Sunday, August 23, 2009

ಈ ರಜೆಯ ಮುಂಜಾವದಲಿ ಹೊರಡುತ್ತಿದ್ದೇವೆ...

ಇಂದು ಆಫೀಸ್‌ಗೆ ರಜೆ. ಅರ್ಥಾತ್ ನಾನು ಬೆಂಗಳೂರಲ್ಲಿ ಇರಬಾರದು! ಈ ನಿಯಮ ಸಿಂಪಲ್. ಕಚೇರಿಗೆ ಕ್ಲೋಸ್ಡ್ ಹಾಲಿಡೇ ಇದ್ದ ದಿನ ನಾನು ಯಾವ ಕಾರಣಕ್ಕೂ ಬೆಂಗಳೂರಲ್ಲಿ ಇರುವುದಿಲ್ಲ. ಅದು ಬೆಂಗಳೂರಿನ ಮೇಲಿನ ಸಿಟ್ಟಾ? ಇಲ್ಲಾ, ಅಷ್ಟೂ ದಿನಗಳಲ್ಲಿ ಇಲ್ಲಿ ಅನುಭವಿಸಿದ ಟ್ರಾಫಿಕ್ ಜಂಜಾಟವಾ? ನಿರ್ದಿಷ್ಟ ಕಾರಣವಂತೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಂದು ಫುಲ್ ಡೇ ಬೆಂಗಳೂರಲ್ಲಿ ಕಳೆಯಲು ನನಗೆ ಪ್ರಿಯ ಎನಿಸುವಂತಹ ಜಾಗ ಯಾವುದೂ ಇಲ್ಲ. ಮೊದಲು ಇಸ್ಕಾನ್ ನನ್ನ ರಮ್ಯ, ಭವ್ಯ ತಾಣವಾಗಿತ್ತು. ಆದರೆ ಬೆಂಗಳೂರು ನನಗೆ ಆಪ್ತವಾದಂತೆ (?) ಇಸ್ಕಾನ್ ನನಗೆ ಭಕ್ತಿಯ ಭಾವವನ್ನು ಸುರಿಸಲಿಲ್ಲ. ಹಾಗಂತ ಪ್ರೀತಿಯ ಕೃಷ್ಣನನ್ನು ನಾನು ದೂರ ಮಾಡಲಿಲ್ಲ. ಆತನ ಮೇಲಿನ ಭಕ್ತಿ ದೂರಾಗಲಿಲ್ಲ.
ಬೆಂಗಳೂರು ಎಂಬ ಜಾಗ ಎಲ್ಲರಿಗೂ ವೆಲ್‌ಕಮ್ ಎನ್ನುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿ ನಾನೂ ಒಬ್ಬನಾಗಿ ಇಲ್ಲಿ ಸೇರಿ ಹೋಗಿದ್ದೆ. ಬೆಂಗಳೂರಿಗೆ ಬಂದು ಕಳೆದ ಈ ಮೂರೂ ಕಾಲು ವರ್ಷದಲ್ಲಿ ಬೆಂಗಳೂರು ಬದಲಾಗಿದೆ. ಆದರೆ ನನ್ನ ಪಾಲಿಗೆ ನಾನು ಬದಲಾಗಲಿಲ್ಲ. ಕೆಲವರು ನೀನು ತುಂಬಾ ಬದಲಾಗಿದ್ದೀಯ ಎಂದು ದೂರಿದರೆ ಅದು ನನ್ನ ದೋಷವಲ್ಲ.
ಆರಂಭದ ಕೆಲದಿನಗಳನ್ನು ಬಿಟ್ಟರೆ ನಾನು ಹಾಗೂ ನನ್ನ ಜತೆ ಕೆಲಸ ಮಾಡುವ ಸಹೋದ್ಯೋಗಿಗಳು ಒಂದಲ್ಲ ಇನ್ನೊಂದು ಕಡೆಗೆ ಟ್ರಿಪ್ ಹೋಗಿ ಬರುತ್ತಿದ್ದೆವು. ಹಾಗೆ ಕಳೆದ ಬಾರಿ ಏಪ್ರಿಲ್ ತಿಂಗಳ ಯುಗಾದಿ ಸಂಭ್ರಮದಲ್ಲಿ ನಾವು ಮಂಜಿನ ನಗರಿ ಮಡಿಕೇರಿಯಲ್ಲಿದ್ದೆವು.
ಈ ಬಾರಿ ನಾವು ಎಲ್ಲವೂ ಅಂದುಕೊಂಡಂತೆಯೇ ಸಾಗಿದ್ದರೆ ನಾವು ಇಂದು ಮುಂಜಾನೆಯ ವೇಳೆ ಚೆನ್ನೈಯಲ್ಲಿ ಇರುತ್ತಿದ್ದೆವು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಚೆನ್ನೈ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು. ಹಾಗಂದಾಕ್ಷಣವೇ ನಾನು ಮತ್ತೆ ಮಡಿಕೇರಿ, ಕುಶಾಲ ನಗರದ ಕಡೆಗೆ ಏಕಾಂತ ಯಾತ್ರೆಯ ಸ್ಕೆಚ್ ಹಾಕಲಾರಂಭಿಸಿದ್ದೆ. ಅಂತಹ ಒಂದು ಏಕಾಂತದ ಯಾತ್ರೆ ಮಾಡಿ ಸುಮಾರು ವರ್ಷಗಳೇ ಕಳೆದಿದ್ದವು. ಅಂತಹ ಒಂದು ಏಕಾಂತ ಸದ್ಯಕ್ಕೆ ನನಗೆ ಅಗತ್ಯವಿದೆಯೇ ಎಂದು ಯೋಚಿಸಿದಾಗ ಅನಿವಾರ್ಯವಲ್ಲ, ಆದರೆ ಮಡಿಕೇರಿಗೆ ಹೋಗುವುದು ಮಾತ್ರ ನಿಶ್ಚಿತ ಎಂದು ಮನಸಲ್ಲಿ ಯೋಚಿಸಿದ್ದೆ ನೋಡಿ. ಆದರೆ ನಿನ್ನೆ ಕಚೇರಿಗೆ ಬಂದು ಎಲ್ಲರ ಜತೆ ಚರ್ಚಿಸಬೇಕಾದರೆ ಚೆನ್ನೈ ಇಲ್ಲದಿದ್ದರೂ ಪರವಾಗಿಲ್ಲ. ಬೆಂಗಳೂರ ಸುತ್ತು ಮುತ್ತಲ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬೇಕು ಎನ್ನುವ ಪ್ಲಾನ್ ಹಾಕಲಾರಂಭಿಸಿದೆವು. ನಂದಿ ಹಿಲ್ಸ್, ಸಾವನ್‌ದುರ್ಗಾ ಈಗಾಗಲೇ ನಮ್ಮನ್ನು ಸ್ವಾಗತಿಸಿಯಾಗಿತ್ತು. ನಂತರ ಹೊಳೆದಿದ್ದು ಮೇಕೆದಾಟು. ಸದ್ಯ ಇಂದಿನ ಗಣೇಶ ಹಬ್ಬ ಮೇಕೆದಾಟುವಿನಲ್ಲಿ ನಿಗದಿಯಾಗಿದೆ. ಎರಡು ಬೈಕ್‌ಗಳಲ್ಲಿ ನಾಲ್ವರು ಹೊರಟಿದ್ದೇವೆ. ಇದು ಕೊನೆ ಕ್ಷಣದ ಬದಲಾವಣೆಯಾದರೂ ಬೆಂಗಳೂರೆಂಬ ಈ ಮಹಾನಗರಿಯಲ್ಲಿ ಇಂದಿನ ಫುಲ್ ಡೇ ಕಳೆದು ಹೋಗುವುದಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಅದಕ್ಕೇ ಏನಿದ್ದರೂ ಇನ್ನು ಕೆಲವ ಘಂಟೆಗಳಲ್ಲಿ ಸಿದ್ಧಗೊಳ್ಳಬೇಕಿದೆ. ಬಂದ ನಂತರ ವಿವರವಾಗಿ ಸಾಗಿದ ದಾರಿ, ಕ್ರಮಿಸಿದ ದಾರಿಯ ಬಗ್ಗೆ ಬರೆದೇನು. ಅದುವರೆಗೆ ಕಾಯುತ್ತಿರಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಮತ್ತೆ ನಿಮ್ಮ ಮುಂದೆ ಶೀಘ್ರದಲ್ಲೇ ಬರ್ತೀನಿ.

