Monday, August 03, 2009

ಧನ್ಯವಾದಗಳು ನಿಮಗೆ...

ಎಲ್ಲ ಸ್ನೇಹಿತ/ ಸ್ನೇಹಿತೆಯರಿಗೆ ಧನ್ಯವಾದಗಳು. ಯಾಕೆ ಎಂದು ಕೇಳುತ್ತೀರಿ ಎಂದಾದರೆ ಉತ್ತರ ಹಾಗೇ ಸುಮ್ಮನೆ!!! ಗೆಳೆಯರು, ಗೆಳತಿಯರು ಯಾರೂ ಒಂದು ಎಸ್‌ಎಂಎಸ್, ಒಂದು ಫೋನ್ ಕಾಲ್, ಒಂದು ಇ-ಮೇಲ್ ಯಾವುದನ್ನೂ ಕಳುಹಿಸದೇ ಉತ್ತಮ ಕಾರ್‍ಯವನ್ನು ಮಾಡಿದ್ದಾರೆ. ಎಲ್ಲರೂ ಅಭಿನಂದನಾರ್ಹರು. ಅದರ ಜತೆ ನಾನೂ ಯಾವುದೇ ರೀತಿ ಎಸ್‌ಎಂಎಸ್, ಕಾಲ್, ಇ-ಮೇಲ್ ಅಂತ ತಲೆಕೆಡಿಸಿಕೊಳ್ಳದೆ ನನಗೆ ತಿಳಿದಿರುವ ಗೆಳೆಯರನ್ನು ಹಾಗೇ ಸುಮ್ಮನೆ ಮನಸ್ಸಲ್ಲಿ ನೆನಪಿಸಿಕೊಂಡೆ. ನಿನ್ನೆ ಗೆಳೆತನದ ದಿನ ಮುಗಿದಿದೆ, ಆದರೆ ಗೆಳೆತನ ಇನ್ನೂ ನಿನ್ನೆಗೇ ಮುಗಿಯದೆ ಚಿರಂತನವಾಗಿ ಮುಂದುವರಿಯುತ್ತಾ ಸಾಗುತ್ತಿದೆ. ಈ ದಿನ ಕಳೆದ ನಂತರ ಬರೆಯೋಣ ಎನ್ನಿಸಿತು. ಅದಕ್ಕೆ ಇಂದು ಈ ಅಕ್ಷರ ಮಾಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

Don't walk in front of me,

I may not follow.

Don't walk behind me,

I may not lead.

Walk beside me and be my friend." - Albert camus

ನನ್ನ ಮುಂದಿನಿಂದ ನಡೆಯಬೇಡ, ನಾನು ನಿನ್ನನ್ನು ಹಿಂಬಾಲಿಸದೇ ಇರಬಹುದು. ನನ್ನ ಹಿಂಬಾಲಿಸಬೇಡ, ನಾನು ಮುನ್ನಡೆಸದೇ ಇರಬಹುದು. ನನ್ನ ಜತೆಯಾಗಿಯೇ ಹೆಜ್ಜೆ ಹಾಕುತ್ತಾ ನನ್ನ ಸ್ನೇಹಿತ, ಸ್ನೇಹಿತೆಯಾಗಿಯೇ ಇರು.

ಸ್ನೇಹಿತರ ದಿನದ ಬಗ್ಗೆ ಬರೆಯೋಣ ಎಂದು ಸುಮ್ಮನೆ ಇಂಟರ್‌ನೆಟ್ ಮುಂದೆ ಜಾಲಾಡುತ್ತಿದ್ದಾಗ ಕಾಣಿಸಿದ ಸುಂದರ ಸಾಲುಗಳಿವು. ಗೆಳೆತನದ ಬಗ್ಗೆ ಕೇವಲ ಕೆಲವೇ ಪದಗಳಲ್ಲಿ ಹೇಳಿದಂತಹ ಅದ್ಭುತ ಸಾಲುಗಳೆಂದು ನಿಮಗೂ ಅನಿಸಬಹುದು.
ಗೆಳೆತನದ ವಿಶೇಷ ದಿನ ನನಗೆಂದೂ ಆದ್ಯತೆಯಾಗಿರಲಿಲ್ಲ. ನನ್ನ ಗೆಳೆಯರು /ಗೆಳತಿಯರು ಎಂದೆಂದಿಗೂ ಮನದಲ್ಲಿ ಅಚ್ಚಳಿಯದೇ ಉಳಿಯುವಂತವರು.

ಅವರನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ದಿನ ಎಂದಾದರೆ ಆ ದಿನ ಬಾರದಿದ್ದರೆ ಅವರ ನೆನಪಾಗುವುದಿಲ್ಲವೇ. ಹಾಗಾಗಬಾರದು, ನಮ್ಮ ಒಳಿತು ಕೆಡುಕುಗಳ ನಡುವೆ ನಮ್ಮ ಜತೆಗೆ ಇದ್ದುಕೊಂಡು, ದೂರ ಇದ್ದರೂ ಹಿತ ಹಾರೈಸಿಕೊಂಡು ಬಾಳುವಂತಹ ಒಂದು ಗೆಳೆತನ ಸಾಧ್ಯವಾಗಬೇಕು. ಆ ಸಾಧ್ಯವಾಗುವಿಕೆಗೆ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅದು ಬಿಟ್ಟು ನೀ ನನಗಿದ್ದರೆ ನಾ ನಿನಗೆ ಎಂಬಂತಹ ಮಾತು ಅಲ್ಲಿ ಕಾಣಿಸಲೇ ಬಾರದು.

ಆದರೆ ಇಂದು ನಾವು ಬ್ಯುಸಿ ಲೈಫ್, ಕೆಲಸದ ಒತ್ತಡ ಇತ್ಯಾದಿ ಕುಂಟು ನೆಪಗಳನ್ನು ಒಡ್ಡಿ ಒಂದು ಸಂಬಂಧವನ್ನು ಭದ್ರವಾಗಿಡಲು ಕಷ್ಟ ಪಡುತ್ತಿದ್ದೇವೆ. ಇದಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಹಲವು ಕಾರಣಗಳು ಹೊಳೆದೀತೇನೋ? ಆದರೆ ಒಂದು ಸುಂದರ ಸಂಬಂಧವನ್ನು ನೆನಪಿರಿಸಿಕೊಳ್ಳಲೂ ಅಸಾಧ್ಯವಾದಂತಹ ಅದೇನು ಕೆಲಸ ಇದೆಯೋ ಗೊತ್ತಾಗುತ್ತಿಲ್ಲ.

ಬಹುಶಃ ಗೆಳೆತನದ ಬಗ್ಗೆ ಹಿಂದೆಲ್ಲಾ ನಾವು ಇಷ್ಟೆಲ್ಲಾ ಯೋಚಿಸುತ್ತಿರಲಿಲ್ಲವೇನೋ? ನನಗೆ ಗೊತ್ತಿರುವಂತೆ ಫ್ರೆಂಡ್‌ಶಿಪ್ ಡೇ ನನಗೆ ಮೊದಲು ಎದುರಾಗಿದ್ದು ಪುತ್ತೂರಿನಲ್ಲಿ ಪದವಿ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದು ಸಂಭ್ರಮ ಎನ್ನಲು ಕಾರಣವಾಗುತ್ತಿತ್ತು. ಆದರೆ ಅದರ ನಂತರದ ದಿನಗಳಲ್ಲಿ ಗೆಳೆತನದ ಬಗ್ಗೆ ವಿಶೇಷ ಗಮನಹರಿಸುತ್ತಿರಲಿಲ್ಲ. ಇದರರ್ಥ ಯಾರ ಜತೆಗೂ ಬೆರೆಯುತ್ತಿರಲಿಲ್ಲ ಎಂದಲ್ಲ. ಆದರೆ ಆ ದಿನ ಬಾರದಿದ್ದರೂ ನಾವು ಸ್ನೇಹಿತರೆಲ್ಲರೂ ಜತೆಯಾಗಿ ಕಾಲಕಳೆಯುತ್ತಿದ್ದವು.

