Saturday, February 16, 2008

ಜೀವನವೇ ನಿನ್ನ ‘ಪ್ರೀತಿ’ಯಲಿದೆ!

ಪ್ರೇಮಿಗಳ ದಿನ. ವ್ಯಾಲೆಂಟೈನ್ಸ್ ಡೇ. ಕೇಳಿದಾಗಲೇ ಯುವಕ ಯುವತಿಯರ ಮನ ಪುಳಕಗೊಳ್ಳುತ್ತವೆ. ಆ ದಿನ ಏನೋ ಪಡೆದುಕೊಳ್ಳುತ್ತೀವಿ ಎನ್ನುವ ಭಾವಪ್ರಾಪ್ತಿಯಲ್ಲಿರ್‍ತಾರೆ ಹಲವರು. ಅಷ್ಟಕ್ಕೂ ಪ್ರೀತಿ ಎನ್ನುವುದು ಕೇವಲ ಒಂದೇ ದಿನದ ಮಟ್ಟಿಗೆ ಆಚರಿಸಿದರೆ ಮುಗಿಯಿತೇ. ಖಂಡಿತಾ ಇಲ್ಲ. ಆದರೂ ಆ ದಿನ ಉಂಟು ಮಾಡುವ ನಿವೇದನೆಗಳು ಎಲ್ಲರ ಮನ ತಾಕುತ್ತವೆ.
ಅಲ್ಲಿ ಪ್ರೇಮಿಯೊಬ್ಬನ ಹಪಹಪಿಯಿದೆ. ಅವನ ಎದೆಗೂಡಿನಲ್ಲಿ ಹುಟ್ಟಿದ ಪ್ರೀತಿ ಅವಳ ಹೃದಯದಲ್ಲಿ ಭದ್ರವಾಗಿರುತ್ತೆ. ಆತ ಹೇಳುತ್ತಾನೆ, ಆಕೆ ಕೇಳುತ್ತಾಳೆ. ಆಕೆಯ ಗಾಢ ಮೌನವೂ ಆತನಿಗೆ ಸಹನೀಯವಾಗುತ್ತದೆ. ಅಲ್ಲಿ ಭಾವಪ್ರಾಪ್ತಿಯಿರುತ್ತೆ. ಆದರೆ ಸಂಶಯ ಎಂದಿಗೂ ಮನೆ ಮಾಡುವುದಿಲ್ಲ. ಅಂತಹ ಒಂದು ಸಹನೆ ಆ ಪ್ರೀತಿಗಿದೆ.
ಅಷ್ಟಕ್ಕೂ ಈ ಪ್ರೀತಿ ಇಂದು ನಿನ್ನೆಯದಲ್ಲ. ಪುರಾಣಗಳಲ್ಲಿ ಓದಿದರೆ ಪ್ರೀತಿಯದೇ ಮಾತು. ಅತ್ತ ಇಂಟರ್‌ನೆಟ್ ಜಾಲಾಡಿದಾಗಲೂ ಪ್ರಸಿದ್ಧ ವ್ಯಕ್ತಿಗಳು ತಮ್ಮ ಪ್ರೇಯಸಿಯರಿಗೆ ಬರೆದ ಪ್ರೇಮ ಪತ್ರಗಳು ಸಿಗುತ್ತವೆ. ಕೆಲವರು ಯುದ್ಧ ಭೂಮಿಗೆ ಹೋಗುವ ಸಂದರ್ಭದಲ್ಲೂ ತನ್ನ ಪ್ರಿಯತಮೆ ಅಥವಾ ಪತ್ನಿಗೆ ಬರೆದ ಶೃಂಗಾರ ಬರಹಗಳು ಕಾಣಿಸುತ್ತವೆ. ಅಷ್ಟಕ್ಕೂ ಪ್ರೀತಿ ಮಾಡೋದು ತಪ್ಪಾ?
ಖಂಡಿತಾ ಅಲ್ಲ. ಆದರೆ ಒಂದು ಪ್ರೀತಿ ದಿಢೀರ್ ಕಾಮವಾಗಬಾರದು. ಪ್ರೀತಿ ವಿಜೃಂಭಿಸಬೇಕೇ ವಿನಃ ಕಾಮವಲ್ಲ. ಎಂದಿಗೆ ಅಲ್ಲಿ ಕಾಮ ಆರಂಭವಾಗುತ್ತದೋ ಮತ್ತೆ ಕೆಲವೇ ದಿನಗಳಲ್ಲಿ ಆ ಪ್ರೀತಿ ಸಾವನ್ನಪ್ಪುತ್ತವೆ. ಅಷ್ಟಕ್ಕೂ ಪ್ರೀತಿಗೂ ಕಾಮಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನಾವು ಕೆಣಕುತ್ತಾ ಹೋದಂತೆ ಒಂದು ರೋಚಕ ಜಗತ್ತು ತೆರೆದುಕೊಳ್ಳುತ್ತದೆ. ಕೆಲವರು ಪ್ರೀತಿಯ ತುತ್ತ ತುದಿ ಕಾಮ ಎನ್ನುತ್ತಾರೆ. ಆದರೆ ಇನ್ನು ಕೆಲವರು ಪ್ರೀತಿಯಲ್ಲಿ ಕಾಮಕ್ಕೆ ಸ್ಥಾನವಿಲ್ಲ ಎನ್ನುತ್ತಾರೆ. ಇದನ್ನು ಅವರವರ ಭಾವಕ್ಕೆ ತಕ್ಕಂತೆ ಎನ್ನಬಹುದು ನಾವು.
ಪ್ರೀತಿಯಲ್ಲಿ ನಂಬಿಕೆಗೆ ಪ್ರಧಾನ ಸ್ಥಾನ. ಅಲ್ಲಿ ಕಪಟತನಕ್ಕೆ ಎಳ್ಳಷ್ಟೂ ಆಸ್ಪದವಿಲ್ಲ. ಇಬ್ಬರೂ ಅನ್ಯೋನ್ಯವಾಗಿ ಅವರವರ ಬೇಕು ಬೇಡಗಳನ್ನು ಅರಿತುಕೊಂಡು ಬಾಳುವುದೇ ಪ್ರೀತಿಯ ಧ್ಯೇಯವಾಗಬೇಕು. ಅಲ್ಲಿ ಅವರವರ ಭಾವನೆಗಳಿಗೆ ಅರ್ಥ ಸಿಗಬೇಕು. ಇಬ್ಬರೂ ಒಂದು ರೀತಿಯ ಗೌರವ, ಆದರಗಳಿಂದ ಬದುಕಬೇಕೇ ವಿನಃ ಯಾರೋ ನಾಲ್ಕು ಜನ ನಮ್ಮನ್ನು ನೋಡಿ ಅಸೂಯೆ ಪಡಲಿ ಎಂಬ ಕಾರಣಕ್ಕಲ್ಲ. ಅಷ್ಟಕ್ಕೂ ಪ್ರೀತಿಯಲ್ಲಿ ಇಬ್ಬರಿಗೆ ಮಾತ್ರ ಸ್ಥಾನ. ಮೂರನೇ ವ್ಯಕ್ತಿಯ ಅತಿಕಾಯ ಪ್ರವೇಶವಾದ ಕೂಡಲೇ ಪ್ರೀತಿ ಸಾಯುತ್ತೆ ಎನ್ನುತ್ತಾರೆ ಅರಿತವರು. ಆದರೆ ಪರಸ್ಪರ ನಂಬಿಕೆ ಎಲ್ಲಿಯವರೆಗೆ ನಮ್ಮ ಮನಸಿನಿಂದ ದೂರಾಗುವುದಿಲ್ಲವೋ ಅಲ್ಲಿಯವರೆಗೆ ಪ್ರೀತಿಗೆ ಸಾವಿಲ್ಲ. ಅಷ್ಟಕ್ಕೂ ನೈಜ ಪ್ರೀತಿಗೆ ಸಾವಿಲ್ಲ. ಅದು ಚಿರಂತನ, ನಿರಂತರ, ಹಿಡಿದಿಟ್ಟರೂ ನಿಲ್ಲದ ನೀರಿನ ಹಾಗೆ.
