Sunday, June 08, 2014

ಹತ್ತಿರದ ಸಂಬಂಧಿ ದೂರವಾದ ಬಗೆ

ದುಕು, ಮನಸು, ಸುಖ, ದುಃಖ. ನಿನ್ನೆ ಕಣ್ಣಲ್ಲಿ ಆನಂದ ಭಾಷ್ಪ. ಇಂದು ಮನಸ್ಸನ್ನು ಕಾಡಿದ ದುಗುಡದಿಂದ ಬಂದ ನಿಜವಾದ ಕಣ್ಣೀರು. ಯಾವುದನ್ನು ನನ್ನ ಎದೆಗೊತ್ತಲಿ, ಯಾವುದನ್ನು ನಾನೇ ದೂರ ಮಾಡಲಿ. ಕಣ್ಣೀರು ಹೇಗೆ ಬಂದರೂ ಮುಂದಿರುವವರಿಗೆ ಅರ್ಥವಾಗುತ್ತದೆ. ಅದಕ್ಕೆ ಕಣ್ಣನ್ನು ಓದುವ ಸಾಮರ್ಥ್ಯ ಬೇಕು.
 
ಮಾನವ ಸಂಬಂಧ ಎಂದರೇನು..? ನಮಗೆ ಸಿಗುವ ಕ್ಷಣಿಕ ಸುಖ, ಅಪ್ಪ-ಅಮ್ಮ ಮೊಗೆದು ಕೊಡುವ ಪ್ರೀತಿ ಎಲ್ಲವನ್ನೂ ಕುರುಡಾಗಿಸುತ್ತಾ..? ಸಂಬಂಧಗಳಲ್ಲಿ ನಂಬಿಕೆ ಹೇಗೆ ಹುಟ್ಟಬೇಕು. ಕೆಲವೊಂದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೊರಡುವ ಹೊತ್ತಿಗೆ ನಾನು ಅನಾಥವಾಗಿ ಏಕಾಂಗಿಯಾಗಿ ನಿಂತ ಅನುಭವ. ತುಂಬಾ ನಂಬಿಕೆ ಹುಟ್ಟಿಸಿದವರು ಕಾಲ ಕಸವಾಗಿ ಮಾಡಿದ್ದಾರೆ. ಇವರು ಯಾವುದಕ್ಕೂ ಯೋಗ್ಯರಲ್ಲ ಎನಿಸಿಕೊಂಡವರು ನಮ್ಮನ್ನು ಬಿಟ್ಟು ಹೋದವರಿಗೆ ನಮ್ಮಿಂದ ಸಿಕ್ಕಿದ್ದ ಆಪ್ತತೆಯನ್ನು ಅವರಾಗೇ ಪಡೆಯಲು ಯತ್ನಿಸುತ್ತಾರೆ. ಯಾಕೆ ಹೀಗೆಂದು ಯೋಚಿಸಿದರೆ ಒಂದೂ ಗೊತ್ತಾಗುತ್ತಿಲ್ಲ. ಇನ್ನು ಮುಂದಿನದ್ದು ನಾನು ಆತ್ಮೀಯರೊಬ್ಬರ ಮುಂದೆ ಕುಳಿತಾಗ ಅವರು ಹೇಳಿದ ಮಾತು.
 
ನಾಲ್ಕೈದು ವರ್ಷ ಹಿಂದೆ ಸಿಕ್ಕಿ ಜೊತೆಗಿದ್ದವರು ಇಂದು ನೀನ್ಯಾರೋ ಎಂದು ಕೇಳುತ್ತಿದ್ದಾರೆ. ಎದುರಿಗೆ ನಿಂತಾಗ ಕೇಳುವ ನೇರ ಪ್ರಶ್ನೆಗೆ ಕಣ್ಣಲ್ಲೇ ಕಣ್ಣಿಟ್ಟು ಉತ್ತರ ಹೇಳಲು ಸಾಧ್ಯ ಇಲ್ಲದೇ ಇದ್ದವರು ತಾವು ಮಹಾನ್ ಪ್ರಚಂಡ ಬುದ್ಧಿಶಾಲಿಗಳು ಎಂದು ಕೊಳ್ಳುತ್ತಾರೆ. ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಾರೆ. ತಮ್ಮ ಜೊತೆಗಿರುವವರು ತಮ್ಮನ್ನು ಹೀನಾಯವಾಗಿ ನಡೆಸಿಕೊಂಡರೂ, ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಮಾತು ಹೇಳಿದರೂ ಸಹಿಸಿಕೊಂಡು ಯಾವುದೋ ಒಂದು ಹೆಸರಿಲ್ಲದ ಸಂಬಂಧ ಹೇಳಿಕೊಂಡು, ವಾಂಛೆಗೆ ಬಲಿಯಾಗಿ ತಮ್ಮನ್ನು ಅರ್ಪಿಸಿಕೊಂಡು ಆದರ್ಶದ ಮಾತುಗಳನ್ನಾಡುತ್ತಾರೆ.
 
ಜೊತೆಗಿದ್ದವರನ್ನು ಬಲಿಕೊಟ್ಟವರು ಹೇಳಿದ ಮಾತನ್ನು ಒಂದು ದಿನ ಕೇಳಿಸಿಕೊಂಡಿದ್ದರೆ, ನನ್ನ ಜನ್ಮಕ್ಕೆ ಕಾರಣವಾದ ಅಪ್ಪ-ಅಮ್ಮ ಎಂಬ ಎರಡು ಮುದ್ದು ಜೀವದ ಯೋಚನೆಯಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿದ್ದು ಒಂದೂರು, ಕೆಲಸ ಕೊಟ್ಟಿದ್ದು ಒಂದೂರು. ಅಂತಹ ಒಂದು ಊರಲ್ಲಿ ಏನು ನಡೆದರೂ ಮನೆಯಲ್ಲಿ ಯಾರಿಗೂ ಗೊತ್ತಾಗಲ್ಲ ಎಂದು ಹೊರಟವರಿಗೆ ಎಂದೋ ಒಂದು ದಿನ ಜ್ಞಾನೋದಯವಾಗಿ ಅಪ್ಪ-ಅಮ್ಮನಿಗೆ ನಾನು ಮೋಸ ಮಾಡಿದ್ದೇನಾ ಎಂದು ಪ್ರಶ್ನಿಸಿಕೊಳ್ಳುತ್ತಾರೆ. ಉತ್ತರ 'ಹೌದು' ಎಂದು ಗೊತ್ತಿದ್ದರೂ ಮನಸ್ಸಿನ ಕೆರಳಿದ ಭಾವನೆಗಳು ಅವೆಲ್ಲವನ್ನೂ ಗೌಣವಾಗಿಸುತ್ತವೆ. ಅಲ್ಲಿ ಅಪ್ಪ ಅಮ್ಮನಿಗೆ ಮತ್ತದೇ ಆತ್ಮವಂಚನೆ. ಮುದ್ದು ಕಂದಮ್ಮಗಳ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಒಂಚೂರು ಒಳ್ಳೆಯ ಮಾತು ಹೇಳಿದರೆ ನೀನ್ಯಾವನೋ ಬಡವಾ ಅಂತಾ ಪ್ರಶ್ನೆ.
 
ಕಷ್ಟ ಕಾಲದಲ್ಲಿ ಕೇಳಲು ಕಿವಿಯಿತ್ತು ಎಂದುಕೊಂಡು ಮನದ ಸಂಕಟಗಳನ್ನೆಲ್ಲಾ ಹೇಳಿಕೊಂಡಾಗ ನಾ ಜೊತೆಗಿದ್ದೀನಿ ಎಂಬ ಭಾವ ನೀಡಿದವರು, ಅವರನ್ನು ಹಳ್ಳಕ್ಕೆ ಹಿಡಿದು ದೂಡಿದಾಗಲೂ ಅವರ ಬಗ್ಗೆ ಒಂದಕ್ಷರ ಮಾತು ಬರಲ್ಲ. ಅವರು ದೇವತಾ ಸ್ವರೂಪಿಗಳು. ಕೆಲವು ವಿಷಯಗಳು ಬಂದಾಗ ಎಲ್ಲವೂ ಮೌನ, ಮೌನ ಮೌನ. ಇಷ್ಟಪಟ್ಟವರು ಕೇಳಿದರೆ ಭದ್ರಕಾಳಿಯ ರೂಪ, ಇಷ್ಟ ಪಡದೇ ಇರುವವರು ತಮ್ಮ ತೆವಲಿಗೆ ಕೇಳಿದರೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಕೇಳಿಸಿಕೊಂಡವರೋ ಗಂಟಲಿಗೆ ಎಣ್ಣೆ ಬಿದ್ದಾಗ ಕೇಳಿಸಿಕೊಂಡಿದ್ದೂ ಅಲ್ಲದೆ ಒಂಚೂರು ಒಗ್ಗರಣೆಯನ್ನೂ ಸೇರಿಸಿ ಮಾತನಾಡುತ್ತಾರೆ. ಎಲ್ಲವನ್ನೂ ಕೇಳಿಸಿಕೊಂಡಿದ್ದೇನೆ, ಮೌನವಾಗಿದ್ದೇನೆ.
 
ಎಷ್ಟೋ ಸಾರಿ ಕಠೋರ ಸತ್ಯದ ಅರಿವಿದ್ದರೂ, ಎರಡಲಗಿನ ಕತ್ತಿಯ ನಡುವೆ ನಾನಿದ್ದೀನಿ ಎಂದು ಗೊತ್ತಿದ್ದರೂ ಜೊತೆಗಿರುವವರಿಗೆ ನೋವಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಕಾರಣ ಒಂದೇ, ಸಂಬಂಧ ಒಳ್ಳೆಯದಿದ್ದಾಗ ನೀವು ನೀಡಿದ ಪ್ರೀತಿ. ಆ ಪ್ರೀತಿ ನಾನು ಯಾರ ಬಳಿ ಹೋದರೂ ಸಿಗಲ್ಲ. ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಿಲ್ಲ. ನಿಮ್ಮ ಮೇಲಿನ ಪ್ರೀತಿ ಅದು ಮೊದಲ ಭೇಟಿಯಾಗಿ ಆತ್ಮೀಯರಾಗುವಾಗ ಎಷ್ಟಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ಇದೆ. ಮುಂದೆಯೂ ಇರುತ್ತದೆ.
 
ಯಾರೋ ಹೇಳಿದ ಮಾತು ಕೇಳಿ ಅದರ ಬಗ್ಗೆ ಒಂದು ಸಣ್ಣ ಸ್ಪಷ್ಟನೆಯನ್ನೂ ಕೇಳದೇ ನಿರ್ಗಮಿಸೋ ನಿಮಗೆ ಒಳ್ಳೆಯದಾಗಲಿ. ಒಂದು ಕಾಲದಲ್ಲಿ ಕ್ಯಾಕರಿಸಿ ಉಗಿದೋರನ್ನು ಅಪ್ಪಿ ಮುದ್ದಾಡುವಾಗ ಎಲ್ಲರಿಗೂ ಒಂದು ನೆನಪಿರಬೇಕು. ಒಂದೊಮ್ಮೆ ಕಾಲ ಬಂದೇ ಬರುತ್ತದೆ. ಅಂದು ಎಲ್ಲವನ್ನೂ ತಿರುಗಿಸಿ ಹೇಳುವ ಮನಸ್ಸು ಹೇಳಿದ್ದನ್ನು ಕೇಳಬೇಕಾಗುತ್ತದೆ. ಆ ಅಸಹ್ಯ ಯಾರಿಗೂ ಬಾರದೇ ಇರಲಿ. ನನ್ನ ದ್ವೇಷಿಸಿದ ಎಲ್ಲರಿಗೂ ಒಳ್ಳೆಯದಾಗಲಿ. ಕೆಲವು ಸತ್ಯಗಳು ನನ್ನೊಂದಿಗೇ, ನನ್ನಲ್ಲೇ, ಮೂರನೇಯವರಿಗೆ ಗೊತ್ತಾಗದೇ ಮುಗಿದು ಹೋಗಲಿ. ಒಂದು ಸಂಬಂಧ ಮತ್ತೆ ಹುಟ್ಟುವ ಶುಭ ಘಳಿಗೆ ಅಂದ್ರೆ ಇದೇನಾ..?
 
(ಯಾರೋ ಆತ್ಮೀಯರೊಬ್ಬರು ತುಂಬಾ ಭಾವುಕರಾಗಿ ಮುಂದೆ ಕುಳಿತು ಹೇಳಿದ ಮಾತುಗಳಿದವು. ಇಲ್ಲಿರುವ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಮಾನವ ಸಂಬಂಧಗಳಲ್ಲಿ ನಂಬಿಕೆ ಇಟ್ಟುಕೊಂಡಿರುವವನಾಗಿದ್ದುಕೊಂಡು ಅವರು ಹೇಳಿದ ಮಾತನ್ನು ಈ ಪೋಸ್ಟ್ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ. ಓದಿದ್ದಕ್ಕೆ ಧನ್ಯವಾದ.)
 

Friday, November 01, 2013

ಮನಸಿನ ಭಾವಗಳು ಬದಲಾದಾಗ...!


ಸಂಬಂಧಗಳು ಹಾಗೇನೇ... ಒಂದು ಸಾರಿ ತುಂಬಾ ಆಪ್ತವೆನಿಸುತ್ತದೆ. ಇನ್ನೊಂದು ಬಾರಿ ತುಂಬಾ ಬೋರ್ ಅನ್ನಿಸುತ್ತದೆ. ಕೆಲವು ಬಾರಿ ಹಿಂಸೆ, ಕೆಲವು ಸಾರಿ ವಿಕೃತಿಯನ್ನೂ ಮಾಡಿಸಿಬಿಡುತ್ತದೆ.

ನಾವು ತುಂಬಾ ಆಪ್ತರೆನಿಸಿಕೊಂಡವರ ಮೌನ ಕೆಲವು ಸಾರಿ ನಮಗೆ ಸಹಿಸಲಸಾಧ್ಯ ಎನ್ನುವ ಹಂತಕ್ಕೆ ನಮ್ಮನ್ನು ತಂದು ನಿಲ್ಲಿಸುತ್ತದೆ. ಆದರೆ ಆ ಸಂಬಂಧವೊಂದು ಕೆಡಲು ಕಾರಣವೂ ಇರುತ್ತದೆ. ಆದರೆ ಹೇಳಬೇಕಾದವರು ಮುನಿಸಿಕೊಂಡರೆ, ಏನೂ ಹೇಳದೆ ಸುಮ್ಮನಿರುವ ಭಾವ ಇದೆಯಲ್ಲಾ. ಅದು ಇಡೀ ದಿನ ನಮ್ಮ ಮನವನ್ನು  ಕಾಡುತ್ತಿರುತ್ತದೆ.

ಬಾಲ್ಯದಿಂದಲೂ ನಾನು ಕೆಲವೇ ಕೆಲವು ಸಂಬಂಧಗಳನ್ನು ತುಂಬಾ ಆಪ್ತವೆನಿಸಿಕೊಂಡು ಆರಾಧಿಸಿದ್ದೇನೆ. ನನ್ನ ಜೊತೆಗಿದ್ದಾರೆ ಎಂಬ ಅರಿವಾದ ಕೂಡಲೇ ಅವರಿಗೂ ನನಗಿಂತ ಹೆಚ್ಚು ಕಂಫರ್ಟ್ ಕೊಟ್ಟಿದ್ದೇನೆ. ಆದರೆ ಆ ಕಂಫರ್ಟ್ ನಲ್ಲಿ ಕೂರಲು ಇಷ್ಟವಿಲ್ಲದೇ ಇರುವವರು ಇರಬಾರದ ಕಾರಣ ಹುಡುಕಿ ಜಾಗ ಖಾಲಿ ಮಾಡಿದ್ದಾರೆ. ತಪ್ಪಿನ ಅರಿವಾದವರು ಹೋದಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ.

ಬಾರದೇ ಇರುವವರಿಗೆ ನಾನು ಎಂದಿನಂತೆ ಕಾಯುತ್ತಿರುತ್ತೇನೆ. ನನ್ನದಲ್ಲದ ತಪ್ಪಿಗೆ ನನ್ನಿಂದ ದೂರವಾದವರು ನನ್ನ ಅರ್ಥ ಮಾಡಿಕೊಂಡು ಮತ್ತೆ ವಾಪಸ್ ಬಂದೇ ಬರುತ್ತಾರೆ ಎಂಬ ಭರವಸೆಯೊಂದಿಗೆ. ನನ್ನ ತಪ್ಪೇನು ಎಂದು ಕುಳಿತು ಯೋಚಿಸಲು ಆರಂಭಿಸಿದರೆ ನನಗಿಂತ ನನ್ನ ಜೊತೆ ಸಿಟ್ಟು ಮಾಡಿಕೊಂಡು ಹೊರಟವರ ತಪ್ಪೇ ಹೆಚ್ಚಿರುತ್ತದೆ. ಆದರೂ ಮೌನವಾಗಿರುತ್ತೇನೆ. ಯಾಕೆಂದರೆ ನನ್ನ ಜೊತೆಗಿರುವವರ ಮನಸು ಅವರಿಗೆ ಇಷ್ಟವಿದ್ದೋ, ಇಲ್ಲದೆಯೋ ಎಲ್ಲವನ್ನೂ ಮಾಡಿಸಿರುತ್ತದೆ. ಅವರ ಮನಸ್ಸಿಗೆ ಸ್ವಂತಿಕೆ ಇಲ್ಲದೇ ಇದ್ದಾಗ, ನನ್ನನ್ನು ದೂರ ಮಾಡು ಎಂದು ಇನ್ಯಾರೋ ಊದಿದ ಪೀಪಿಗೆ ಕಿವಿಗೊಡುವವರಿಗೆ ನಮ್ಮ ಭಾವಗಳು ಅರ್ಥವಾಗುವುದೇ ಇಲ್ಲ. ಆದರೆ ಕೊನೆಗೊಂದು ದಿನ ಇದೆಲ್ಲಾ ಗೊತ್ತಾಗಿ ಅವರು ವಾಪಸ್ ಬಂದಾಗ ಅಷ್ಟೇ ಅಪ್ಯಾಯಮಾನತೆಯಿಂದ ಸ್ವೀಕರಿಸಿದ್ದೇನೆ.

ಬದುಕಿನಲ್ಲಿ ನಾನು ಯಾವುದನ್ನು ಕಳೆದುಕೊಂಡಾಗಲೂ ನನ್ನ ತಪ್ಪಿದೆಯಾ ಎಂದು ಯೋಚಿಸಿ, ತಪ್ಪಿದ್ದರೆ ನಾನೇ ಮುಂದೆ ಹೋಗಿ ದೂರವಾಗಲು ಹೋದವರನ್ನು ಹತ್ತಿರಕ್ಕೆಳೆಯುತ್ತೇನೆ. ಇದನ್ನೆಲ್ಲವನ್ನೂ ಮೀರಿ ನಾನಿರುವುದೇ ಹೀಗೆ ಎಂದು ಹೊರಟವರನ್ನು ದೂರದಲ್ಲೇ ನಿಂತು ಹಾರೈಸಿದ್ದೇನೆ. ಯಾವುದೇ ಕ್ಷಣದಲ್ಲಿ ಅವರು ವಾಪಸ್ ಬರಬಹುದು ಎಂಬ ಸದಾಶಯದೊಂದಿಗೆ...

ಅಷ್ಟಕ್ಕೂ ಜೊತೆಗಿದ್ದವರ ಮನಸಿನ ಭಾವಗಳು ಬದಲಾಗುವುದೇಕೆ ಎಂಬ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಗುತ್ತಿಲ್ಲ. ಇಷ್ಟು ಮುಗಿಸುತ್ತಿದ್ದಂತೆ ಮೊಬೈಲ್ ರಿಂಗ್ ಆಯ್ತು. ನನ್ನ ಬಿಟ್ಟು ಹೋದವರಿರಬಹುದಾ ಎಂಬ ನಿರೀಕ್ಷೆಯೊಂದಿಗೆ ಫೋನ್ ಎತ್ತಿ ಕಿವಿಗಿಡುತ್ತೇನೆ..

Sunday, April 21, 2013

ಗಮ್ಯ ಹುಡುಕುತ್ತಾ ನಡುವೆ ವಿರಾಮದಲಿ...!!

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ


ನಿಸಾರ್ ಅಹಮದ್ ಅವರ ಈ ಸಾಲುಗಳನ್ನು ಈ ಹೊತ್ತಿಗೆ ಕೇಳುತ್ತಾ ಕುಳಿತರೆ ಮನದಲ್ಲಿ ಆದೇಕೋ ಒಂಥರಾ ಭಾವ. ಏನಾಗಿದೆ, ಏನಾಗ್ತಿದೆ. ಒಂದೂ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ಮನಸೇನು ಹಂಬಲಿಸುತ್ತಿದೆ ಅದೂ ಅರ್ಥ ಆಗುತ್ತಿಲ್ಲ.

ಬಹುಶಃ ಕಳೆದ ಬಾರಿ ನಾನು ಬರೆದಾಗ ನಾನೊಂದು ಗಮ್ಯದ ಬಗ್ಗೆ ಬರೆದಿದ್ದೆ. ಗಮ್ಯ ಸುಂದರವಾಗಿತ್ತು. ಗಮ್ಯದ ಹಾದಿಯನ್ನೂ ಚೆನ್ನಾಗಿಯೇ ಸವೆಸುತ್ತಿದ್ದೆ. ಆದರೆ ಹೊರಡುವ ಮೊದಲೇ ಹೇಳಿದ್ದೆ ಇದು ದುರ್ಗಮ ಹಾದಿ. ಕ್ಷಣ ಕ್ಷಣಕ್ಕೂ ಇಲ್ಲಿ ಎಲ್ಲವೂ ನನ್ನನ್ನು ಹೊಸಕಿ ಹಾಕುತ್ತದೆ. ಆದೇ ರೀತಿ ಆಗುತ್ತಿದೆ. ಆದರೆ ಗಮ್ಯ ಗಮ್ಯವೇ. ನಾನದನ್ನು ತಲುಪಿಯೇ ತಲುಪುತ್ತೇನೆ ಎಂಬ ಪರಿಪೂರ್ಣ ಆತ್ಮವಿಶ್ವಾಸ ನನಗಿದೆ. ತುಂಬಾ ದಿನಗಳ ಕಾಲ ಈ ಕಡೆ ತಲೆ ಹಾಕದೇ ಗಮ್ಯದ ಬಗ್ಗೆ ಗಮನ ಹರಿಸೋಣ ಅಂತಿದ್ದೆ. ಆದರೆ ಮನಸ್ಯಾಕೋ ಕೇಳುತ್ತಿಲ್ಲ. ಏನಾದ್ರೂ ಬರೀಬೇಕು ಎಂದು ತುಡಿಯುತ್ತಿದೆ. ಅದಕ್ಕೆ ಈ ಬರವಣಿಗೆ. ಇದೊಂದು ಕಾಲಹರಣದ ಬರಹ. ಆದರೆ ಕೆಲವು ನಿಮ್ಮ ಜೀವನದಲ್ಲಿ ಆಗಿರಬಹುದು.

ಮನದಲ್ಲಿ ಅದೇಕೋ ದುಗುಡ, ಮನದಲ್ಲಿ ಅದೇನೋ ಯೋಚನೆ. ಈ ಎಲ್ಲವನ್ನೂ ಮೆಟ್ಟಿ ನಿಂತು ನಾನು ಹೊರಗೆ ಬರುತ್ತೀನಾ? ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನ್ಯಾವತ್ತೂ ನನ್ನ ಆತ್ಮೀಯರನ್ನು ವಂಚಿಸಿಲ್ಲ. ಆದರೆ ಅವರು ವಂಚನೆಗೊಳಗಾಗುತ್ತಾರೆ ಎಂದು ಗೊತ್ತಾದಾಗಲೂ ನಾನು ಅವರಿಗೆ ಅದನ್ನು ಹೇಳದಿದ್ದರೆ ನಾನೊಬ್ಬ ಆತ್ಮೀಯ ಅಂತ ಹೇಳಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಅಂತಾ ಅವರಿಗೆ ನಾನು ಎಲ್ಲವನ್ನೂ ಹೇಳಿದ್ದೇನೆ. ಇದು ನಾನು ಪಿಯುಸಿ ಮುಗಿದಾಗಿನಿಂದಲೂ ರೂಢಿಸಿಕೊಂಡಿರೋ ಪದ್ಧತಿ. ಕೆಲವರಿಗೆ ಇದು ಇಷ್ಟವಾಗಿದೆ. ಹೆಚ್ಚಿನವರಿಗೆ ಕಷ್ಟವಾಗಿದೆ.

ಅಂದಿನಿಂದಲೂ ನಾನು ಹಲವು ಸಂಗತಿಗಳನ್ನು ಈಗಲೂ ನಾನು ನನ್ನಲ್ಲೇ ಇಟ್ಟುಕೊಂಡು ಬಿಟ್ಟಿದ್ದೇನೆ. ಅದೊಂಥರಾ ಚಿದಂಬರ ರಹಸ್ಯ. ಪ್ರಾಣ ಹೋದರೂ ನಾನು ಗುಟ್ಟು ಬಿಟ್ಟು ಕೊಡಲ್ಲ. ಆದರೆ ನಾನು ಸರಿ ಎಂಬ ಭಾವದಲ್ಲಿ ನಮಗೇ ಅಂತಹ ಒಂದು ನವಿರಾದ ಮೋಸವಾದಾಗ ನನಗೆ ಅದು ತಾಕಿಲ್ಲೆಂದು ಹೇಳುವವರಿಗೆ ನಾವೇನು ಹೇಳಲು ಸಾಧ್ಯ ಅಥವಾ ಅದು ನಮ್ಮ ಆತ್ಮೀಯರು ಅನಿಸಿಕೊಂಡವರಿಗೆ ತಾಕಲ್ಲ ಎಂದರೆ ನಾನೇನು ಮಾಡಲು ಸಾಧ್ಯ ಹೇಳಿ.

ಹೀಗೆ ನನ್ನ ಯೋಚನಾ ಲಹರಿ ಮುಂದುವರಿಯುತ್ತದೆ. ನಾನು ಯಾವತ್ತೂ ಬೆಳಕಿಗೆ ಹಾಗೂ ಕತ್ತಲಿಗೆ ಹೆದರಿದವನಲ್ಲ. ಆದರೆ ಬೆಳಕಿನ ಹೊತ್ತಲ್ಲೇ ನಮ್ಮ ಕಣ್ಣನ್ನು ಕತ್ತಲಾಗಿಸಲು ಯಾರಾದರೂ ಬಂದರೆ ಅದಕ್ಕೆ ನಾನು ಹೆದರುತ್ತೇನೆ. ಆದರೆ ಅದು ನನಗೆ ಗೊತ್ತಾಗೇ ಆಗುತ್ತೆ. ಬಹುಶಃ ಇದುವರೆಗೆ ನಾನು ನನ್ನ ಆತ್ಮೀಯರೆನಿಸಿಕೊಂಡ ಕೆಲವರನ್ನು ಕಳೆದುಕೊಳ್ಳುವ ಹಂತದವರೆಗೆ ಬಂದಿದ್ದು ಇದೇ ಕಾರಣಕ್ಕೆ. ಕೆಲವರು ತಾವು ತಪ್ಪು ಮಾಡುತ್ತಾ ತಾವೇನೂ ಮಾಡೇ ಇಲ್ಲವೇನೋ ಎಂಬಂತೆ ಮುಂದೆ ಬಂದು ನಿಂತರು. ಆತ್ಮವಿಶ್ವಾಸವಿಲ್ಲದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರನ್ನು ನಾವೇನು ಮಾಡಲು ಸಾಧ್ಯ ಹೇಳಿ. ಎಲ್ಲರನ್ನೂ ನಾನು ಅವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಹೇಳಿದಾಗ ಎಲ್ಲರೂ ಬೆರಗಾಗಿದ್ದಾರೆ. ನಮಗಿದೆಲ್ಲಾ ಗೊತ್ತಿರಲಿಲ್ಲ ಎಂದವರೂ ಇದ್ದಾರೆ.

