Monday, July 27, 2009

ಎಲ್ಲಾ ಮಳೆ ಲೀಲೆ!!!

ಏನಾದರೂ ಬರೆಯಬೇಕು ಎಂದು ಕಳೆದ ಮೂರು ವಾರಗಳಿಂದ ಯೋಚಿಸುತ್ತಾ ಇದ್ದೇನೆ. ಆದರೆ ಏನೂ ಹೊಳೆಯುತ್ತಿಲ್ಲ. ಕಳೆದ ಐದಾರು ವರ್ಷಗಳಲ್ಲಿ ಈ ಥರಾ ಎಂದೂ ಆಗಿಲ್ಲ. ಏನು ಬರೆಯಲು ಕುಳಿತರೂ 10 ರಿಂದ 15 ನಿಮಿಷದೊಳಗೆ ಮುಗಿಯಬೇಕು. ಹೆಚ್ಚು ಎಂದರೆ 20 ನಿಮಿಷ ಮಾತ್ರ.
ಆದರೆ ಇಂದು ಹಾಗಾಗುತ್ತಿಲ್ಲ. ನಾನಿಂದು ಈ ಬ್ಲಾಗ್‌ನಲ್ಲಿ ಬರೆಯಬೇಕೆಂದರೆ ಭಾರಿ ಕಷ್ಟಪಡುತ್ತಿದ್ದೇನೆ. ಯಾಕೆ ಎಂದು ಇನ್ನೂ ತಿಳಿಯುತ್ತಿಲ್ಲ. ಈ ರೀತಿ ಈ ಹಿಂದೆ ಆಗದೇ ಇರುವ ಕಾರಣ ಇದಕ್ಕೆ ಇದೇ ಕಾರಣ ಎಂದು ನಾನು ಹೇಳುವ ಸ್ಥಿತಿಯಲ್ಲಿಯೂ ಇಲ್ಲ. ಒಟ್ಟಿನಲ್ಲಿ ಒಂದು ಮೂಡಿ ಸ್ವಭಾವ ಬರೆಯಲು ಕುಳಿತುಕೊಳ್ಳುವಾಗ ಆರಂಭವಾಗುತ್ತದೆ.
ಸದ್ಯ ವಿಶೇಷ ಏನೂ ಇಲ್ಲ. ಈ ಬೆಂಗಳೂರೆಂಬ ಕಾಂಕ್ರೀಟ್ ಕಾಡಿನಲ್ಲಿ ಮಳೆಯೂ ಇಲ್ಲ! ಊರಿಗೆ ಫೋನ್ ಮಾಡಿದರೆ ಮಳೆಯದೇ ಸುದ್ದಿ. ಮಳೆ ಬಂದು ಹಾಗಾಯಿತಂತೆ, ಹೀಗಾಯಿತಂತೆ ಈ ರೀತಿ ಮಳೆಯ ವರದಿಯನ್ನು ಎರಡು ದಿನಕ್ಕೊಮ್ಮೆ ಕೇಳುತ್ತಲೇ ಇರುತ್ತೇನೆ. ಆಗೆಲ್ಲಾ ರಜೆ ಹಾಕಿ ಊರಿಗೆ ಹೋಗಬೇಕು ಎನ್ನುವ ಭಾವ ಕಾಡುತ್ತದೆ. ಊರಲ್ಲಿದ್ದಿದ್ದರೆ ನಾನಾಗುತ್ತಿದ್ದೆ ಮಳೆಯಲ್ಲಿ ಒದ್ದೆ ಒದ್ದೆ!!!
