Friday, September 26, 2008

ಸುಮ್ಮನೆ ಅಲ್ಲ ಹೆಂಡತಿ!!!

ಸುಮ್ಮನೆ ಒಬ್ಬಳು ಹೆಂಡತಿ, ಸುಮ್ಮನೆ ಅಲ್ಲ ಹೆಂಡತಿ. ಅಯ್ಯೋ ಇವನಿಗೇನಾಯ್ತು. ಈಗ್ಲೇ ಮದುವೆ, ಹೆಂಡತಿ ಅಂತ ಕನಸು ಕಾಣೋಕೆ ಶುರು ಮಾಡಿದನಾ ಎಂದು ತಲೆಕೆಡಿಸಿಕೊಳ್ಳದಿರಿ. ಖಂಡಿತವಾಗಲೂ ಇಲ್ಲ. ಅಂತಹ ಕನಸು ಕಾಣೋದಿಕ್ಕೆ ಇನ್ನೂ ಕಾಲಾನೇ ಬಂದಿಲ್ಲ!!!

ಸುಮಾರು ೧೦ ತಿಂಗಳು ಕಳೆದಿತ್ತು ಒಂದು ಸಿನೆಮಾ ನೋಡಿ. ಅರ್ಥಾತ್ ಚಿತ್ರ ಮಂದಿರದಲ್ಲಿ. ಕಳೆದ ಬಾರಿ ಒಂದು ತಿಂಗಳು ರಜೆಯಲ್ಲಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಹೋಗಲಾಗಲಿಲ್ಲ. ಆದರೆ ಕೊನೆಗೆ ಮೊನ್ನೆ ಗಣೇಶ ಹಬ್ಬದ ದಿನ ಸಿನೆಮಾ ನೋಡಿದೆ.

ಅದು ಒಂದು ಸುಂದರವಾದ ಮನ. ಪತಿ, ಪತ್ನಿ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರು ವಗಳು. ಆತನಿಗೋ ಬೆಳಗ್ಗೆ ಎದ್ದು ಆಫೀಸಿಗೆ ಹೋಗುವ ತನಕ ಎಲ್ಲ ಕಾರ್ಯಗಳಿಗೂ ಅವಳೇ ಬೇಕು. ಆದರೆ ಮನೆಕೆಲಸ ಬಂದರೋ ಆತ ‘ಮಹಾನ್’ ವ್ಯಕ್ತಿ. ಅದು ತನಗೆ ಸಂಬಂಧಿಸಿದ್ದಲ್ಲ. ಅದು ಏನಿದ್ದರೂ ಪತ್ನಿಯ ಕೆಲಸವೇ. ಅದರಲ್ಲಿ ತನ್ನ ಪಾಲು ಏನೂ ಇಲ್ಲ. ಬೇಕಾದರೆ ಹೆಂಡತಿ ಎಂಬ ಹೆಸರು ಕಟ್ಟಿಕೊಂಡು ಬಂದವಳು ಮಾಡಬೇಕು. ಇಲ್ಲದಿದ್ದರೆ ಇವಳನ್ನು ಮದುವೆಯಾಗಬೇಕಿತ್ತಾ ಎಂಬಂತಹ ಅಹಂಕಾರಿ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪತಿ.