ಆದರೆ ಪ್ರೀತಿಗೋಸ್ಕರ ಒಂದು ದಿನ ಬೇಕೇ ಎಂದು ಕೇಳಿದರೆ ಅದರ ಅಗತ್ಯವಿದೆಯೇ ಎನ್ನುವ ಪ್ರಶ್ನೆಯನ್ನೇ ನನ್ನ ಮುಂದೆಯೂ ಬರುತ್ತದೆ. ನನಗೂ ಇಂತಹ ದಿನಗಳ ಮೇಲೆ ನಂಬಿಕೆಯಿಲ್ಲ. ಪ್ರೀತಿಯನ್ನು ಕೇವಲ ಒಂದೇ ದಿನದಲ್ಲಿ ಮುಗಿಸಬಹುದು ಎಂಬ ಮನಸುಗಳಿರುವೆಡೆ ಇಂತಹ ದಿನಗಳಿಗೆ ಅರ್ಥ ಬರಬಹುದೇನೋ?
ನನ್ನ ಪಾಲಿಗೆ ಪ್ರೀತಿಗೋಸ್ಕರ ವಿಶೇಷ ದಿನದಲ್ಲಿ ಅರ್ಥವಿಲ್ಲ. ಒಂದರ್ಥದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಿಸದೇ ಇರುವುದೇ ಉತ್ತಮ ಎನ್ನುವುದು ಮನಸ್ಸಿನ ಮಾತು.
ಪ್ರೀತಿ ಇಲ್ಲದೇ ಬದುಕಬೇಕು ಎಂದರೆ ಅಸಾಧ್ಯ. ಯಾರೇ ಆದರೂ ನಾನು ಯಾರನ್ನೂ ಪ್ರೀತಿಸಿಲ್ಲ, ಪ್ರೀತಿಸುವುದೇ ಇಲ್ಲ ಎಂದರೆ ಅವರೊಳಗೆ ಭಾವನೆಗಳಿಲ್ಲ ಎಂದರ್ಥವಲ್ಲ. ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ. ಅಲ್ಲೂ ಒಂದು ರೀತಿ ಕಣ್ಣಾಮುಚ್ಚಾಲೆ. ಅದಿಲ್ಲದೇ ಇದ್ದರೆ ಅವರಿಗೆ ಸಮಾಧಾನವೂ ಇರಲ್ಲ. ಏನೇ ಇರಲಿ ಪ್ರೀತಿ ಯಾವತ್ತೂ ಇರಲಿ. ಕೇವಲ ಪುಟ್ಟ ಕಾರಣಗಳಿಗೆ ಪ್ರೀತಿ ಸಾಯದಿರಲಿ. ನೀವು ಇರುವ ಜಗವನ್ನೇ ಪ್ರೀತಿಸಿ, ಅದರಲ್ಲೂ ಒಬ್ಬರಿಗೆ ಒಂದು ವಿಶೇಷ ಸ್ಥಾನವಿರಲಿ, ಜತೆಗೆ ಜೀವನವನ್ನೂ ಪ್ರೀತಿಸಿ. ಈ ಎಲ್ಲಾ ಗುಣಗಳು ನಿಮಗೆ ಬರಲಿ. ಅದು ನಾವು ಇರುವ ಜಗತ್ತಿನ ಮೊದಲ ಆದ್ಯತೆಯಾಗಲಿ. ಎಲ್ಲರಿಗೂ ಪ್ರೀತಿಯ ಶುಭಾಶಯ!!!

2 comments:

sunaath said...

ಸರಿಯಾಗಿ ಹೇಳಿದಿರಿ, ಮಹೇಶ! ವರ್ಷದ ಮೂರುನೂರಾ ಅರುವತ್ತೈದು ದಿನಗಳೂ ಪ್ರೀತಿಯ ದಿನಗಳೇ ಆಗಬೇಕಲ್ಲವೆ?

ಅಮರ said...

ಪ್ರಿಯ ಮಹೇಶ ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