ಮಳೆ ಬಂತೆಂದರೆ ಸಾಕು ನಮ್ಮ ಮನೆ ಪರಿಸರವೆಲ್ಲಾ ಜಲಾವೃತ. ಮನೆಯ ಒಳಗಡೆ ನೆಲದಡಿಯಿಂದ ನೀರಿನ ತೇವಾಂಶ ಬರಲು ಆರಂಭಿಸುತ್ತದೆ. ಮನೆಯ ಬಲಬದಿಯ ಎತ್ತರ ಪ್ರದೇಶದಲ್ಲಿರುವ ನೆರೆ ಮನೆಯವರ ಜಮೀನಿನಲ್ಲಿ ಒಂದು ಕೆರೆಯಿದೆ. ಆ ಕೆರೆಯಿಂದ ಮಳೆಗಾಲದಲ್ಲಿ ಹೊರಟ ನೀರು ನಮ್ಮ ಮನೆಯ ಮುಂದಿನಿಂದಲೇ ಸಾಗಬೇಕು. ಅಲ್ಲಿ ನೀರು ನಡೆದದ್ದೇ ಹಾದಿ, ನಾವ್ಯಾರೂ ಅದನ್ನು ಕಟ್ಟಿ ಹಾಕಲು ಹೋಗುವುದೇ ಇಲ್ಲ. ಕಟ್ಟಿ ಹಾಕಿದರೂ ಜೋರಾದ ಒಂದು ಮಳೆ ಬಂದರೆ ಸಾಕು. ಮತ್ತೆ ನಮ್ಮ ಕಾಂಪೌಂಡ್ ತುಂಬಾ ನೀರು ನೀರು ನೀರು. ಹಾಗಂತ ಆ ನೀರು ನಮಗೆ ಯಾವತ್ತೂ ಒಂದು ಹೊರೆ ಅನ್ನಿಸಿಲ್ಲ. ಅಂತಹ ಮಳೆಗಾಲ ಪೂರ್ತಿ ಊರಲ್ಲಿದ್ದು ಎಷ್ಟು ವರ್ಷವಾಯಿತೋ...?
ಪ್ರತಿವರ್ಷದಂತೆ ಈ ಬಾರಿಯೂ ಮಳೆ ಕಾರುಬಾರು ಈಗಲೂ ಜೋರು. ಕೆಲವರು ಮಳೆಯದು ತೀರಾ ಅತಿಯಾಯಿತು ಎನಿಸಿದಾಗ ಛೇ, ಈ ಮಳೆ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ ಎದು ದೂರುತ್ತಾರೆಯೇ ವಿನಾ ಮಳೆ ನಿಲ್ಲಲಿ ಎಂದು ಬಯಸುವುದೇ ಇಲ್ಲ.
ಆದರೆ, ಇಲ್ಲಿ ಈ ಕಾಂಕ್ರೀಟ್ ಕಾಡಿನಲ್ಲಿ ಮಳೆ ಎಂದರೆ ನರಕ ಸದೃಶವಾಗುತ್ತದೆ. ಕಚೇರಿಯ ಒಳಗಿನಿಂದ ಕುಳಿತು, ರೂಮ್‌ನ ಒಳಗೆ ಕುಳಿತು ಮಳೆ ಹನಿಯನ್ನು ನೋಡಲು ಬಯಸುತ್ತೇನೆಯೇ ಹೊರತು ಈ ಮಳೆಯಲ್ಲಿ ನೆನೆಯಬೇಕು, ಮಳೆಯಲ್ಲಿ ನೆನೆಯುತ್ತಾ ಒಂದಿಡೀ ದಿನ ಕಳೆಯಬೇಕು ಎಂದು ಕಾಣಿಸುವುದೇ ಇಲ್ಲ.
ಸರಿಯಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು, ಇಲ್ಲಿನ ಸಮಸ್ತ ಚರಂಡಿಗಳೂ ನಮ್ಮನ್ನು ಹೊಲಸು ಮಾಡಿ ಹಾಕುತ್ತವೆ. ಚರಂಡಿಯ ತ್ಯಾಜ್ಯ ನನ್ನನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಆದರೆ ಇದೇ ಮಳೆಗೆ ಊರಲ್ಲಿದಿದ್ದರೆ ಎಂಬ ಭಾವ ಕಾಡುತ್ತೆ. ಹಾಗೆ ಊರ ಮಳೆ ಬಿಟ್ಟರೆ ಮತ್ತೆ ಮೂರು ವರ್ಷ ಪುತ್ತೂರಲ್ಲಿ, ಆ ಬಳಿಕ ಎರಡು ವರ್ಷ ಮಂಗಳೂರಲ್ಲಿ ಮಳೆಯದ್ದೇ ಕಾರ್ಬಾರು. ದಕ್ಷಿಣ ಕನ್ನಡದ ಮಟ್ಟಿಗೆ ಮಳೆ ಎಂದಿಗೂ ಮೋಸ ಮಾಡಿಲ್ಲ. ಅದು ಬಿಟ್ಟರೆ ನಾನು ಮಳೆಯನ್ನು ಅತ್ಯಂತ ಇಷ್ಟಪಡುವುದು ನನ್ನ ಸಂಬಂಧಿಕರಿರುವ ಬೇಕಲ ಕೋಟೆ ಸಮೀಪದ ತ್ರಿಕ್ಕನ್ನಾಡ್ ಎಂಬ ಸ್ಥಳ. ರಸ್ತೆಯ ಒಂದು ಬದಿ ಶಿವ ದೇವಸ್ಥಾನ. ರಸ್ತೆ ದಾಟಿದರೆ ಸಮುದ್ರ ತೀರ. ಮಧ್ಯೆ ಹಾದು ಹೋಗುವುದು ಕಾಸರಗೋಡು- ಕಾಂಞಂಗಾಡ್ ಹೆದ್ದಾರಿ. ಸಂಜೆಯ ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಸ್ಥಳ. ಹಾಗೆ ಅಲ್ಲಿನ ಮರಳದಂಡೆಯಲ್ಲಿ ನಿಂತು ಅದೆಷ್ಟು ಸಂಜೆಯನ್ನು ಕಳೆದೆನೋ ಅದೆಷ್ಟು ಹೊತ್ತು ಅತ್ತೆ ಮಗಳ ಜತೆ ಕಾಲ ಕಳೆದೆನೋ. ಅದೆಷ್ಟು ಬಾರಿ ಅವಳನ್ನು ಸಮಾಧಾನ ಪಡಿಸಿದೆನೋ? ಅದೆಷ್ಟು ಬಾರ ಬಾರಿ ಅವಳು ನನ್ನಲ್ಲಿ ಗೋಗರೆದಳೋ? (ಅತ್ತೆ ಮಗಳು ಎಂದಾಕ್ಷಣ ಏನೇನೋ ಯೋಚನೆ ಬೇಡ)
ಹಾಗೆ ಅಲ್ಲಿ ಮಳೆ ಜೋರಾಗಿ ಸುರಿದರೆ ಸಮುದ್ರದ ಅಲೆಗಳು ರಸ್ತೆ ದಾಟಿ ಬರುತ್ತದೆ. ರಸ್ತೆ ನೀರಲ್ಲಿ ಮುಳುಗಡೆ ರಸ್ತೆ ಸ್ವಲ್ಪ ಎತ್ತರದಲ್ಲಿದೆ. ಹಾಗೆ ರಸ್ತೆ ದಾಟಿದ ನೀರು ಮತ್ತೆ ರಸ್ತೆಯ ಈಚೆಗೆ ಬಂದು ಸೇರುತ್ತದೆ. ಹಾಗೆ ಅಲ್ಲೆಲ್ಲಾ ನೀರುನೀರು. ಸಮುದ್ರದ ಉಪ್ಪು ನೀರಲ್ಲಿ ಮನೆಯೊಳಗೆ ಕೂತರೆ ಏನೋ ಒಂಥರಾ. ಕಾಲುಗಳು ಉಪ್ಪಿನ ಅಂಶದಿಂದ ಅಂಟು ಅಂಟು. ಹಾಗೆ ಅಲ್ಲಿ ಮಳೆ ಸುರಿಯುತ್ತಾ ಇರುತ್ತೆ.
