಕೋ ಇಂತಹ ಒಂದು ಯೋಚನೆ ಈಗ ತಲೆ ಕೊರೆಯಲು ಆರಂಭಿಸಿದೆ.

ಯಾಕಾಗಿ ಬರೆಯುತ್ತಿದ್ದೇನೆ? ಯಾರಿಗಾಗಿ ಇಂತಹ ಒಂದು ಕಸರತ್ತು? ಅಷ್ಟಕ್ಕೂ ನಾನಿಲ್ಲಿ ಬರೆದರೆ ಅದನ್ನು ಓದುವವರೆಷ್ಟು? ಓದಿ ಅವರಿಗೆ ಏನಾದರೂ ಪ್ರಯೋಜನವಾಗುತ್ತಾ ಇತ್ಯಾದಿ ಪ್ರಶ್ನೆಗಳು ತಲೆ ಕೊರೆಯಲು ಆರಂಭಿಸುತ್ತವೆ.

ಅಷ್ಟಕ್ಕೆ ಬರೆಯಬೇಕೆಂದು ಅಂದುಕೊಂಡ ವಿಷಯಕ್ಕೆ ಬೇರೇನೋ ಸೇರ್ಪಡೆಯಾಗಿ ಎಲ್ಲವೂ ಕಲಸು ಮೇಲೋಗರವಾಗಿರುತ್ತವೆ.
ಅವುಗಳು ಏನೇ ಇರಲಿ. ಸದ್ಯಕ್ಕೆ ಬರವಣಿಗೆ ಬೇಕು ಅನಿಸ್ತಾ ಇದೆ. ಅದಕ್ಕೆ ಬೇರೆ ಯಾವುದೇ ಕಾರಣಗಳನ್ನು ಹುಡುಕುತ್ತಿಲ್ಲ. ನಾನು ಇಂದು ಇರುವ ವೃತ್ತಿ ಅದಕ್ಕೆ ಕಾರಣವಾಗಿರಬಹುದು. ಅಥವಾ ಸದಾಕಾಲ ನನ್ನ ಬೆನ್ನು ತಟ್ಟಿ ಪ್ರೆತ್ಸಾಹಿದವರು ಇರಬಹುದು. ಎಲ್ಲರೂ ನಾನೇನು ಬರೆಯುತ್ತೇನೆ. ಬರೆಯದಿದ್ದರೆ ಆತನ ಈ ಮೌನಕ್ಕೆ ಕಾರಣವೇನು ಎಂದು ಕಾರಣ ಹುಡುಕುತ್ತಾ ಬರುತ್ತಾರೆ. ಕೆಲವರು ಎಲ್ಲೋ ದೂರ ನಿಂತು ಶುಭ ಹಾರೈಸಿದರೆ ಇನ್ನು ಕೆಲವರು ಅವರ ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸಿ ‘ಪ್ರೀತಿ’ಯ ಧಾರೆಯೆರೆಯುತ್ತಾರೆ. ಅಂಥವರ ನಡುವೆ ಬೆರೆಯುತ್ತಾ, ಕಾಲವನ್ನು ಕಳೆಯುತ್ತಾ, ಅವರ ಕಾಲೆಳೆಯುತ್ತಾ, ಒಂದು ಹೊಡೆತ ಲಭಿಸದಿದ್ದರೆ ಹೊಡೆದು ನಿನ್ನ ಆಸೆ ಪೂರೈಸು ಎಂದು ಬೆನ್ನು ತೋರಿಸುತ್ತಾ ಕಳೆದವರು ತೋರುವ ಪ್ರೀತಿ, ಅದಕ್ಕೆ ನಾವು ತೋರುವ ನಿಷ್ಠೆ ಎಲ್ಲವೂ ಮನಸ್ಸನ್ನು ತಾಕುತ್ತದೆ.

ಕೆಲವೊಂದು ಸಲ ಇವುಗಳೆಲ್ಲಾ ಯಾಕಾಗಿ ಎಂಬ ಪ್ರಶ್ನೆಯೂ ಏಳುತ್ತದೆ. ಆದರೆ ಉತ್ತರ ಹುಡುಕುತ್ತಾ ಹೊರಟಾಗ ಅಗ್ರಜರಾಗಿ ಬೆನ್ನ ಹಿಂದೆ ಬೀಳುವವರು ಕೇವಲ ಬೆರಳೆಣಿಕೆಯ ಸ್ನೇಹಿತರು. ಅವರಿಗೆ ಅವರು ಬಯಸಿದ ಪ್ರೀತಿಯನ್ನು ನಾನು ಕೊಟ್ಟಿದ್ದೇನೋ ಇಲ್ಲವೋ ಎಂದು ಇಂದಿಗೂ ತಿಳಿದಿಲ್ಲ. ಅವರು ಮಾತ್ರ ನಿರೀಕ್ಷೆಗೂ ಮೀರಿದ ಪ್ರೆತ್ಸಾಹವನ್ನು ನೀಡಿ ಸದಾ ಉತ್ಸಾಹದ ಚಿಲುಮೆಯಂತಿರಲು ಬೇಕಾಗುವ ಕೆಲ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಇಂದಿಗೂ ಎನ್ನ ಪಾಲಿಗ ಅಂತಹ ಕೆಲವರೇ ಉತ್ಸಾಹದ ಜೀವಜಲ. ಅವರು ಏನು ಮಾಡಿದರೂ ಮೌನವಾಗಿ ನೋಡುತ್ತಾ ಇರುತ್ತೇನೆ. ತಪ್ಪಾದರೆ ಇದು ಸರಿ ಅಲ್ಲ ಎಂದು ಅವರ ಕಿವಿ ಹಿಂಡಲು ಹೋಗುತ್ತೇನೆ. ಕೆಲವರು ತಪ್ಪಿಸಿ ಹೋಗುತ್ತಾರೆ. ಇನ್ನು ಕೆಲವರು ಅವರಾಗಿಯೇ ಪ್ರೀತಿಯಿಂದ ಕೈ ಹಿಡಿದು ಹೇಳಿದ್ದನ್ನು ಕೇಳುತ್ತಾ ಮುನ್ನಡೆಯುತ್ತಾರೆ. ಜತೆಗೆ ನೀನೂ ಬಾ ಎಂದು ಕೈ ಹಿಡಿದು ಜತೆಯಲ್ಲಿ ನಡೆಯುತ್ತಾರೆ.