ನಾನ್ಯಾವತ್ತೂ ಆತ್ಮೀಯರ ಆಯ್ಕೆಯಲ್ಲಿ ತುಂಬಾ ಚೂಸಿ. ಆದರೆ ಒಂದು ಸಾರಿ ಹಚ್ಚಿಕೊಂಡು ಬಿಟ್ಟರೆ ಮತ್ಯಾವತ್ತೂ ಅವರನ್ನು ಬಿಟ್ಟು ಕೊಟ್ಟೇ ಇಲ್ಲ. ಅವರಾಗೇ ಬಿಟ್ಟು ಹೋಗುತ್ತೇವೆ ಅಂದ್ರೂ ಮಧುರ ಸಂಬಂಧವೊಂದರ ಉಳಿಕೆಗಾಗಿ ನಾನು ಕಾಂಪ್ರಮೈಸ್ ಆಗ್ತೀನಿ. ಹೀಗಂತ ಹೇಳಿ ನಾನು ತಪ್ಪು ಮಾಡೇ ಇಲ್ವಾ. ನಾನಿಲ್ಲ ವೆಂದರೂ ನನ್ನ ಮನಸು ಒಪ್ಪಿಕೊಳ್ಳಲ್ಲ. ತಪ್ಪುಗಳಾದಾಗ ನಾನೇ ಅವರ ಮೊಗದಲ್ಲಿ ಒಂದು ನಗು ಅರಳುವವರೆಗೆ ಸುಮ್ಮನಿರಲ್ಲ. ಸಾರಿ ಕೇಳ್ತೀನಿ, ಕಾಲೆಳೆಯುತ್ತೀನಿ. ಕೊನೆಗೆ ಅವರೇ ಒಂದು ಥ್ಯಾಂಕ್ಸ್ ಅಂದು ಹೋಗಿ ಬಿಡ್ತಾರೆ. ಆ ಥ್ಯಾಂಕ್ಸ್ ನಲ್ಲಿ ಒಂದು ಪ್ರಾಮಾಣಿಕತೆಯಿದೆ ಎಂದು ನನಗನಿಸಿದರೆ ನನ್ನ ಕಣ್ಣು ತುಂಬಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ನನ್ನಲ್ಲೂ ಒಂದು ಸಂವೇದನೆ ಅನ್ನೋದು ಬಾಕಿ ಉಳಿದಿದೆ.

ಗಮ್ಯದ ಕಡೆ ಲಕ್ಷ್ಯ ಕೊಟ್ಟು ಹೊರಟ ನಾನೆಂಬ ದಾರಿ ಹೋಕನಿಗೆ ಹಾದಿಯಲ್ಲಿ ಹಲವು ಎಡರು ತೊಡರುಗಳು ಸಿಕ್ಕಿವೆ. ಯಾಕೋ ಈ ದಾರಿಯಲ್ಲಿ ನಾನು ಹೋಗುತ್ತಿರುವಾಗ ಸುಮಾರು ವರ್ಷಗಳ ಹಿಂದೆ ಹಾಗೂ ಇತ್ತೀಚೇಗೆ ನಡೆದ ಒಂದಷ್ಟು ವಿಷಯಗಳು ನೆನಪಾದವು. ಅದಕ್ಕೆ ಗಮ್ಯದ ಮಧ್ಯೆ ಒಂದು ನಿಲ್ದಾಣದಲ್ಲಿ ಕುಳಿತು ಬರೆಯುತ್ತಿದ್ದೇನೆ. ನಿಮಗಿಷ್ಟವಾಗಿದೆ ಎಂಬ ಭರವಸೆಯೊಂದಿಗೆ ವಿರಮಿಸುವೆ.

Monday, February 18, 2013

ಗಮ್ಯ ತಲುಪಲು ಹೊರಟಿದ್ದೇನೆ..!

ಳೆದೊಂದು ತಿಂಗಳಿಂದ ಕನಸು ಎಂಬ ಮೂರಕ್ಷರದ ಹಿಂದೆ ಬಿದ್ದಿದ್ದೇನೆ. ಈ ರೀತಿ ಕನಸೆಂಬ ಕುದುರೆಯನ್ನೇರುತ್ತೇನೆ ಎಂದು ಬಹುಶಃ ನನಗೇ ಗೊತ್ತಿರಲಿಲ್ಲ. ಆದರೆ ಈಗ ಕುದುರೆ ಏರಿಯಾಗಿದೆ. ಯುದ್ಧ ಗೆಲ್ಲುತ್ತೇನಾ, ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇನ್ನೇನಿದ್ದರೂ ಗುರಿ ಸಾಧಿಸುವ ತವಕ.

ಆ ಮಹತ್ವದ ಗುರಿ ಸಾಧಿಸುತ್ತೇನಾ ಗೊತ್ತಿಲ್ಲ. ಒಂದಂತೂ ನಿಜ. ನಾನು ತಲುಪಬೇಕೆಂದಿರುವ ಗಮ್ಯ ನನ್ನ ಕಣ್ಣ ಮುಂದೆ ಅಚ್ಚಳಿಯದೆ ಸದಾ ಇರುತ್ತದೆ. ಆದರೆ ದಾರಿಯಲ್ಲಿ ಒಂದಷ್ಟು ಅಡೆ ತಡೆಗಳು, ವ್ಯರ್ಥ ಪ್ರಲಾಪಗಳು ಎಲ್ಲಾ ಜೀವನದ ಹಾದಿಯಲ್ಲಿ ಬರುವಂತೆ ಬರುತ್ತದೆ. ಈ ಕನಸು ಸಾಕಾರವಾದರೆ ನಾನು ಈ ಜಗತ್ತಿನ ಸ್ವರ್ಗಸುಖಿ.

ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಒಂದಿಷ್ಟು ಸೆಂಟಿಮೆಂಟಲ್ ಗಳಿಗೆ ತಲೆ ಬಾಗುತ್ತಿದ್ದೇನಾ ಎಂದು ಮನಸು ಯೋಚಿಸಿರುತ್ತದೆ. ಆದರೆ ಕೆಲವು ಗಮ್ಯವನ್ನು ತಲುಪಬೇಕಾದರೆ ಕೆಲವೊಂದೆಡೆ ನಾನು ಶರಣು ಶರಣಾರ್ಥಿ ಎಂದು ತಲೆಬಾಗಲೇ ಬೇಕಾದೀತು. ಅದರಲ್ಲಿ ಕೆಲವೊಂದು ಮೂರು ವಾರದ ಹಿಂದೆ ನಡೆದು ಹೋಯಿತು.

ನಾನು ತಪ್ಪು ಮಾಡುತ್ತಿದ್ದೇನಾ..? ಹಾಗಂತ ಹೇಳಲು ಯಾವುದೇ ಕಾರಣಗಳಿಲ್ಲ. ಮನಸಿನಲ್ಲಿ ಬಿತ್ತಿದ ಕನಸಿಗೆ ಜೀವ ತುಂಬಲು ಹಾಗೆ ಮುಂದುವರಿಯಲೇ ಬೇಕಾದ ಅನಿವಾರ್ಯತೆ. ಕಳೆದ ವಾರ ಅದರಲ್ಲಿ ಒಂದೆರಡು ಹಂತಗಳನ್ನು ದಾಟಿದ್ದೇನೆ. ಆದರೆ ಈ ಮುಳ್ಳಿನ ಹಾದಿಯಲ್ಲಿ ಎಷ್ಟು ಸರಿಸಿದರೂ ಮುಳ್ಳಿನ ಮೇಲೆ ಕಾಲಿಟ್ಟರೆ ನೋವು ಅನುಭವಿಸಲೇಬೇಕು. ಅದನ್ನು ಎಷ್ಟು ತಪ್ಪಿಸಬೇಕೆಂದು ಹೊರಟರೂ ಯಾವುದೇ ತರಚಿದ ಗಾಯಗಳಿಲ್ಲದೆ ಮುಂದೆ ನಡೆಯಬೇಕಾದರೆ ಅದು ಸೂಕ್ಷ್ಮವಾದ ನಡಿಗೆಯಾಗಿರಬೇಕು. ಎಷ್ಟು ಸರಿಸಿ ನಡೆದರೂ ಹಾದಿ ದುರ್ಗಮವಾಗುತ್ತಿದೆ ಎಂದು ಅನಿಸುತ್ತಿದೆ.

