Saturday, April 14, 2007

ಬೆಂಗಳೂರಿನ ಹೊರ ವಾತಾವರಣದಲ್ಲಿ...!!!

ಬೆಂಗಳೂರು, ಬೆಂಗಳೂರು, ಬೆಂಗಳೂರು...
ಇಲ್ಲಿನ ವಾತಾವರಣ ಉಸಿರುಗಟ್ಟಿಸಲು ಆರಂಭಿಸಿತ್ತು. ಬಹಳ ದಿನಗಳ ಬಳಿಕ ಮನಸ್ಸು ಅಲ್ಪ ಬದಲಾವಣೆಗಾಗಿ ಆಗ್ರಹಿಸಿತ್ತು. ಅಂತಹ ಅವಕಾಶ ಮತ್ತು ಬದಲಾವಣೆಯ ಗಾಳಿಗೆ ಮನಸ್ಸನ್ನು ತೆರೆಯಲು ಪ್ರೇರೇಪಿಸಿದ್ದು ಸಹೋದ್ಯೋಗಿ ಸುಬ್ರಮಣ್ಯನ ಮದುವೆ.
ಬಹಳ ದಿನಗಳ ಬಳಿಕ ಮನಸ್ಸು ಪ್ರಶಾಂತವಾಗಿದೆ. ಮದುವೆಯ ಮರುದಿನದ ಶುಭಘಳಿಗೆಗಾಗಿ ನಾವು (ನಾನು, ಮಹಾಬಲ ಮತ್ತು ಜೋಶಿ) ಬೆಂಗಳೂರಿನಿಂದ ಹೊರಡುವಾಗ ಮುಂಜಾನೆ 2.15. ಸುಮಾರು 5 ಗಂಟೆಯವರೆಗೆ ಬಸ್ಸಿನಲ್ಲಿ ನಿದ್ದೆ ಮಾಡಿದ್ದೆ. ಮತ್ತೆ ಎಚ್ಚರವಾದಾಗ ನನ್ನ ಪಾಲಿನ ಅದ್ಭುತ ಆರಂಭ. ಆಗ ತಾನೆ ನಸುಕಿನ ಬೆಳಕು ಹರಿಯುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವಿಶಾಲವಾದ ಭೂಮಿ ಮನಸ್ಸಿಗೆ ಮುದ ನೀಡಿತ್ತು. ತಣ್ಣನೆಯ ತಂಗಾಳಿಯ ತಂಪು ಮೈಗೆ ಸೋಕಿದಾಗ ಮನವೆಲ್ಲಾ ರೋಮಾಂಚನ.
ಶಿವಮೊಗ್ಗದ ಯಾತ್ರೆ ನನ್ನ ಪಾಲಿಗೆ ಅವಿಸ್ಮರಣೀಯವದದ್ದು ಕೆಲವು ಕಾರಣಗಳಿಗಾಗಿ. ನನ್ನ ಮನ ಸೆಳೆತಕ್ಕೆ ಕಾರಣ ಪ್ರಕ್ರಿತಿ ಸೌಂದರ್ಯಕ್ಕಾಗಿ. ಒಂದೆಡೆ ಅಡಕೆ ಮರಗಳ ಸಾಲು. ಮುಂದೆ ಬೋಳು ಬೋಳಾದ ಭೂ ಪ್ರದೇಶ. ಮತ್ತೆ ಮುಂದುವರಿದರೆ ತೋಟದ ಪ್ರದೇಶ. ಒಟ್ಟಿನಲ್ಲಿ ಅಲ್ಲಿನ ಭೂ ಪ್ರದೇಶ ನನಗೆ ನೀಡಿದ್ದು ಅಚ್ಚರಿ ಮಾತ್ರ.
ನಮ್ಮಲ್ಲಿ ಮಾವಿನ ಮರದಲ್ಲಿ ಮಾವಿನ ಮಿಡಿ ಕಾಣೋದೇ ತಡ ಅದಕ್ಕೆ ಮರದಲ್ಲಿ ಉಳಿಗಾಲವಿಲ್ಲ. ಅಂತಹ ವಾತಾವರಣದಲ್ಲಿ ಬೆಳೆದ ನನಗೆ ಅಲ್ಲಿನ ರಸ್ತೆ ಬದಿಯ ಮರಗಳಲ್ಲಿ ಕೈಗೆಟಕುವಂತೆ ಮಾವಿನ ಕಾಯಿಗಳು ನೇತಾಡುತ್ತಿದ್ದರೂ ಅದನ್ನು ಕೀಳುವಂತಹ ಗೋಜಿಗೆ ಅಲ್ಲಿನವರು ಹೋಗಿಲ್ಲ ಅಂದರೆ ಅದು ನಿಜಕ್ಕೂ ಅದ್ಭುತ. ಕಡೂರಿನ ಸೂರ್ಯೋದಯ ನನ್ನ ಪಾಲಿಗೆ ಅವಿಸ್ಮರಣೀಯ. ಬೆಂಗಳೂರಿನ ಸಿಮೆಂಟ್ ಕಟ್ಟಡದ ನಡುವಣ ಸೂರ್ಯೋದಯಕ್ಕಿಂತಲೂ ಇದು ಸಾವಿರ ಪಾಲು ಮೇಲು. ಬಸ್ಸಿನ ಹಿಂಭಾಗದ ಗಾಜಿನ ಮುಖಾಂತರ ಬಂದ ಹೊಂಬಣ್ಣದ ಬಿಸಿಲು ನನ್ನನ್ನು ಯಾವುದೋ ಸುಂದರ ಲೋಕಕ್ಕೆ ಕೊಂಡೊಯ್ದಿತ್ತು. ಕಡೂರು ಬಸ್ ನಿಲ್ದಾಣದಲ್ಲಿ 5 ನಿಮಿಷದ ವಿರಾಮದ ನಂತರ ಮತ್ತೆ ಶಿವಮೊಗ್ಗದೆಡೆಗೆ ಪಯಣ. ಅದು ಭದ್ರಾವತಿ ಮುಖಾಂತರ.
ಒಂದೆಡೆ ಭತ್ತದ ಪೈರು, ಮತ್ತೆ ತೋಟ. ಅದರ ಬಳಿಕ ಕಬ್ಬಿನ ತೋಟ. ಇಂತಹ ಸೌಂದರ್ಯ ನಿಮಗೆ ಬೇರೆಲ್ಲಿ ಸಿಗುತ್ತೆ ಹೇಳಿ ನೋಡೋಣ. ಹಾಗಂತ ಬಯಲು ಸೀಮೆ ಜನರ ಬಗ್ಗೆ ಹೇಳದಿದ್ದರೆ ಮನಸ್ಸು ಕ್ಷಮಿಸದು. ಬೆಳಗ್ಗೆ ಬೇಗನೆ ಎದ್ದು ತಮ್ಮ ಕೆಲಸ ಕರ್ಯಗಳಿಗೆ ಹೊರಟ ಜನರು, ಕಾಲೇಜಿಗೆ ಹೊರಟ ತರುಣಿಯರು, ಅವರ ಒನಪು ವಯ್ಯಾರ, ಬೆಡಗು ಬಿನ್ನಾಣ. ಇವೆಲ್ಲದರ ನಡುವೆ ಮನಸ್ಸಿಗೆ ಚೇತೋಹಾರಿ ಎನ್ನಿಸಿದವು ಇನ್ನೂ ಅನೇಕ. ಪುಸ್ತಕವನ್ನು ಕೈಯಲ್ಲಿ ಹಿಡಿದು ಬಳುಕಾಡುವ ಅವರ ನಡೆಗೆ ಎಂತ ಕಲ್ಲು ಮನಸ್ಸೂ ಕರಗಲೇಬೇಕು.