ಆದರೆ,
ಪತ್ನಿ ಕೇವಲ ವಸ್ತುವಲ್ಲ, ಅವಳಿಗೂ ಭಾವನೆಗಳಿವೆ, ಕುಟುಂಬದ ಭಾವನೆ, ಕೆಲಸ, ಎಲ್ಲದಕ್ಕೂ ಒಗ್ಗಬೇಕಾದ ಪರಿಸ್ಥಿತಿ ಇದೆ. ಗಂಡನಾದವನು ಕೇವಲ ಗಂಡಾಗಿ ಅಲ್ಲ. ಮನೆಯ ಎಲ್ಲಾ ಕಾರ್ಯಗಳಲ್ಲೂ ಸಹಕಾರಿಯಾಗಿರಬೇಕು. ಪತ್ನಿಯ ಭಾವನೆಯನ್ನು ಗೌರವಿಸಬೇಕು. ಪತ್ನಿ ಎನ್ನುವ ಸ್ಥಾನವನ್ನು ಮುಖ್ಯವಾಗಿ ಗೌರವಿಸಬೇಕು. ಆಕೆ ಕೇವಲ ಅಡುಗೆ ಕೋಣೆಗೆ ಸೀಮಿತವಾಗಿ ರಾತ್ರಿ ಹಾಸಿಗೆ ಹಾಗೂ ದೇಹ ಹಂಚಿಕೊಳ್ಳಲು ಮಾತ್ರ ಬೇಕು ಎನ್ನುವ ಭಾವ ಆ ಪತಿರಾಯನಿಂದ ದೂರ ಹೋಗಬೇಕಾದರೆ ಕಾಲ ಮಿಂಚಿ ಹೋಗಿರುತ್ತದೆ. ಇದು ‘ವೆರುದೆ ಒರು ಭಾರ್‍ಯ’ ಎಂಬ ಮಲಯಾಳಂ ಚಿತ್ರದ ಸಂಕ್ಷಿಪ್ತ ರೂಪ. ವೆರುದೆ ಒರು ಭಾರ್‍ಯ ಎಂದರೆ ಕನ್ನಡದಲ್ಲಿ ಸುಮ್ಮನೆ ಒಬ್ಬಳು ಹೆಂಡತಿ. ಇದು ಚಿತ್ರದ ಮೊದಲು ಕಾಣಿಸುವ ಸಾಲು. ಆದರೆ ಚಿತ್ರದ ಕೊನೆಗೆ ‘ಸುಮ್ಮನೆ ಅಲ್ಲ ಹೆಂಡತಿ’ ಎಂದು ಕಾಣಿಸುತ್ತದೆ. ನಿಜವಾಗಲೂ ಸುಮ್ಮನೆ ಅಲ್ಲ ಹೆಂಡತಿ!!!

ಉತ್ತರ ಅನುಭವಸ್ಥರು ಹೇಳಬೇಕು. ಯಾಕೋ ಇತ್ತೀಚಿನ ಕೆಲ ದಿನಗಳಲ್ಲಿ ಬರವಣಿಗೆಯ ಓಘ ಕೈಬಿಟ್ಟು ಸಾಗುತ್ತಾ ಇದೆ ಎಂದು ಅನಿಸಲು ಆರಂಭವಾಗಿದೆ. ಕಾಲೇಜು ಜೀವನದಲ್ಲಿ ಬರೆಯುತ್ತಾ ಇದ್ದ ಹಾಗೆ ಈಗ ಬರೆಯಲು ಆಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿನ ಬರವಣಿಗೆಯ ಲವಲವಿಕೆ ಸಿಗುತ್ತಾ ಇಲ್ಲ. ಮೆಡಿಟೇಶನ್ ಪ್ರಯೋಜನವಾಗುತ್ತಿಲ್ಲ. ಮೆಡಿಟೇಶನ್ ಆರಂಭವಾದರೆ ಮನಸ್ಸು ಹಿಡಿತಕ್ಕೆ ಸಿಗುತ್ತಿಲ್ಲ. ಯಾಕೆ ಹೀಗೆ? ಒಟ್ಟಿನಲ್ಲಿ ಏನೋ ಒಂದು ಗೊಂದಲ. ಅಷ್ಟಕ್ಕೂ ಯಾಕೆ ಈ ರೀತಿ. ಬೇರೆ ಯಾವತ್ತೂ ಇಲ್ಲದ ಈ ಬರವಣಿಗೆಯ ಗೊಂದಲ ಇನ್ನೆಷ್ಟು ದಿನ. ಗೊತ್ತಿಲ್ಲ. ಆ ಒಂದೇ ಒಂದು ಕಾರಣಕ್ಕಾಗಿ ಈ ಪೋಸ್ಟ್ ತಡವಾಗುತ್ತಿದೆ. ಕ್ಷಮೆ ಇರಲಿ.

5 comments:

KRISHNA said...

