ಜಂಪಾ ಲಹಿರಿಯವರ ದಿ ನೇಮ್ ಸೇಕ್ ಕೃತಿ ಓದುತ್ತಿದ್ದೇನೆ. ಪುಸ್ತಕ ತೆಗೆದು 3 ತಿಂಗಳು ಕಳೆದರೂ ಅದನ್ನು ಓದಲು ಸಮಯ ಸಿಕ್ಕಿರುವುದು ಈಗ. ಸುಮಾರು 3 ಅಧ್ಯಾಯಗಳನ್ನು ಓದಿ ಮುಗಿಸಿದ್ದೇನೆ. ಕೃತಿ ಓದಿಸಿಕೊಂಡು ಹೋಗ್ತಾ ಇದೆ. ಕೃತಿ ಆಧರಿಸಿ ಚಲನಚಿತ್ರವೂ ಬಂದಿದೆ. ಆದರೆ ಕೃತಿ ಓದಿ ಮುಗಿಸದೆ ಚಿತ್ರ ನೋಡಿದರೆ ಕೃತಿಯ ಬಗೆಗಿನ ಆಸಕ್ತಿ ಕಳೆದುಹೋಗುತ್ತದೆ ಎಂಬ ಭಯದಲ್ಲಿ ಚಿತ್ರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಭಾರತದಲ್ಲಿ ಹುಟ್ಟಿ ಬೆಳೆದು ಮದುವೆಯಾಗಿ ವಿದೇಶದಲ್ಲಿ ಹೋಗಿ ನೆಲೆಸಿರುವ ಬೆಂಗಾಳಿ ದಂಪತಿಗಳ ಕಥೆಯಿದು. ಮದುವೆಯಾದ ಹೊಸತರಲ್ಲಿ ಭಾರತದಿಂದ ಹೊರಟು ವಿದೇಶಿ ನೆಲವನ್ನು ಸೇರಿ ಅಲ್ಲಿ ಯಾತನೆ ಅನುಭವಿಸಿದ ಹೆಣ್ಣು ಮಗಳು ಅಶೀಮಾಳ ಅನುಭವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಲಹಿರಿ. ತನ್ನ ಗಂಡ ಅಶೋಕ್ ಕೆಲಸಕ್ಕೆ ಹೋಗುವಾಗ ಆಕೆ ಏಕಾಂಗಿಯಾಗಿ ಮನೆಯಲ್ಲಿ ಕಾಲ ಕಳೆಯುತ್ತಾಳೆ. ಪರಿಚಯದವರು ಎಂದು ನೆರೆ ಕರೆಯಲ್ಲಿ ಇರುವುದೇ ಬೆರಳೆಣಿಕೆ ಮಂದಿ. ಅವರು ಕೆಲಸಕ್ಕೆ ಹೋದರೆ ಮತ್ತೆ ಇವಳು ಏಕಾಂಗಿ. ಅಲ್ಲಿ ಆಕೆ ಗರ್ಭ ಧರಿಸುತ್ತಾಳೆ. ಅಲ್ಲಿ ಆಕೆಯಲ್ಲಿ ಉಂಟಾದ ದೈಹಿಕ ಬದಲಾವಣೆಗಳು ಆಕೆ ಆ ಸಮಯದಲ್ಲಿ ಅನುಭವಿಸುವ ಮಾನಸಿಕ ಕಿರಿಕಿರಿಗಳು ಎಲ್ಲವುಗಳ ಬಗ್ಗೆ ಲಹಿರಿ ಬರೆಯುತ್ತಾ ಹೋಗುತ್ತಾರೆ.
ಅವಳಿಗೆ ಅಮ್ಮನ ಮನೆಯ ನೆನಪು ಕಾಡುತ್ತದೆ. ಕುಟುಂಬದ ಸದಸ್ಯರು ಎಲ್ಲರೂ ಜತೆ ಸೇರಿದ್ದಾಗ ಅನುಭವಿಸಿದ ಸಂತಸದ ಕ್ಷಣಗಳು ನೆನಪಾಗುತ್ತವೆ. ಕುಳಿತಲ್ಲೇ ಕಣ್ಣೀರಿಡುತ್ತಾಳೆ ಆಕೆ. ಗಂಡನಲ್ಲಿ ಅಮ್ಮನ ಮನೆಗೆ ವಾಪಸಾಗಬೇಕು ಎಂದು ಭಿನ್ನವಿಸುತ್ತಾಳೆ. ಆದರೂ ಆತ ಅವಳನ್ನು ಸಮಾಧಾನಪಡಿಸುತ್ತಾನೆ. ಅಲ್ಲಿಗೆ ಆಕೆಯ ನವ ಮಾಸಗಳು ತುಂಬಿರುತ್ತವೆ. ಹೆರಿಗೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಅಲ್ಲಿ ಸುಂದರ ಮಗುವಿಗೆ ಜನ್ಮ ನೀಡುತ್ತಾಳೆ. ಅಶಿಮಾ ಹಿಂದಿನಂತೆಯೇ ಅಮ್ಮನಿಲ್ಲದ ಕೊರಗಿನಿಂದ ಅಳುತ್ತಾಳೆ. ಆಸ್ಪತ್ರೆಯಿಂದ ಬಂದ ಕೆವಲವೇ ದಿನಗಳಲ್ಲಿ ಆಕೆಯ ಪ್ರೀತಿಯ ಅಜ್ಜಿ ತೀರಿಹೋಗುತ್ತಾಳೆ. ಆದರೂ ಆಕೆ ಸಹನೆ ಕಳೆದುಕೊಳ್ಳದೆ ಎಲ್ಲವನ್ನೂ ಸಹಿಸುತ್ತಾ ಕುಳಿತಿರುತ್ತಾಳೆ. ಮಗುವಿಗೆ ಗೋಗಲ್ ಎಂದು ಹೆಸರಿಡುತ್ತಾರೆ. ಇಲ್ಲಿಗೆ ನಾ ಇದುವರೆಗೆ ಓದಿದ ಕಥೆಯ ಸಾರಾಂಶ ಮುಗಿಯುತ್ತೆ. ಇನ್ನೂ ನೂರಾರು ಪುಟ ಬಾಕಿಯಿವೆ. ಅದನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ.
Saturday, January 05, 2008
Subscribe to:
Post Comments (Atom)
No comments:
Post a Comment