ಅಂತೂ ಈ ಎಲ್ಲಾ ಸೌಂದರ್ಯಗಳನ್ನು ಕಣ್ಣಿಗೆ ತುಂಬಿ ಶಿವಮೊಗ್ಗ ತಲಪಿದಾಗ ಬೆಳಗ್ಗೆ 8.20. ಮುಂದೆ ಎನ್.ಆರ್. ಪುರ ಯಾತ್ರೆಯ ಮಜಾ ಬೇರೆ ಇದೆ. ನಂತರ ಪ್ರಥಮ ಮಳೆಯ ಕಂಪಿನ ಬಗ್ಗೆ ಹೇಳೋಕಿದೆ. ಅದರ ನಡುವೆ ಸುಬ್ರಮಣ್ಯನ ಮನೆಯ ಆತಿಥ್ಯದ ಬಗ್ಗೆ ಸೇರಿದಂತೆ ಇನ್ನೂ ಅನೇಕ ವಿಷಯಗಳಿವೆ. ಈ ಯಾತ್ರೆ ಇಂತಹ ಅನುಭವ ನೀಡುತ್ತದೆ ಎಂದು ಭಾವಿಸಿರಲಿಲ್ಲ. ಮುಂದಿನ ಬಾರಿ ಇವುಗಳ ಬಗ್ಗೆ ಬರೆಯುವವರೆಗೆ ಬಿಡುವು...
ನಿಮ್ಮವ,
ಚೇವಾರ್.

1 comment:

ಸುಪ್ತದೀಪ್ತಿ suptadeepti said...

ದಾನಿಯೇ, ಈರೆನ ಸುದ್ದಿಯೇ ಇಜ್ಜಿ, ಓಲು ತಪ್ಪಾಡ್ ಪೋಯರ್?