Thursday, September 24, 2009

ಈ ಮಳೆಯಲ್ಲಿ ನಿಂತು ಊರ ಮಳೆ ನೆನಪು!

ಕೊನೆಗೂ ಕಳೆದ ಮೂರು ವರ್ಷಗಳಿಂದ ಇದ್ದ ಕೊರಗು ದೂರವಾಗಿದೆ. ಮಳೆ ನಿರೀಕ್ಷೆಗೂ ಮೀರಿ ನನ್ನನ್ನು ತೋಯಿಸಿದೆ. ಕಾರಣ ಇಷ್ಟೇ ಓಣಂ ಹೆಸರಲ್ಲಿ ರಜೆ ಪಡೆದು ನಮ್ಮೂರು ಕಾಸರಗೋಡು ಕಡೆ ಹೋಗಿದ್ದೆ. ಭರ್ಜರಿ ೮ ದಿನ ಊರಲ್ಲಿ ಕೆಲಸದ ಯಾವುದೇ ಗುಂಗೇ ಇಲ್ಲದೆ ಕಳೆದಿದ್ದೆ.

ಮಂಗಳೂರು ಬಿಟ್ಟ ಮೇಲೆ ಈ ಪರಿ ನನ್ನ ಮಳೆ ಕಾಡಿದ್ದು ಇದೇ ಮೊದಲ ಬಾರಿ. ಬೆಂಗಳೂರು ಎಂಬ ಕಾಂಕ್ರೀಟ್ ಕಾಡು ತನ್ನ ಹೆಸರಿನಂತೆಯೇ ಮಳೆ ಕಡೆ ಕಣ್ಣೆತ್ತಿಯೂ ನೋಡಲಿಲ್ಲ ಆರಂಭದಲ್ಲಿ. ಆದರೆ ಕಳೆದ ವಾರ ಎರಡು ಬಾರಿ ಮಳೆ ಬಂದು ಕೊರಗು ದೂರವಾಗಿದೆ. ಆದರೆ ಊರಲ್ಲಿ ಬಂದಂತಹ ಮಳೆ ಬೆಂಗಳೂರಲ್ಲಿ ಬರದೇ ಇದ್ದಿದ್ದು ಭಾರಿ ಒಳ್ಳೆಯದೇ ಆಯಿತು. ಯಾಕೆಂದರೆ ಬೆಂಗಳೂರಿನ ಮಳೆ ಮಹಿಮೆ ಬಗ್ಗೆ ಬರೆದು ಮುಗಿಯುವಂತದ್ದಲ್ಲ. ಅಲ್ಲಿ ಒಳ್ಳೆಯದನ್ನು ಬಿಟ್ಟು ಎಲ್ಲವೂ ಇರುತ್ತದೆ. ಅದು ಏನೇ ಇರಲಿ ಈಗ ಊರ ಮಳೆಯ ಹಾದಿಗೆ ಬರೋಣ.