ನಾನು ಈ ಪಾಟಿ ಒಂದು ಕೆಲಸಕ್ಕೆ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ಅನುಭವವಾಗಿತ್ತು. ಆದರೆ ಗಮ್ಯ ತಲುಪುವ ಮುನ್ನವೇ ನನ್ನ ದಾರಿಯಲ್ಲಿ ಬೇರಿನ್ಯಾರೋ ಬಂದರು. ಅಲ್ಲಿಗೆ ನನ್ನ ಉತ್ಸಾಹ ತುಂಬಿದ್ದ ಬುತ್ತಿಗೆ ಚುಚ್ಚಿದ ಅನುಭವ. ಆದರೆ ಅದು ಸೋಲಾಗಲಿಲ್ಲ. ಆಮೇಲೆ ಯಾವತ್ತೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈ ಕನಸಿನ ಹಾದಿಯಲ್ಲಿ ಈಗಾಗಲೇ ಯಶಸ್ಸಿನ ಶೇ.25ರಷ್ಟು ಹಾದಿಯನ್ನು ಸವೆಸಿದ್ದೇನೆ. ಇದು ಬೇಕಾ, ಬೇಡವಾ ಎಂದು ಯೋಚಿಸಿದ್ದೇನೆ. ಬಹಳ ದಿನಗಳ ಯೋಚನೆಗಳ ಬಳಿಕ ಒಂದು ತಿಳಿದುಕೊಂಡಿದ್ದೇನೆ. ಹಾದಿ ಕಠಿಣವಿದೆ. ಆದರೆ ಒಂದು ಸಾರಿ ನಾನು ಆ ಗಮ್ಯವನ್ನು ತಲುಪಿದರೆ ಬಹುಶಃ ಅದೇ ನನ್ನ ಪಾಲಿನ ಜೀವನದ ಅವಿಸ್ಮರಣೀಯ ದಿನ. ಆ ದಿನ ಅವಿಸ್ಮರಣೀಯ ಘಳಿಗೆಯಲ್ಲಿ ಪಾಲುದಾರರಾಗಲು, ಯಶಸ್ಸಿನ ಬಳಿಕ ಒಂದು ಹ್ಯಾಟ್ಸ್ ಆಫ್ ಹೇಳಲು ಎಲ್ಲರೂ ಇರುತ್ತಾರೆ. ಆ ಕ್ಷಣ ಕಣ್ಣಂಚು ತೇವಗೊಳ್ಳಲೇಬೇಕು.

ನನ್ನ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಮುಳ್ಳಿನ ಹಾದಿಯನ್ನು ಹೂವಿನ ಹಾದಿಯಾಗಿಸಲು ಹೊರಟಿದ್ದೇನೆ. ಈ ನಡಿಗೆಯಲ್ಲಿ ಅಂದುಕೊಂಡಂತೆಯೇ ನಡೆದರೆ ಸಂಪೂರ್ಣ ಕಥೆ ಹೇಳಲು ಮತ್ತೆ ಬರುತ್ತೇನೆ. ಈಗ ಬಲು ದುರ್ಗಮ ಹಾದಿಯಲ್ಲಿದ್ದೇನೆ. ಇನ್ನೂ ಒಂದಷ್ಟು ದುರ್ಗಮ ಹಾದಿ ದಾಟಿದರೆ ಗಮ್ಯ ಮತ್ತಷ್ಟು ಹತ್ತಿರವಾಗುತ್ತದೆ. ಅತ್ತ ಸೂರ್ಯಾಸ್ತದ ವೇಳೆ ಬಾನಿನಲ್ಲಿ ಒಂದಷ್ಟು ಹಕ್ಕಿಗಳು ಕಣ್ಣ ಮುಂದೆ ತಮ್ಮ ಗಮ್ಯದತ್ತ ಹೊರಟಿರುವಂತೆಯೇ ನಾನೂ ಹೊರಟಿದ್ದೇನೆ. ಗಮ್ಯ ತಲುಪಿದ ಮೇಲೆ ಮತ್ತೆ ಬರೆಯುತ್ತೇನೆ. ಕನಸು ನನಸಾದ ಬಳಿಕ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಈಗೇನಿದ್ದರೂ ನನ್ನ ಕನಸು ಬೆಂಬತ್ತುವ ಸಮಯ, ಹೋಗಿ ಬರುವೆ.

Tuesday, November 13, 2012

ಹಣತೆ ಬೆಳಗುತಿದೆ, ಮನದಲಿ ಕತ್ತಲಿದೆ..!!!

ಇದು ದೀಪಗಳ ಹಬ್ಬದ ಸಂಭ್ರಮದ ಸಮಯ. ಕಳೆದ ಬಾರಿ ಈ ಹಬ್ಬಕ್ಕೆ ಊರಲ್ಲಿದ್ದೆ. ಅದು ಒಂದು ಸಂಸ್ಥೆಯಿಂದ ಬಿಟ್ಟು ಇನ್ನೊಂದು ಸಂಸ್ಥೆಗೆ ಸೇರುವ ಮಧ್ಯೆ ಸಿಕ್ಕಿದ್ದ ಬಿಡುವಿನ ಸಂಭ್ರಮ. ಬಹುಶಃ ಸರಿ ಸುಮಾರು ಒಂದು ತಿಂಗಳ ಕಾಲ ನಾನು ಊರಲ್ಲಿದ್ದೆ. ಆದರೆ ಈ ಬರಿ ಕಾಂಕ್ರೀಟ್ ಕಾಡಲ್ಲಿದ್ದೇನೆ.

ಸಂಭ್ರಮ ಪಡುವುದಕ್ಕೆ ಇದು ಸೂಕ್ತ ಕಾಲವಲ್ಲ. ಕಾರಣ ನಾನು ಊರಲ್ಲಿಲ್ಲ. ಊರಲ್ಲಿದ್ದಿದ್ದರೆ ಸಾಲಾಗಿರಿಸಿದ್ದ ಹಣತೆಯ ಬೆಳಕನ್ನು ನೋಡುವ ಸಂಭ್ರಮ. ಅದಾದ ಮೇಲೆ ಪಟಾಕಿ ಹಚ್ಚುವ ಸಂಭ್ರಮ. ನಮ್ಮ ಊರಿನಲ್ಲಿ ಮನೆಯವರೆಲ್ಲಾ ಒಟ್ಟು ಸೇರಿ ಕುಟುಂಬ ಸಮೇತ ಈ ಹಬ್ಬವನ್ನು ಆಚರಿಸುತ್ತೇವೆ. ಮಕ್ಕಳ ಸಂಭ್ರಮ ಹೇಳತೀರದು.

ಇಂದು ಈ ಬರಹ ಬರೆಯಲು ಕುಳಿತಾಗ ನಾನು ಏಕಾಂಗಿ. ಕತ್ತಲೆಯಲ್ಲಿ ಬೆಳಕು ಹುಡುಕುವ ಸಂಭ್ರಮಕ್ಕಿಂತಲೂ ಯಾಕೋ ಯಾರೂ ಜೊತೆಗಿಲ್ಲ ಎಂಬ ಅನಾಥ ಭಾವ. ಅಷ್ಟಕ್ಕೂ ಈ ಒಂಟಿತನಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಯಾವುದೇ ಕಾರಣ ಹೊಳೆಯುತ್ತಿಲ್ಲ. ನಾವು ಅಷ್ಟು ಬೇಗ ಯಾರಿಗೋ ಕಾಲ ಕಸವಾಗಿಬಿಡುತ್ತೇವಾ..? ಗೊತ್ತಿಲ್ಲ. ಉತ್ತರ ಹುಡುಕುತ್ತಾ ಹೊರಟಿದ್ದೇನೆ. ಯಾಕೆಂದರೆ ಇದು ಫ್ಯಾಮಿಲಿ ಡ್ರಾಮಾ...!! ನನ್ನವರೆನಿಸಿಕೊಂಡ ಸಂಬಂಧಿಕರೇ ಇಲ್ಲಿ ಪಾತ್ರಧಾರಿಗಳು.

ನನ್ನ ಈ ಬ್ಲಾಗ್ ಕೊನೆಗೊಂದು ಸಾರಿ ಉಸಿರಾಡಿದ್ದು ಕಳೆದ ವರ್ಷ ಇದೇ ತಿಂಗಳು. ಇಂದು ನಾನು ಮತ್ತೆ ನಿಮ್ಮ ಮುಂದೆ ಬರೆಯುತ್ತೇನೆ ಎಂಬ ನಿರೀಕ್ಷೆಯೂ ನನ್ನಲ್ಲಿರಲಿಲ್ಲ. ಮನದಲ್ಲಿ ಯಾಕೋ ಅನಾಥ ಭಾವ. ಇಷ್ಟು ದಿನದಿಂದ ಯಾವತ್ತೂ ಕಾಡದಿದ್ದ ಅದೇನೋ ಅನಾಥ ಭಾವ ನನ್ನನ್ನಿಂದು ಕಾಡಿದೆ. ಇದಕ್ಕೆ ಕಾರಣ ಹುಡುಕಿದರೆ ಕಾರಣ ಸಿಗುತ್ತಾ...? ಸದ್ಯಕ್ಕೆ ಇರುವ ಉತ್ತರ ಗೊತ್ತಿಲ್ಲ ಎಂದು. ಆದರೂ ಸಣ್ಣ ಒಂದು ಕೊಂಡಿ ಸಿಕ್ಕಿದರೂ ಸಾಕು. ಪ್ರವಾಹದಲ್ಲಿ ಸಿಲುಕಿದವನಿಗೆ ಕಡ್ಡಿ ಸಿಕ್ಕಿದಂತೆ ನಾನು ಈಜಿ ದಡ ಸೇರುತ್ತೇನೆ.