ಒಂದು ಸೂಕ್ಷ್ಮ ಸಂಬಂಧ ಗೆಳೆತನವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವವರನ್ನು ಕಂಡರೆ ತೀವ್ರ ಸಂಕಟ ಪಡುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಒಂದು ಕಂಫೋರ್ಟ್ ಝೋನ್ ನಾನೇ ಮಾಡಿಕೊಟ್ಟು ಬಿಡುತ್ತೇನೆ. ಅದೆಲ್ಲವನ್ನೂ ಮೀರಿ ಗೆಳೆತನದಲ್ಲಿ ನಾನು ಸಾಗಿ ಬಂದಿದ್ದೇನೆ. ಇದ್ದ ಕೆಲವೇ ಕೆಲವು ಗೆಳೆಯರಲ್ಲಿ ಎಲ್ಲರೂ ಅವರಿಂದಾಗುವಷ್ಟು ರೀತಿಯಲ್ಲಿ ಸಂಭಾಳಿಸುತ್ತಾ ಸಾಗಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗೂ ನಾನು ಅತಿ ಖುಷಿ ಪಡುತ್ತಿದ್ದೇನೆ.

ಗೆಳೆತನದ ಬಗ್ಗೆ ನಾನು ಅತಿ ಹೆಚ್ಚು ಇಷ್ಟಪಟ್ಟು ನೆನಪಲ್ಲಿ ಉಳಿಸಿಕೊಳ್ಳಲು ನೆರವು ನೀಡಿದ ಕೆಲವು ಇಂಗ್ಲಿಷ್ ಸಾಲುಗಳನ್ನು ಹಾಗೇ ನಿಮ್ಮ ಮುಂದೆ ಇರಿಸುತ್ತಿದ್ದೇನೆ. ನಿಮಗೆ ಇಷ್ಟವಾದೀತು ಎಂಬ ಭರವಸೆಯೊಂದಿಗೆ. ಈ ಸಾಲುಗಳು ನನ್ನ ಕೈಗೆ ಲಭಿಸಿ ಕೆಲ ವರ್ಷಗಳು ಕಳೆದವು. ಇತ್ತೀಚಿನ ದಿನಗಳಲ್ಲಿ ನಾನು ಅತ್ಯಂತ ಆಪ್ತವಾಗಿರಿಸಿಕೊಂಡಿದ್ದು ಈ ಸಾಲುಗಳನ್ನು. ಇದರ ಪ್ರತಿ ಸಾಲಿನಲ್ಲಿ ನನಗೆ ಗೋಚರಿಸುವ ಸತ್ಯಗಳು ಸದಾ ನನ್ನನ್ನು ಜಾಗೃತನನ್ನಾಗಿಯೇ ಇರಿಸಿದೆ. ಹಾಗೆ ಎಲ್ಲೋ ಎಂದು ಕಡೆ ಸಿಕ್ಕಿತು, ಅದನ್ನು ಇನ್ನೆಲ್ಲೋ ಒಂದು ಕಡೆ ಬಿಟ್ಟು ಬಿಡಬೇಕು ಎನ್ನುವಂತೆಯೂ ಇಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡರೆ ಉತ್ತಮ ಎನಿಸಿದ ಕಾರಣಕ್ಕೆ ಈ ಸಾಲುಗಳು ನಿಮ್ಮ ಮುಂದಿವೆ.


“To You”

You wiped the tears
That fell not from my eyes
And saw the well
Build up in me
A fortress of stone
Become an unfeeling heart.
Your words, stupid
Wise and funny
Broke the barrier
I feel again
Shades of joy, anger,
Sorrow and all that
You make me laugh
You make me cry
you make me feel
Whole again
You make me be
Me again
Life is good
Because you are there
My friend, my confidante,
A support system
You are the best
I ever knew.