ಕಳೆದ ಪೋಸ್ಟ್‌ನಲ್ಲಿ ಬರೆದ ‘ಅವಳು’ ಎಂಬ ಪಾತ್ರ ಕೆಲವರ ಮನ ತಾಕಿದೆ. ಕೆಲವು ಗೆಳೆಯ ಗೆಳತಿಯರು ಫೋನ್ ಮಾಡಿ ಯಾರವಳು, ಇದುವರೆಗೆ ನೀನು ನಮ್ಮ ಜತೆ ಹೇಳದವಳು, ನಮಗೆ ಪರಿಚಯಿಸದವಳು ಎಂದು ಬೆನ್ನ ಹಿಂದೆ ಬಿದ್ದಿದ್ದಾರೆ. ಸ್ವಲ್ಪ ಸಮಯ ಕಾದರೆ ಉತ್ತರ ಸಿಗುತ್ತದೆ ಎಂದು ಹೇಳಿ ಹೇಗಾದರೂ ಮಾಡಿ ತಪ್ಪಿಸಿಕೊಂಡಿದ್ದೇನೆ.

ಏನೇ ಇರಲಿ, ಬರವಣಿಗೆ ಮುಂದುವರೆಯಲೇ ಬೇಕು ಎಂಬ ಹಠಕ್ಕೆ ಬಿದ್ದು ಇದೇ ಮೊದಲ ಬಾರಿಗೆ ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಪೋಸ್ಟ್ ನಿಮ್ಮ ಮುಂದೆ ಇಡುತ್ತಿದ್ದೇನೆ. ಪ್ರೀತಿಯಿಂದ ಒಪ್ಪಿಕೊಳ್ಳುತ್ತೀರಲ್ವಾ?

2 comments:

KRISHNA said...

blog anta maadida mele bareyuttaane irbeku. neevu baredare odoru idde irtaare. yake bareeta illa eega anno thara baribeku. aa thara nim odug balagakke huchchu hidisbeku all the best

ಚಿತ್ರಾ ಸಂತೋಷ್ said...

ಖಂಡಿತಾ ಒಪ್ಪಿಕೊಳ್ಳುತ್ತೇವೆ..ಇನ್ನಷ್ಟು..ಮತ್ತಷ್ಟು..ಒಂದಿಷ್ಟು ಮನತಣಿಸಲು ಬರೆಯುತ್ತಲೇ ಇರಿ..ಶುಭವಾಗಲಿ ನಿಮ್ಮ ಬರಹಲೋಕದ ಪಯಣಕ್ಕೆ..
ಅದೇ ನಿಮ್ ಥರ ನಂಗೂ ಆಗಾಗ ಅನಿಸಿದ್ದುಂಟು. ಎಷ್ಟೋ ಜನರು ಬ್ಲಾಗ್ ಬರೀತಾರೆ..ಓದುಗರು ಅದನ್ನು ಒಪ್ಪಿಕೊಳ್ಳುತ್ತಾರೆ ಕೂಡ.ಇನ್ನು ಕೆಲವರು ಯಾಕಪ್ಪಾ ಬ್ಲಾಗ್ ಅದರಿಂದ ಏನು ಪ್ರಯೋಜನ? ಎಂದು ಮೂದಲಿಸುತ್ತಾರೆ. ಆದರೆ ನಮ್ಮ ಬ್ಲಾಗ್,,ಬೇಕಾದವರು ಓದುತ್ತಾರೆ..ಯಾರು ಓದಬೇಕೆಂದು ನಾವು ಬರೆಯುತ್ತಿಲ್ಲ..ಓದುವವರು ಓದುತ್ತಾರೆ ..ನಮ್ ತೃಪ್ತಿಗೆ ನಾವು ಬರೆಯುತ್ತೇವೆ. ಮುಂದುವರಿಯಲಿ...ನಿಮ್ಮ ಬರಹ..
-ಚಿತ್ರಾ