ಬೆಂಗಳೂರಿನಿಂದ ಹೊರಟು ಹಾಸನ ತಲುಪುವಷ್ಟರಲ್ಲೇ ಮಳೆಯ ಹನಿಗಳ ಲೀಲೆ ಆರಂಭವಾಗಿತ್ತು. ಆದರೆ ಅದಾಗಲೇ ಕಣ್ಣೆಳೆಯುತ್ತಿತ್ತು ನಾನು ನಿದ್ರಾದೇವಿ ಪರವಶನಾಗಿದ್ದೆ. ಮತ್ತೆ ಕಣ್ತೆರೆದಾಗ ಬಸ್ ಬಿ.ಸಿ. ರೋಡ್ ಸಮೀಪದ ಮಾಣಿಯಲ್ಲಿತ್ತು. ಅಲ್ಲಿಯೂ ಅದಾಗಲೇ ಮಳೆ ನೀರು ನೆಲವ ತೋಯಿಸಿತ್ತು. ಮಂಗಳೂರಿಗೆ ತಲುಪಿದಾಗ ಹನಿಗಳ ರಭಸ ಜೋರಾಗಿತ್ತು. ಬಸ್ ಇಳಿದು ನಿಲ್ದಾಣ ತಲುಪಬೇಕಾದರೆ ನಾನು ಅರ್ಧಂಬಂರ್ಧ ಒದ್ದೆ ಒದ್ದೆ. ಊರಿಗೆ ತಲುಪಬೇಕಾದರೆ ಮಳೆ ನಿಂತಿತ್ತು. ಆದರೆ ತೋಡಿನಲ್ಲಿ ಹರಿಯುತ್ತಿದ್ದ ಕೆಸರು ನೀರು ತನ್ನ ವೇಗಕ್ಕೆ ಮಿತಿಯೊಡ್ಡಿ ನಿಧಾನವಾಗಿ ಹರಿಯುತ್ತಿತ್ತು. ಈ ಹಿಂದೆಯೇ ಹೇಳಿದಂತೆ ಮಳೆ ಬಂತೆಂದರೆ ನಮ್ಮ ಮನೆ ಜಲಾವೃತ. ಅದೇ ರೀತಿ ಗೇಟ್‌ನಲ್ಲಿ ನಿಂತು ಮನೆಯತ್ತ ನೋಡಿದರೆ ಮನೆ ಮುಂದೆ ಅಂಗಳದಲ್ಲಿ, ಎದುರುಗಡೆ ಇರುವ ಇರುವ ಕಣಿವೆಯಲ್ಲಿ ನೀರು ಹರಿಯಲು ಆರಂಭವಾಗಿತ್ತು. ಹಾಗೆ ಮಧ್ಯಾಹ್ನವಾಯಿತು. ಆಕಾಶ ಕಪ್ಪಡರಿತು. ಮತ್ತೆ ಸುರಿಯಲಾರಂಭಿಸಿತು ಧೋ ಎಂದು ಮಳೆ.
ಮಳೆಯ ಹನಿಗಳು ಅಂಗಳದಲ್ಲಿ ಬೀಳುವ ಶಬ್ದಗಳನ್ನು ಕಿವಿಯಲ್ಲಿ ಹಿಡಿದಿಡಲಾರಂಭಿಸಿದ್ದೆ. ಮಳೆರಾಯನಿಗೂ ಗೊತ್ತಾಗಿರಬೇಕು ನನ್ನ ಕುತೂಹಲ. ಹಾಗೆ ಬಿದ್ದ ಮಳೆಯನ್ನು ಗಂಟೆಗಳಲ್ಲಿ ಲೆಕ್ಕಹಾಕಿದರೆ ಸರಿಸುಮಾರು ಒಂದೂವರೆ ಗಂಟೆ.