ಸಂಬಂಧಗಳೆಂಬ ಮಿಸ್ಸಿಂಗ್ ಲಿಂಕಿನಲ್ಲಿ ಎಲ್ಲೋ ಬೆಳೆದ ನಾನು ಇಷ್ಟು ಅನಾಥನಾಗಲು ಕಾರಣವೇನು. ಉಹೂಂ, ಕುಳಿತು ಎಷ್ಟು ಯೋಚಿಸಿದರೂ ಹೊಳೆಯುತ್ತಿಲ್ಲ. ಆದರೆ ಒಂದಂತೂ ನಿಜ ಮನಸ್ಸು ಸುಮಾರು ದಿನಗಳ ನಂತರ, ಅಲ್ಲ ಸಾರಿ, ತಿಂಗಳ ನಂತರ ಯಾಕೋ ಈ ಪರಿ ಕಾಡುತ್ತಿದೆ. ಮಾಡದ ತಪ್ಪನ್ನು ಒಪ್ಪಿಕೋ ಎಂದರೆ ಯಾವ ಮನಸು ತಾನೇ ಒಪ್ಪುತ್ತೆ ಹೇಳಿ. ಮನಸ್ಸಿಗೇನಾಗಿದೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ಬೇಸರ, ಸಂತಸ, ದುಗಡ, ದುಮ್ಮಾನಗಳನ್ನು ದೂರ ಮಾಡಲು ಒಂದು ಬ್ರಹ್ಮ ವಿದ್ಯೆ ಇದ್ದಿದ್ದರೆ....... ಎಂದು ಮನಸು ಬಯಸುತ್ತಿದೆ. ಆದರೆ ಈಗ ಒಂಥರಾ ಬರಗಾಲ ಮನಸ್ಸಿಗೆ. ಹಾಗಾಗಿ ಸದ್ಯಕ್ಕೆ ಮನಸ್ಸೂ ಖಾಲಿ ಖಾಲಿ.

ನನ್ನ ಕನಸಿನಲ್ಲಿ ಬಂದ ಆ ಕೆಟ್ಟ ಘಳಿಗೆ ನಿಜವಾಗದೇ ಇರಲಿ ಎಂದು ಮನಸು ಬಯಸುತ್ತಿರುತ್ತದೆ. ಆದರೆ ಅದೆಲ್ಲವನ್ನೂ ಮೀರಿ ನಾನು ನಿಲ್ಲಬಲ್ಲೆ ಎಂದು ಸುಳ್ಳಿನ ಗೋಪುರ ಕಟ್ಟಿ ಬಾಳುವುದಕ್ಕಿಂತ ಎರಡು ಹನಿ ಕಣ್ಣೀರು ಚುಳ್ಳನೆ ಕೆನ್ನೆಗಿಳಿದರೆ ಮನಸಿನಲಿ ಅದ್ಯಾವುದೋ ಸಮಾಧಾನ. ಭೋರ್ಗರೆದ ಎಲ್ಲಾ ಬೇಸರಗಳು ಅದ್ಯಾವುದೋ ಕ್ಷಣದಲ್ಲಿ ನಮ್ಮನ್ನು ಬಿಟ್ಟು ದೂರ ಸಾಗಿರುತ್ತದೆ. ಕಳೆದ ಅಷ್ಟೂ ವರುಷಗಳಲ್ಲಿ ಯಾವಾಗಲೂ ಏನಾದರೂ ಒಂದು ನಡೆಯುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ.

ನನಗೆ ಯಾರ, ಯಾವ ಕೊರತೆಯಿದೆ. ಉಹೂಂ ಯಾರದ್ದೂ ಇಲ್ಲ. ಒಬ್ಬರನ್ನು ಮೀರಿಸಿದವರೊಬ್ಬರು ಎಂಬಂತಿದ್ದಾರೆ ನನ್ನ ಜೊತೆಗೆ. ಆದರೆ ಜೊತೆಗಿದ್ದವರ ಮನಸ್ಸಿಗೇನಾಗಿದೆ. ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಮನೆಗೆ ಬಂದು ಕುಳಿತರೆ ಎಲ್ಲರೂ ಮನೆಯ ಹೊರಗಡೆ ಕ್ಯಾಂಡಲ್ ಅಥವಾ ಹಣತೆ ಹಚ್ಚಿ ಸಂಭ್ರಮಿಸುತ್ತಿದ್ದರೆ ಇಲ್ಲಿ ಇತ್ತ ನನ್ನ ಕೋಣೆಯಲ್ಲಿ ಅದೇ ಅಮಾವಾಸ್ಯೆಯ ಕಾರ್ಗತ್ತಲು. ಇದೆಲ್ಲವನ್ನೂ ದಾಟಿ ನಾನು ಮುಂದೆ ಹಣತೆ ಬೆಳಗುತ್ತೇನಾ..? ಆ ಹಣತೆ ಮನಸಿನಲ್ಲಿ ಕಾಣಿಸಿರುವ ಕಲ್ಮಶಗಳನ್ನು ದೂರ ಮಾಡುತ್ತಾ ಗೊತ್ತಿಲ್ಲ. ಆದರೆ ನಿರೀಕ್ಷೆಯಿದೆ. ಯಾಕೆಂದರೆ ನಂಬಿಕೆ ಯಾವತ್ತಿಗೂ ಮುಖ್ಯ. ಅದೊಂಥರಾ ಸಣ್ಣ ಮಗುವನ್ನು ನಾವು ಮುದ್ದಾಡುತ್ತಾ ಮೇಲಕ್ಕೆಸೆದಂತೆ. ಮಗುವಿಗೆ ಗೊತ್ತಿರುತ್ತೆ, ನಾನು ಕೆಳಗೆ ಬೀಳಲು ನನ್ನನ್ನು ಎಸೆದ ವ್ಯಕ್ತಿ ಬಿಡಲ್ಲ ಎಂದು. ಅದಕ್ಕೇ ಆ ಮಗು ಅಷ್ಟೆಲ್ಲಾ ರಿಸ್ಕ್ ಜೊತೆ ಮೇಲಕ್ಕೆಸೆಯಲ್ಪಟ್ಟಿದ್ದರೂ ಮಂದಹಾಸದ ನಗುವನ್ನು ನೀಡುತ್ತಿರುತ್ತದೆ. ಸದ್ಯಕ್ಕೆ ನಾನು ಮಗುವಾಗಬೇಕಾದ ಅನಿವಾರ್ಯತೆ.

ಪರವಾಗಿಲ್ಲ, ಕಾಲ ಉರುಳುತ್ತಿರುತ್ತದೆ. ಎಲ್ಲರಿಗೂ ಸತ್ಯ ಯಾವುದೆಂದು ಗೊತ್ತಾಗುತ್ತೆ. ಆದರೆ ಸದ್ಯಕ್ಕೆ ಹಣತೆ ಸರಿಯಿದೆ, ಅದರಲ್ಲಿದ್ದ ಬೆಳಕೂ ಸರಿಯಿತ್ತು. ಆದರೆ ಹಣೆ ಬರಹ ಸರಿಯಿಲ್ಲ. ಅದಕ್ಕಾಗಿ ಈ ಬರಹವನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ. ಸುಮಾರು ದಿನಗಳ ಬಳಿಕ ಬರೆದಿದ್ದೇನೆ. ಸ್ವಲ್ಪ ತಪ್ಪುಗಳಿರಬಹುದು, ಆದರೆ ಬರಹದ ಭಾವಗಳಲ್ಲಿ ತಪ್ಪಿಲ್ಲ. ಯಾಕೋ ಈ ಸಾಲು ಬರೆಯುವ ಹೊತ್ತಿಗೆ ನನ್ನ ಕಣ್ಣುಗಳೆರಡೂ ತೇವವಾಗಿದೆ. ಆ ಅಸ್ಪಷ್ಟತೆಯ ಹಿಂದೆ ಬಂದು ಒಂದು ತುಂಟ ನಗೆ ಬೀರಿ ಹೋದವರು ಯಾರು..? ಅದು ನೀನೇನಾ......?

Monday, November 28, 2011

ನೀನು @ 28

ಇನ್ನು ಕೆಲವೇ ದಿನಗಳಲ್ಲಿ ಅದೇ ಹಳೆಯ ಸಂಭ್ರಮ ಮರುಕಳಿಸುತ್ತಾ ಗೊತ್ತಿಲ್ಲ. ಆದರೆ ಈ ದಿನ ಮಾತ್ರ ಬದಲಾಗುವುದಿಲ್ಲ. ಇದು ಜೀವನದಲ್ಲಿ ಯಾವುದೇ ಕಾರಣಕ್ಕೂ ಬದಲಾಯಿಸಲಾಗದ ದಿನ. ಅಂಕಿ ಸಂಖ್ಯೆಗಳೇ ಹಾಗೆ. ಅದು ಏರುತ್ತಾ ಇರುತ್ತೆ. ಏನೇನೋ ಹೇಳ್ತಾ ಇದ್ದಾನಲ್ಲಾ ಕನ್ಫ್ಯೂಸ್ ಆಗ್ಬೇಡಿ. ಪ್ರತಿ ವರುಷ ನಾನು ಈ ದಿನವನ್ನು ಶ್ರದ್ಧೆಯಿಂದ ಕಾಯುತ್ತೇನೆ. ಆ ದಿನ ನಾನು ಏನೇನು ಮಾಡಬೇಕು ಅಂದ್ಕೊಂಡಿರುತ್ತೇನೇ ಅದೆಲ್ಲವನ್ನೂ ಮಾಡುತ್ತೇನೆ. ಈಗಲೂ ನಾನು ಮಾಡುತ್ತಿರುವುದು ಅದನ್ನೇ.