3 comments:

VENU VINOD said...

ಮಾಸ್ಟ್ರೇ...ಪೋತು ಬತ್ತರಾ? ಬರೆಲೆ ಅಯ್ತ ಬಗ್ಗೆ....

ಧರಿತ್ರಿ said...

ಹೋಗಿ ಬಂದ್ರಾ? ಬರೀರಿ ಮತ್ತೆ..ಬರ್ತೀನಿ ಅಂದವರ ಸುದ್ದೀನೆ ಇಲ್ಲ...
ಬರೀತಾ ಇರಿ...
ಶುಭವಾಗಲೀ
-ಧರಿತ್ರಿ

Unknown said...

ತುಂಬ ಸಂತೋಷ, ನಿಮ್ಮ ಅನುಭವವನ್ನು ಓದಿ ತುಂಬಾ ಸಂತೋಷ ಆಯ್ತು. ನಿಮ್ಮ ಬ್ಲಾಗನ್ನು ಈಗ ತಾನೆ ಓದಿದೆ. ಮುಂದೆ ಕೂಡಾ ಚೆನ್ನಾಗಿ ಬರೀರಿ ಶುಭವಾಗಲಿ.

->ನಿಮ್ಮ ಪ್ರೀತಿಯ ಗೆಳೆಯ 'ಪ್ರಚಂಬಕ'