ಇಂತಹ ಹಲವು ಕತೆಗಳು ಕಣ್ಣ ಮುಂದೆ ಕಟ್ಟುತ್ತಾ ಹೋಗುತ್ತವೆ. ಕೆಲವು ಜೀವಂತ ಕತೆಗಳು. ಕೆಲವು ಕೇವಲ ನನಗೆ ಮಾತ್ರ ತಿಳಿದಿದ್ದು, ಕೆಲವರು ತಿಳಿಯಲು ಪ್ರಯತ್ನಿಸಿದ್ದು. ಆದರೂ ನಾನು ಬಾಯ್ಬಿಡದೇ ಇದ್ದಿದ್ದು. ಕೆಲವರು ನನಗೆ ತಿಳಿಯಲೇ ಬಾರದು ಎಂದು ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದ ಎಲ್ಲಾ ರಹಸ್ಯಗಳು ಅವುಗಳಾಗಿಯೇ ಹೊರ ಬೀಳುತ್ತವೆ. ಯಾರು ಮುಚ್ಚಿಡಲು ಪ್ರಯತ್ನಿಸಿದ್ದರೋ ಅವರಾಗಿಯೇ ಎಲ್ಲವನ್ನು ಬಾಯಿ ಬಿಟ್ಟು ಹೇಳುತ್ತಾರೆ. ಕೇಳುಗ ನಾನು ಮೊದಲೇ ಗೊತ್ತಿದ್ದರೂ ಯಾವುದನ್ನೂ ತೋರ್ಪಡಿಸಿದೆ ಮತ್ತೂ ಅತ್ಯುತ್ತಮ ಎಂಬ ಕೇಳುಗನಾಗುತ್ತೇನೆ. ಅದೇ ಕಾರಣಕ್ಕೆ ಎಲ್ಲರೂ ಬಯ್ಯುತ್ತಾರೆ. ಜೀವನದಲ್ಲಿ ಇಷ್ಟೆಲ್ಲಾ ತಾಳ್ಮೆ ಇಟ್ಟುಕೊಳ್ಳಬಾರದು. ಮುಂದೆ ನಿನಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ನಾನು ಅದನ್ನು ಒಂದು ನಗುವಿನೊಂದಿಗೆ ಸ್ವೀಕರಿಸುತ್ತಾ ಇರುತ್ತೇನೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾನು ಕೇಳುತ್ತಲೇ ಇರುತ್ತೇನೆ. ಯಾರಿಗೊತ್ತು ಮುಂದೊಂದು ದಿನ ಅವರು ಹೇಳಿದ್ದು ನಿಜವಾಗುತ್ತದೋ ಗೊತ್ತಿಲ್ಲ. ಆದರೆ ಒಂದು ಸಂಬಂಧವನ್ನು ವಿನಾಕಾರಣ ಕೊಂದು ಸಾಗುವ ಮನಸು ಇನ್ನೂ ಸಾಧ್ಯವಾಗಿಲ್ಲ. ಹಾಗೊಂದು ದಿನ ಜೀವನದಲ್ಲಿ ಆರಂಭವಾದರೆ ಅಲ್ಲಿ ನಾನು ನಾನಾಗಿರುವುದಿಲ್ಲ. ಮಳೆ ಸುಖವಾಗಿರುವುದಿಲ್ಲ. ತುಂತುರು ಮಳೆ ಹಾನಿಯೂ ಕಿರಿಕಿರಿಯಾಗುತ್ತೆ. ಈ ರೀತಿ ಸುದೀರ್ಘವಾದ ಕತೆ ಹೇಳುವುದು ಸಾಧ್ಯವಾಗುವುದೂ ಇಲ್ಲ. ಮಳೆ ಕತೆ ಹೇಳಲು ಆರಂಭಿಸಿ ಜೀವನದ ಕತೆ ಆರಂಭವಾಗಿದೆಯಲ್ಲಾ. ತಪ್ಪು ನನ್ನದಲ್ಲ ಕಣ್ರೀ. ಬೆಂಗಳೂರಿನ ಮಳೆಯದು. ಊರಲ್ಲಿ ಬಂದ ಮಳೆ ಇಲ್ಲಿಯೂ ಬಂದಿದ್ದರೆ ನಾನು ಇಷ್ಟೆಲ್ಲಾ ಬರೆಯುವುದಿತ್ತಾ? ನಿಮಗೆ ಏನಾದರೂ ಆಕ್ಷೇಪಗಳಿದ್ದರೆ ನನ್ನ ಮೇಲೆ ಹೊರಿಸಬೇಡಿ. ಎಲ್ಲಾ ಮಳೆ ಲೀಲೆ!!!

1 comment:

shivu.k said...

ಸರ್,

ಊರಿನ ಮಳೆಗೂ ಇಲ್ಲಿಯ ಮಳೆಗೂ ಎಷ್ಟೋಂದು ವ್ಯತ್ಯಾಸ ಅಲ್ವಾ....ಲೇಖನ ಚೆನ್ನಾಗಿದೆ.