ಹಾಗೆ ಒಂದು ಮಳೆ ಬಂದರೆ ನಮ್ಮ ಮನೆ ಜಲಾವೃತವಾಗಲು ಬೇಕಾಗುವುದು ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷ. ಮನೆಯ ಮುಂಭಾಗದಲ್ಲಿ, ಹಿಂಭಾಗದಲ್ಲಿ ನೀರು ಹರಿದುಹೋಗಲು ತೋಡು ಇದೆ. ಹೀಗೆ ಒಂದು ಮಳೆ ಬಂದರೆ ಎತ್ತರದ ಪ್ರದೇಶದಲ್ಲಿ ಒಂದೇ ಹಾದಿಯಲ್ಲಿ ಸೇರಿ ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕು. ಹಾಗೆ ಬರುವ ವೇಳೆಗೆ ನೀರು ಗೇಟು ದಾಟಿ ನಮ್ಮ ಭೂಮಿಯಲ್ಲಿ ಬಂದು ಸೇರುತ್ತವೆ. ಹಾಗೇ ಅದು ನಿಧಾನವಾಗಿ ಪ್ರವಹಿಸುತ್ತಾ ಸಾಗಬೇಕು. ಅಂತಹ ಮಳೆ ನೀರನ್ನು ನೋಡಿ ಖುಷಿ ಪಟ್ಟ ದಿನಗಳೆಷ್ಟೋ. ನಂತರದ ನಾಲ್ಕು ದಿನಗಳಲ್ಲೂ ಮಳೆ ನಿಂತಿರಲಿಲ್ಲ. ಅದರಲ್ಲೂ ಮೂರನೇ ದಿನ ಸುರಿದಿದ್ದು ಭಾರೀ ಮಳೆ. ಮಳೆಯ ರಭಸಕ್ಕೆ ನೀರ ಹನಿಗಳು ವೇಗವಾಗಿ ಗಾಳಿಯ ಜತೆ ಮುಖಕ್ಕೆ ರಾಚುತ್ತಿದ್ದವು. ವಿದ್ಯಾಭ್ಯಾಸ ಪೂರೈಸಿದ ಪುತ್ತೂರು ಹಾಗೂ ಕೊಣಾಜೆಯಲ್ಲಿ ನಮ್ಮ ತರಗತಿ ನಡೆಯುತ್ತಿದ್ದುದು ಮೇಲ್ಮಹಡಿಯಲ್ಲಿ. ಅಲ್ಲಿ ಮೇಲ್ಗಡೆ ಸಿಮೆಂಟ್ ಹೊದಿಕೆ. ಜೋರಾಗಿ ಮಳೆ ಬಂದರೆ ಹನಿಗಳು ಜೋರಾಗಿ ಬಿದ್ದರೆ ತರಗತಿಯಲ್ಲಿ ಏನು ಪಾಠ ಮಾಡುತ್ತಿದ್ದಾರೆ ಎನ್ನುವುದೂ ತಿಳಿಯದಾಗುತ್ತದೆ. ಎಲ್ಲವೂ ಇಂದಿಗೆ ನೆನಪು ಮಾತ್ರ. ಆ ನಂತರದ ದಿನಗಳಲ್ಲಿ ಮಳೆ ಬಂದರೂ ಅದು ಹಿಂದೆ ಕಾಡಿದಷ್ಟು ತೀವ್ರವಾಗಿ ಕಾಡುತ್ತಿರಲಿಲ್ಲ. ಅಂತಹ ತೀವ್ರತೆಯ ಮಳೆ ಇನ್ನೊಂದು ಸಾರಿ ಜೀವನದಲ್ಲಿ ಬರಬೇಕು ಎಂಬ ಆಸೆ ಬೆಂಗಳೂರಲ್ಲಿರಬೇಕಾದರೆ ನಿಜವಾಗಿಯೂ ಮುರುಟಿಹೋಗಿತ್ತು. ಬೆಂಗಳೂರಲ್ಲಿ ಬಂದರೂ ಅದು ಅನಾಹುತಕ್ಕೆ ಕಾರಣವಾಗುತ್ತದೆಯೇ ಹೊರತು ಬೇರೆ ಏನೂ ಸಾಧಿಸಿದಂತಾಗುವುದಿಲ್ಲ.

ಹಾಗೆ ಎರಡು ಮಳೆಗೆ ಕೊಡೆಯೇ ಇಲ್ಲದೆ ನಡೆದಾಡಿದ್ದೆ ಊರಲ್ಲಿ. ಹಾಗೆ ಕಳೆದುಹೋದ ದಿನಗಳನ್ನು ಇಲ್ಲಿ ನಿಮ್ಮ ಮುಂದೆ ಸಾದರಪಡಿಸಲು ಸಮಯದ ಪರಿಧಿಯ ನನಗೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಸದ್ಯದ ಕೊರಗು. ಸದ್ಯ ಮಳೆಯ ಬಗ್ಗೆ ಇಷ್ಟು ಸಾಕು. ಇನ್ನೂ ಬರೆಯೋದಿದೆ ಸಾಕಷ್ಟು. ಸದ್ಯ ಒಂದು ಪುಟ್ಟ ವಿರಾಮ. ಕಲಿತ ಯುನಿವರ್ಸಿಟಿ, ಬೆಳೆದ ಊರು, ಒಂದರ್ಧ ದಿನದ ಪಿಕ್‌ನಿಕ್. ಇವುಗಳೆಲ್ಲವೂ ನಿಮ್ಮ ಮುಂದಿರಿಸಬೇಕು. ಅಷ್ಟರವರೆಗೆ ಇದನ್ನು ಓದಿಸಿಕೊಳ್ಳಿ.

2 comments:

ಗೌತಮ್ ಹೆಗಡೆ said...

male andre nangu tumbaa tumbaa ishta. olleya baraha. maleyalli neneda anubhava kodtu:)

Priya said...

It is always a pleasure to read your expressions about rain, gives me a feeling of having been there... getting drenched, playing in one those muddy streams, just staring out of the window without a single thought.... those days...just awesome... fabulous write up as usual!!!