ಯಾಕೆ ಇದು ಬರಹ ಅಲ್ವ? ಬರೆಯುತ್ತಾ ಹೋದ ಹಾಗೆ ಅದು ನಿಮಗೇ ಆಚ್ಚರಿ ಹುಟ್ಟಿಸೋ ಥರ ಮುಂದುವರೀತಾ ಹೋಗುತ್ತದೆ ಅಲ್ವ? ಸೈಕಲ್ ಕಲ್ತೋನು ತುಂಬಾ ಸಮಯ ಕಳೆದು ಮತ್ತೆ ಸವಾರಿಗೆ ಹೊರಟರೆ ಹ್ಯಾಂಡಲ್ ಸ್ವಲ್ಪ ಅಲುಗಾಡಿದ್ರೂ ಮತ್ತೆ ಸುಧಾರಿಸ್ತಾನೆ. ಬರವಣಿಗೇನೂ ಹಾಗೇನೆ... ಮೂಡ್ ಇತ್ಯಾದಿಗಳು ಕಾಲನ ಹಾದಿಯಲ್ಲಿ ಸುಧಾರಿಸ್ತಾ ಹೋಗ್ತವೆ. ಪ್ರಯತ್ನಗಳು ಮಾತ್ರ ಜಾರಿಯಲ್ಲಿರಲಿ....

ಚಿತ್ರಾ ಸಂತೋಷ್ said...

ಸರ್..
ಬರವಣಿಗೆಯ ಓಘ ಕೈಬಿಟ್ಟು ಹೋಗ್ತಾ ಇಲ್ಲ..ತುಂಬಾ ಚೆನ್ನಾಗಿ ಬರೆದಿದ್ದೀರ. ಯಾರಿಗೂ ಅಷ್ಟೇ..ಕಾಲೇಜಲ್ಲಿ ಬರೆದ ಹಾಗೆ ಬರೆಯಕ್ಕಾಗಲ್ಲ..ಬಾಲ್ಯ, ಕಾಲೇಜು ಕಾಲದ ತೆಕ್ಕೆಯಲ್ಲಿ ಹುದುಗಿ ಹೋಗುತ್ತವೆ..ಈಗ ಬರೇ ನೆನಪಿನ ಪುಕ್ಕಗಳಷ್ಟೇ. 'ಸುಮ್ಮನೆ ಅಲ್ಲ, ಹೆಂಡತಿ'!!.ಹೆಂಡತಿ ..ಮದುವೆ ಕನಸು ಕಾಣಕ್ಕೆ ಕಾಲನೇ ಅಲ್ಲ ಅನ್ಬೇಡಿ..ಶುರುಮಾಡಿ..ಕನಸು ಕಾಣೋಕೆ..ಆವಾಗ ಗೊತ್ತಾಗುತ್ತೆ ನಿಮಗೂ ಗೊತ್ತಾಗುತ್ತೆ..'ಸುಮ್ಮನೆ ಅಲ್ಲ ಹೆಂಡತಿ..!'keep it up!!ಶುಭವಾಗಲಿ..
-ಚಿತ್ರಾ

Chevar said...

@KRISHNA,
ಪ್ರಯತ್ನಗಳು ಜಾರಿಯಲ್ಲಿರುತ್ತವೆ.

@ಚಿತ್ರಾ,
ನೆನಪಿನ ಪುಕ್ಕಗಳು ಹಾಗೇನೇ. ಕನಸು ಕಾಣೋಣ ಬಿಡಿ.

ತೇಜಸ್ವಿನಿ ಹೆಗಡೆ said...

ಕಾಲಕ್ಕೆ ತಕ್ಕಂತೇ ಬರವಣಿಗೆಯ ಶೈಲಿ, ನಿರೂಪಣೆ, ಓಘ ಎಲ್ಲವೂ ಬದಲಾಗುತ್ತಿರುತ್ತವೆ. ಮನುಷ್ಯನ ಮನಃಸ್ಥಿತಿಯನ್ನವಲಂಬಿಸಿ ಬರವಣಿಗೆ ಇರುತ್ತದೆ. ಈ ಒಂದು ಘಟ್ಟ ಎಲ್ಲ ಬರಹಗಾರರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿರುತ್ತದೆ. ನಿಮ್ಮ ಬರವಣಿಗೆಯ ಶೈಲಿ, ಓಘ ಎರಡೂ ಚೆನ್ನಾಗಿವೆ. (ಈಗಲೂ) :)

shivu.k said...

ಬರವಣಿಗೆ ಚೆನ್ನಾಗಿದೆಯಲ್ರೀ...ಸಾರ್,
ಆ ಸಿನಿಮಾ ನೋಡಬೇಕು ಅನ್ನಿಸುತ್ತೆ ಅದ್ರೆ ಬಾಷೆ ಬರೊಲ್ಲ.
ಚೆನ್ನಾಗೆ ಬರಿತೀರಿ. Keep it up.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಶಿವು.ಕೆ.