ಮನುಷ್ಯನಿಗೆ ವಯಸ್ಸಾದಂತೆ ಮರೆವು ಅತಿಯಾಗುತ್ತೆ ಅನ್ನೋದು ಹಿರಿಯರ ಮಾತು. ಆ ಮಾತನ್ನು ನೀನು ಉಳಿಸಿಕೊಂಡಿದ್ದೀಯಾ ಬಿಡು. ಅದರಲ್ಲಿ ನಿನ್ನ ತಪ್ಪೇನೂ ಇಲ್ಲ. ವಯಸ್ಸೇ ಹಾಗೆ. ಆದರೆ ನನ್ನ ಸ್ಥಿತಿ ನೋಡು ಯಾವತ್ತೂ ಯಾವುದನ್ನೂ ಮರೆತಿಲ್ಲ. ಎಸ್ಪೆಷಲಿ ಲೈಫ್ @ ವಿವಿ ಕ್ಯಾಂಪಸ್. ಹಾಗೆ ಮರೆಯುವುದಕ್ಕಾಗುವ ದಿನವೇ ಅಲ್ಲ.

ನಾವು ಕಾಲೇಜಿಗೆ ಬರುತ್ತಿದ್ದ ದಿನಗಳು ಹೇಗಿದ್ದವು ಎಂದು ಸುಮ್ಮನೆ ಒಂದು ಸಾರಿ ಯೋಚಿಸಿ ನೋಡು. ಬೆಳಗ್ಗೆ 9.30ಕ್ಕೆ ಕ್ಲಾಸಿಗೆ ಬಂದವರಿಗೆ ಮಧ್ಯಾಹ್ನ ಕ್ಲಾಸ್ ಮುಗಿಯುತ್ತಿದ್ದವು. ಆಮೇಲೆ ಇಡೀ ದಿನ ನಾವೇನು ಮಾಡುತ್ತಿದ್ದೆವು. ಆನಂತರ ಏನಾಯ್ತು ಅನ್ನೋದು ನಮಗೆ ಮಾತ್ರ ಗೊತ್ತು. ವರುಷಗಳು ಉರುಳುತ್ತಿದ್ದಂತೆ ಅವು ಯಾವ ರೀತಿಯಲ್ಲಿ ಬದಲಾಯಿತು ಅನ್ನೋದನ್ನು ನಾವು ಚಿಂತಿಸಲೇಬೇಕು. ಆದರೆ ಸದ್ಯ ನಮ್ಮದು ಬ್ಯುಸಿ ಲೈಫ್.. ಯಾವುದಕ್ಕೂ ಪುರುಸೊತ್ತಿಲ್ಲದ ಜೀವನ ನಮ್ಮದು. ಏನೋ ಮಾಡಲು ಹೋಗಿ ಇನ್ಯಾವುದರ ಕಡೆಗೆ ತಿರುಗೋ ನಮ್ಮ ಹುಚ್ಚುಕೋಡಿ ಮನಸು. ಇದರಲ್ಲಿ ಯಾವುದನ್ನು ಬೇಡ ಅಂತೀಯಾ ಹೇಳು ನೋಡೋಣ.

ಇವತ್ತಿಗೂ ನನಗೆ ಮಧ್ಯಾಹ್ನದ ಕ್ಯಾಂಟೀನ್ ಊಟ ನೆನಪಾಗುತ್ತೆ. ಮಧ್ಯಾಹ್ನ ಮೊಸರಿಗೆ ಸಕ್ಕರೆ ಹಾಕಿ ತಿಂದ ದಿನಗಳು ಕಾಡಿದ್ದರೆ ಕಣ್ಣಂಚಲ್ಲಿ ತೇವ. ಸಂಜೆಯಾದರೆ ಕ್ಯಾಂಟೀನಲ್ಲಿ ಬನ್ಸ್ ಇದ್ದರೆ ಮೆಲ್ಲನೆ ಸವಿಯುವ ನಿನ್ನ ಬಗೆ. ಬೇರೆ ಯಾರಿಗೂ ಸಿಗದ ಸೂಪರ್ ಸ್ಟ್ರಾಂಗ್ ಕೋಲ್ಡ್ ಕಾಫಿ ತಯಾರು ಮಾಡಲು ಕ್ಯಾಂಟೀನ್ ದೊರೆ ಪ್ರಕಾಶ್ ನೀಡುತ್ತಿದ್ದ ಆದೇಶ. ನೊರೆ ನೊರೆ ಉಕ್ಕಿ ಹರಿಯುತ್ತೇನೇ ಎಂಬಂತೆ ವೆಯ್ಟರ್ ತಂದಿಡುತ್ತಿದ್ದ 2 ಗ್ಲಾಸ್ ಕೋಲ್ಡ್ ಕಾಫಿ. ಅದು ಹೊಟ್ಟೆಗಿಳಿಯುತ್ತಿದ್ದಂತೆ ನೀನು ಮಂದಸ್ಮಿತೆ... :-) ಕಾಫಿ ಕೆಟ್ಟಿತೋ ನನ್ನ ಗ್ರಹಚಾರವೂ ಕೆಟ್ಟಂತೆ...:-( ಅಲ್ಲಿಂದ ಮತ್ತೆ ಲೈಬ್ರರಿಗೆ ತೆರಳಿ ಅಲ್ಲಿಂದ ಒಂದು ಸಣ್ಣ ವಾಕ್. ಆ ವಾಕ್ ನಲ್ಲಿ ಅಮ್ಮನಿಗೊಂದು ಪುಟ್ಟ ಫೋನ್ ಕಾಲ್. ಫೋನ್ ಕೆಳಗಿಟ್ಟರೆ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿ ಸಂಭ್ರಮ ಪಡುವ ನಿನ್ನ ಬಗೆ. ಅದನ್ನು ಗುರುತಿಸುತ್ತಾ ನಕ್ಷತ್ರವನ್ನು ದಿಟ್ಟಿಸಿ ಕತೆ ಹೇಳುತ್ತಿದ್ದುದು ಆ ದೇವರಿಗೇ ಪ್ರೀತಿ... ಅಲ್ಲಿಗೇ ಮುಗಿಯುತ್ತಾ. ಉಹೂಂ, ನೀನು ಅಂತವಳೇ ಅಲ್ಲ... ಅದು ಮೊಗೆದಷ್ಟೂ ಸಿಗುವ ಅಕ್ಷಯಪಾತ್ರೆಯ ಗುಣಸಂಪನ್ನೆ.

ಯಾವುದಾದರೂ ಒಂದು ಭಾನುವಾರ ಬೆಳಗಿನ ಜಾವ ಬಂದರೆ ಕಡೆಗೋಲು ಕೃಷ್ಣನ ಊರು ಉಡುಪಿಗೆ. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ಹೊಟ್ಟೆ ತುಂಬಿಸಿದರೆ ನಮಗೆ ಬೆಳಗ್ಗೆಯೇ ಹೋಟೆಲ್ ಒಳಗೆ ಸೇರುವ ಹುಚ್ಚು.. ಬಸ್ ಇಳಿದು ಈ ಕಡೆ ಬರುತ್ತಿದ್ದಂತೆ ನಮ್ಮ ಸ್ವಾಗತಕ್ಕೆ ಕಾಯ್ತಾ ನಿಂತಿದ್ದಾಳೇನೋ ಎಂಬಂತೆ ಕಾಯುವ 'ಡಯಾನಾ' - ನಿಮ್ಮ ಸೇವೆಯಲ್ಲಿ. ನಾವು ವಿವಿಯಲ್ಲಿದ್ದ ಕಡೆಯ ದಿನ ಹೋಗಿದ್ದು ನೆನಪಿದೆಯಾ. ಅದು 2006ರ ಮೇ 15. ಅಂದು ನೀನು ನೀಡಿದ ಕೃಷ್ಣನ ಗ್ರೀಟಿಂಗ್ ಕಾರ್ಡಿನಲ್ಲಿ ಬರೆದಿದ್ದು ಇಷ್ಟು -

ಆದುದಕ್ಕೆ,
ಆಗದಿದ್ದುದಕ್ಕೆ
ಕೃಷ್ಣನಿದ್ದ...
ಎಂದಿಗೂ ಇರುವ
ಇಂದಿನಂತಿರು....
ಸಂತೋಷವಾಗಿರು

(ನಿನಗೆ ಭವಿಷ್ಯದ ಕನಸು ಅಂದು ಬಿದ್ದಿತ್ತಾ ಗೊತ್ತಿಲ್ಲ. ಆದರೆ ಆ ಬರಹದಲ್ಲಿ ನೀನು ಬರೆದ ಎಲ್ಲಾ ಶಬ್ದಗಳೂ ನಿಜವಾಯಿತು. ಆ ಮುನ್ಸೂಚನೆಯನ್ನು ನಿನಗೆ ಅಂದು ನೀನು ನಂಬಿದ್ದ ಆ ದೇವರು ಕೊಟ್ಟಿದ್ದನಾ...? ಗೊತ್ತಿಲ್ಲ, ಅದನ್ನು ನೀನು ಹೇಳಬೇಕು.)

ಮೊನ್ನೆ ನೀನು ವಿಶ್ವವಿದ್ಯಾನಿಲಯದಲ್ಲಿ ಕುಳಿತು ನಿನ್ನ ಜೊತೆ ಮಾತನಾಡುತ್ತಿದ್ದ ಹಾಗೆ ಕೂತು ಮಾತನಾಡಬೇಕು ಅಂತಾ ಹೇಳಿದೆ ನೋಡು, ಅದೇಕೋ ಅಂದು ಸುಮ್ಮನೆ ಯೋಚಿಸಿದಾಗ ಇದೆಲ್ಲಾ ನೆನಪಾಯಿತು. ನೀನು ಹೇಳಿದ್ದೆಲ್ಲಾ ಬರೆಯುತ್ತಾ ಕುಳಿತರೆ ನಾನು ಅದ್ಭುತ ಬರಹಗಾರನಾಗದೇ ಇರಲು ಸಾಧ್ಯಾನಾ?. ಸುಮ್ಮನೆ ಯೋಚಿಸಿ ನೋಡು. ಏನಾದರೂ ತಲೆಗೆ ಹೊಳೆದರೆ ಹೇಳು. ಇಂತಹ ಸಾವಿರಾರು ನೆನಪುಗಳನ್ನು ಕೊಟ್ಟ ನಿನ್ನನ್ನು ಎಷ್ಟು ನೆನಪಿಟ್ಟರೂ ಸಾಲದು. ಅದೆಲ್ಲಕ್ಕಿಂತಲೂ ನಿನ್ನ ಆ ಕೇರಿಂಗ್ ನೇಚರ್ ಇದೆಯಲ್ಲಾ. ಅದು ನಾನಿದುವರೆಗೆ ನೋಡಿದ ಯಾರಲ್ಲೂ ಸಿಗಲಿಲ್ಲ.. ಅಂತಹ ಚಾರ್ಮಿ ಲೇಡಿಗೆ ಈಗ ಸಂಭ್ರಮದ ಸಮಯ. ಶುಭಾಶಯ ಹೇಳದೇ ಇರಲು ಸಾಧ್ಯವೇ ಇಲ್ಲ. ಅದಕ್ಕೇ ಹೇಳಿದ್ದು,


"ನೀನು @ 28"ಗೆ ನಾನು @ ನೆನಪಿನ ಶುಭಾಶಯ.

Sunday, November 28, 2010

ಕರುಣಾಳು ಬಾ ಬೆಳಕೆ, ಆರದಿರಲಿ ಬೆಳಕು

ಇದು ೨೭ರ ಸಂಭ್ರಮ. ಈ ಸಂಭ್ರಮದಲ್ಲಿ ಅದ್ಭುತವಾದ ಸುಖವಿದೆ. ಯಾಕೋ ಗೊತ್ತಿಲ್ಲ. ೨೦೦೪ರ ಬಳಿಕ ಪ್ರತಿ ವರ್ಷದಲ್ಲೂ ಒಂದೊಂದು ಸೊಬಗು. ಒಂದೊಂದು ಅಚ್ಚರಿ. ಕಣ್ಣ ರೆಪ್ಪೆಯ ಬಡಿದು ತೆಗೆದಿರಬೇಕಾದರೆ ಏನೇನೋ ತಿರುವು. ಎಲ್ಲವೂ ಸುಂದರ ದಿನಗಳು. ಅದರ ನಡುವೆ ಒಂದಿಷ್ಟು ಕೋಪ, ಸಿಟ್ಟು, ಸಿಡುಕು, ಸೆಡವು, ಬೇಸರ, ರೌದ್ರತೆ, ಕೊನೆಗೆ ಅತಿ ಕೆಟ್ಟ ಕೋಪ. ಆಮೇಲೊಂದು ಸುದೀರ್ಘ ಮೌನ. ನಂತರ ಕೆಲವು ಮೇಘ ಸಂದೇಶ ಹೀಗೆ ಕಲ್ಪನೆ ಮತ್ತು ವಾಸ್ತವದ ತೆರೆ ಬಿಚ್ಚುತ್ತಾ ಸಾಗುತ್ತದೆ. ಬಹುಶಃ ವ್ಯಕ್ತಿ ಪರಿಪೂರ್ಣಗೊಳ್ಳುವುದು ಹೀಗೆಯೇ ಏನೋ...?

ಎಲ್ಲೋ ದೂರದಲ್ಲಿ ಇಟ್ಟಿದ್ದ ವೀಣೆಯ ತಂತಿ ಹರಿದು ಹೋಗಿತ್ತು. ತಂತಿಯ ಹಿಡಿದು ಸರಿಪಡಿಸಿದರೂ ನಾದ ಹೊರಗೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಆ ಮೌನದಲ್ಲೂ ಏನೋ ಲಯ, ತಾಳ ಎಲ್ಲವೂ ಸಮ್ಮಿಳಿತವಾಗುತ್ತಿತ್ತು. ಇಂದಿಗೂ ನನಗೆ ಸರಿಯಾಗಿ ನೆನಪಿದೆ. ಅದೆಷ್ಟೋ ಸಾರಿ ಆಕಾಶ ದಿಟ್ಟಿಸಿ ಕೆಲವೇ ಕೆಲವು ನಕ್ಷತ್ರಗಳನ್ನು ದಿಟ್ಟಿಸಿ ನೋಡಿದ್ದೇನೆ. ಆ ನಕ್ಷತ್ರಗಳ ಜೊತೆ ಹಲವು ಬಾರಿ ಚಂದಿರನನ್ನೂ ನೋಡಿದ್ದೇನೆ. ಅವ್ಯಾವುದೂ ಬದಲಾಗಲಿಲ್ಲ. ಬದಲಿಗೆ ನಾವು ಬದಲಾದೆವು. ಹಾಗನ್ನೋದಕ್ಕಿಂತಲೂ ನಾವು ಬದಲಾಗಿದ್ದೇವೆ ಎಂದು ಕಲ್ಪಿಸಿಕೊಂಡೆವು. ಅದರೂ ಪ್ರಯೋಜನವಾಗಲಿಲ್ಲ.

ಈ ಕತೆಗಳನ್ನೆಲ್ಲ ಅದ್ಯಾಕೆ ಬರೆದೆನೋ ಗೊತ್ತಿಲ್ಲ. ಇಂದು ಗೆಳತಿಗೆ ೨೭ ಮುಗಿದು ೨೮ರ ಮಡಿಲು ಸೇರಿದ ಸಂಭ್ರಮ. ಬಹುಶಃ ಜೀವನ ಅಂದರೆ ಏನು ಎನ್ನುವುದನ್ನು ಅದ್ಭುತವಾಗಿ ತಿಳಿದ ಗೆಳತಿ. ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ ಪರರ ಹಿತ ಬಯಸುವವಳು. ನನಗೆ ಸುಂದರ ಬದುಕಿನ ಪಾಠ ಹೇಳಿಕೊಟ್ಟವಳು. ಕೆಲವು ದಿನದ ದೀರ್ಘ ಮೌನವನೂ ಸಹಿಸಿಕೊಂಡವಳು. ಅದು ಬಿಟ್ಟರೆ ಈಗಲೂ ಅದೇ ತುಂಟತನ, ವಯ್ಯಾರ, ಹುಸಿಮುನಿಸು. ಇಂತವರು ನಿಮಗೆ ಸಿಗೋದು ಬಲು ಅಪರೂಪ.

ಗೆಳತಿಗೆ, ಇಲ್ಲಿರುವ ಪ್ರತಿ ಪದವೂ ನಿನ್ನನ್ನು ಕಾಡುತ್ತೆ. ಕಾಡುತ್ತೆ ಅನ್ನೋದಕ್ಕಿಂತಲೂ ನಿನ್ನ ತಾಕುತ್ತೆ. ಅದರ ನಡುವೆ ಈ ದಿನದ ಕೊನೆಯ ಕ್ಷಣದಲಿ ನಿನ್ನ ಬಗೆಗೆ ಬರೆಯೋಣ ಎನಿಸಿತು. ಈಗಲೂ ನೀನು ಮೊನ್ನೆ ಹೇಳಿದ ಆ ಹಾಡೂ ಸೇರಿದನಂತೆ ಮತ್ತೆರಡು ಹಾಡು ಕೇಳುತ್ತಾ ಇದನ್ನು ಬರೀತಾ ಇದ್ದೇನೆ. ಅದ್ಯಾಕೋ ಮನದಲ್ಲೇನೋ ಆರ್ದ್ರ ಭಾವ. ನನ್ನ ಇಷ್ಟೆಲ್ಲಾ ಸಂಭ್ರಮಗಳಿಗೆ ಕಾರಣಳಾದ ಸುಂದರ, ಸುಮಧುರ, ಸುಲಕ್ಷಣ ಸಂಪನ್ನೆಗೆ ಶುಭ ಹಾರೈಕೆಯಿದು ಆರದಿರಲಿ ಬೆಳಕೂ..
೨೮ ರ ಶುಭ ಘಳಿಗೆಯಲಿ ನಿನಗೆ ಜನುಮದಿನದ ಶುಭಾಶಯಗಳು.