ಹ್ಯಾಪಿ ಫ್ರೆಂಡ್‌ಶಿಪ್ ಡೇ!!!
ಕೆಲವರು ಬೈದರು, ಇನ್ನು ಕೆಲವರು ಕೆಟ್ಟವನು ಎಂದರು, ಮತ್ತೆ ಕೆಲವರು ತರಲೆ, ಹಲವರು ದುಷ್ಟ, ಹೃದಯಕ್ಕೆ ಹತ್ತಿರವಾಗಿಸಿಕೊಳ್ಳದ ಎಂದರೆ ಇನ್ನೊಂದು ವರ್ಗದವರು ಸ್ವೀಟ್ ಎಂದರು. ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ. ಎಲ್ಲರೂ ಅವರವರು ನನ್ನಲ್ಲಿ ಕಂಡ ಒಳ್ಳೆಯ, ಕೆಟ್ಟದ್ದನ್ನು ಹೇಳಿದರು. ಇನ್ನು ಕೆಲವರಲ್ಲಿ ಅಳುಕಿತ್ತು. ಆದರೆ ಮೌನದಲ್ಲೇ ಅಥವಾ ನನ್ನ ಆಪ್ತರಾದವರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಆ ಕೇಳುವ ಜೀವ ಒಂದೂ ಅಕ್ಷರ ಬಿಡದೆ ಜಗತ್ತು (ಅರ್ಥಾತ್ ನಿನ್ನ ಸುತ್ತುಮುತ್ತಲಿನವರು) ಏನು ಹೇಳುತ್ತೆ ಎನ್ನುವುದನ್ನು ಅತಿ ಮೃದುವಾಗಿ, ಅಷ್ಟೇ ಚೆನ್ನಾಗಿ ನಾಟುವಂತೆ ಹೇಳುತ್ತಿತ್ತು. ಆ ಕಾರಣಕ್ಕೆ ನನ್ನ ಧನ ಹಾಗೂ ಋಣಾತ್ಮಕ ಅಂಶಗಳನ್ನು ಪಟ್ಟಿ ಮಾಡಿ ತೋರಿಸಿ ಹೇಳುತ್ತಿತ್ತು. ನಾನು ಅದನ್ನು ಚಾಚೂ ತಪ್ಪದೆ ಆಲಿಸುತ್ತಿದ್ದೆ. ಆದರೆ ಕೆಲವರು ಒಂದು ಮಧುರ ಭಾಂದವ್ಯವನ್ನು ಅಳಿಸುವ ಯತ್ನ ಮಾಡಿದ್ದರು. ಆದರೆ ಅದು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇ ಇಲ್ಲ ಎನ್ನುವುದೂ ಇಂದು ನನ್ನ ಮುಂದಿರುವ ವಾಸ್ತವ. ಒಬ್ಬ ಸಾಮಾನ್ಯ, ನನ್ನ ಗೆಳೆಯರು, ಹಿತೈಷಿಗಳು ಎನ್ನುವ ಕಾರಣಕ್ಕೆ ಕೇಳುಗನಾಗಿ ಎಲ್ಲವನ್ನೂ ಸ್ವಾಗತಿಸಿದ್ದೇನೆ. ಆ ಕಾರಣಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಈ ದೀರ್ಘ ಬರಹ ಮನಸಿಗೆ ಖುಷಿಯಾಗಿರಬಹುದು ಎಂದುಕೊಂಡಿದ್ದೇನೆ. ಗೆಳೆತನ ದಿನವೊಂದಕ್ಕೆ ಸೀಮಿತವಾಗದೇ ಮುಂದುವರಿಯಲಿ. ಸಿಗಲಿ, ಬಾಳಲಿ ಹೊಸ ಚಿಗುರು...!!!

No comments: