ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವ್ಯಾಲೆಂಟೈನ್ ಚರ್ಚೆ, ಅದು ಪಡೆಯುತ್ತಿರುವ ತಿರುವು, ಅದನ್ನು ಕೆಲವು ವಿಕೃತ ಮನಸುಗಳು ಕಲ್ಪಿಸಿಕೊಂಡ ರೀತಿ, ಅದಕ್ಕೆ ಕೆಲವು ಸೋಕಾಲ್ಡ್ ನ್ಯಾಷನಲ್ ಮಾಧ್ಯಮಗಳು ಕೊಟ್ಟ ಪ್ರಚಾರ, ಇವುಗಳ ನಡುವೆ ಹುಟ್ಟಿದ ಪಿಂಕ್ ಚಡ್ಡಿ, ಅದಕ್ಕೆ ವಿರುದ್ಧವಾಗಿ ಹುಟ್ಟಿದ ಪಿಂಕ್ ಕಾಂಡೋಂ ಎಲ್ಲವೂ ಪ್ರೀತಿಯ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ. ಕೆಲವು ಪತ್ರಿಕೆಗಳಂತೂ ತಾವೇ ವ್ಯಾಲೆಂಟೈನ್ ರಕ್ಷಕರೇನೋ ಎಂಬಂತೆ ವರ್ತಿಸುತ್ತಿವೆ.
ಆದರೆ ಇವು ಇಲ್ಲದೆ ಪ್ರೀತಿಯೇ ಇಲ್ಲವೇ? ಇದೆ ‘ನಾ ಕನಸು ಕಂಡ ಅವಳಂತೆ’. ಇಂದಿಗೂ ಪ್ರೀತಿ ನಿರಂತರವಾಗಿ ಹರಿಯುತ್ತದೆ. ಅದು ಅಕ್ಷಯ ಪಾತ್ರೆಯಿದ್ದಂತೆ. ಅಂದು ದ್ರೌಪದಿ ವಸ್ತ್ರಾಪಹರಣವಾಗುತ್ತಿದ್ದಾಗ ಸಂದರ್ಭ ಎಳೆದಷ್ಟೂ ಬೆಳೆದ ಸೀರೆಯಂತೆ. ಪ್ರೀತಿ ಯಾವತ್ತೂ ಹಾಗೇ ಇರಬೇಕು. ಅದನ್ನು ತಡೆಯಲೂ ಹೋಗಬಾರದು. ತಡೆದರೆ ತೊಡಗುವ ತೊಡಕು ಮತ್ತೆ ಮುಂದುವರಿಯಲು ಬಿಡುವುದಿಲ್ಲ.
ಆದರೆ ಪ್ರೀತಿ ಇಂದು ಎತ್ತ ಸಾಗುತ್ತಿದೆ. ಅದು ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಯಾವಾಗ ಆ ಒಂದು ಭಾವ ಪ್ರೀತಿಯಲ್ಲಿ ಹುಟ್ಟಿ ಕಾಮ ಎಂಬಲ್ಲಿಗೆ ತಿರುಗಿ ಬಿಡುತ್ತದೋ ಅಲ್ಲಿಗೆ ಪ್ರೀತಿಯ ಅವಸಾನದ ಮೊದಲ ಮೆಟ್ಟಿಲು ತೆರೆದಂತೆ.
ಹೀಗೆ ಪ್ರೀತಿಯ ಬಗ್ಗೆ ಹೇಳುತ್ತಾ ನಾವು ಕಾಲೇಜು ದಿನಗಳಲ್ಲಿ ನಮ್ಮ ಕೈಗೆ ಮೊಬೈಲ್ ಲಭಿಸಿದಾಗ ಪಡೆದ ಸಂಭ್ರಮದ ನೆನಪಾಗುತ್ತದೆ. ಅಂದು ಇನ್ಬಾಕ್ಸ್ ತುಂಬುವ ಎಲ್ಲ ಎಸ್ಎಂಎಸ್ಗಳೂ ಪ್ರೀತಿಗೆ ಸಂಬಂಧಪಟ್ಟವುಗಳೇ. ಕಳುಹಿಸುವವರೋ ನಮ್ಮ ಪ್ರೀತಿ ಪಾತ್ರರು. ಅದರಲ್ಲಿ ಕೆಲವು ನವಿರಾದ ಕಂಪನವಿದೆ. ನೀನಿರದೆ ನಾನಿಲ್ಲ ಎಂಬ ಭಾವವಿದೆ. ಇಲ್ಲಿ ಕೆಲವು ಎಲ್ಲಾ ಮಿತಿಗಳನ್ನು ದಾಟಿ ಹೋದ ಎಸ್ಎಂಎಸ್ಗಳು. ಇನ್ನು ಕೆಲವು ಹುಚ್ಚುತನದ ಪರಮಾವಧಿ ಎಂಬಂತವುಗಳು. ಅವುಗಳಲ್ಲಿ ಆರಾಧನೆ, ಭಯ, ಪ್ರೀತಿ ಎಲ್ಲವೂ ಇರುತ್ತದೆ. ಆದರೆ ಅವ್ಯಾವುದೂ ಎಂದಿಗೂ ಭಯಾನಕ ಎನಿಸುವಂತಹ ವಾತಾವರಣ ಸೃಷ್ಟಿಸಲಿಲ್ಲ. ಬದಲಿಗೆ ಅವುಗಳೆಲ್ಲಾ ಒಂದು ಸುಂದರ ಸಂಬಂಧವನ್ನು ಸೃಷ್ಟಿಸಲು ಸಹಾಯ ಮಾಡಿದವು. ಹಾಗೆ ಮನಸ್ಸಿಗೆ ಇಷ್ಟವಾದವುಗಳು ಇನ್ಬಾಕ್ಸ್ನಿಂದ ಡಿಲೀಟ್ ಆಗದೆ ಹಾಗೇ ಉಳಿದುಕೊಂಡವು. ನನ್ನ ಹೃದಯವ ಕಾಡುವ ನಿನ್ನ ಮನಸಿನ ಹಾಗೆ
ಅಷ್ಟಕ್ಕೂ ಪ್ರೀತಿ ಅಂದರೆ ಏನು? ಅದು ಹೃದಯಗಳ ಭಾಷೆ. ಕೆಲವರು ಈ ವಾದ ಮಂಡಿಸುವಾಗ ಹೃದಯವಿದೆಯಾ ನಿನಗೆ ಎಂದು ಕೇಳುವವರೂ ಇರುತ್ತಾರೆ. ಅದು ಮನಸ್ಸಿನಲ್ಲಿ ಇದ್ದುದನ್ನು ಹೇಳಿ ನಿರಾಳವಾದ ಮಗುವಿನ ಭಾಷೆ. ಅದಕ್ಕೆ ಎಲ್ಲವುಗಳ ಕುತೂಹಲವಿರುತ್ತೆ. ಪ್ರೀತಿಯಲ್ಲೂ ಅವನಿಗೆ/ ಅವಳಿಗೆ ಕುತೂಹಲ ಇರುತ್ತವೆ. ಅದು ಬಾ ಎಂದಾಗ ಬರುವುದೂ ಇಲ್ಲ, ಹೋಗು ಎಂದಾಗ ಹೋಗುವುದೂ ಇಲ್ಲ. ಅದು ಹರಿವ ಜಲಲ ಜಲಲ ಧಾರೆ. ಅವನು ಹತ್ತಿರ ಇರುವಾಗ ಇದ್ದಷ್ಟು ಭಾವ ದೂರ ಇರುವಾಗಲೂ ಇರಬೇಕು. ಅದು ಬಿಟ್ಟು ನೀ ಪ್ರತಿಕ್ಷಣವೂ ನನ್ನ ಜತೆ ಇರಬೇಕು ಎಂಬ ಹಂಗ್ಯಾಕೆ?
ಪ್ರೀತಿಗೆ ಯಾರು ಎಷ್ಟು ದೂರವಿದ್ದರೇನು? ಎಷ್ಟು ಮೌನವಾದರೇನು? ಹಳೆಯ ಭರವಸೆಗಳು ಹಾಗೂ ಅವುಗಳನ್ನು ಉಳಿಸಿಕೊಂಡು ಹೋಗುವ ರೀತಿ ಗೊತ್ತಿದ್ದರೆ ಮುಗಿಯಿತು. ಮತ್ತೆ ಪ್ರೀತಿಸುವವರನ್ನು ಯಾರು ಏನೂ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ವ್ಯಾಲೆಂಟೈನ್ ಎಂಬ ದಿನವೊಂದರ ಅಗತ್ಯವೂ ಇಲ್ಲ ಎಂದು ಹೇಳುತ್ತಾ ಈ ಪತ್ರ ನಿನಗೆ.
ಪ್ರೀತಿಯ ಹುಡುಗಿಗೆ,
ಇನ್ನೇನು ಕಾಲೇಜು ಮುಗಿಯಲು ಸರಿಸುಮಾರು ೧೦೦ ದಿನ ಬಾಕಿ. ಕಾಲೇಜಿನಲ್ಲಿ ಓಡಾಡುತ್ತಿದ್ದ ಜಿಂಕೆ ಮರಿಯಂತಹ ನಿನ್ನನ್ನು ಯಾಕೆ ಪ್ರೀತಿಸಲು ಆರಂಭಿಸಿದೆ ಎನ್ನುವುದು ಇನ್ನೂ ನಿಗೂಢ ಹಾಗೂ ಅಷ್ಟೇ ವಾಸ್ತವ. ಆದರೆ ಗೆಳತೀ ಒಂದಂತೂ ಸತ್ಯ ನಿನ್ನ ಪ್ರೀತಿಯಿಂದ ನಾ ಬದಲಾಗಿದ್ದೇನೆ.
ಮೊದಲು ಕೇವಲ ಗೆಳತಿಯಾಗಿದ್ದ ನೀನು ಈಗ ನನ್ನ ಪಾಲಿಗೆ, ದೋಸ್ತ್ ದೋಸ್ತ್ ನಾ ರಹಾ!
ಹೌದಮ್ಮಾ, ನಾನು ಹೇಳ್ತಿರೋದು ನಿಜ. ಮೊದಲಾದರೆ ನೀನು ಕೇವಲ ದೋಸ್ತ್ ಮಾತ್ರ ಆಗಿದ್ದೆ. ಆದರೆ ಅದ್ಯಾವುದೋ ತಿರುವಿನಲಿ ಇಬ್ಬರೂ ನಿಂತು ಒಬ್ಬರನೊಬ್ಬರು ಅರಿಯಲು ಆರಂಭಿಸಿದಾಗ ದೋಸ್ತಿಯೇ ಪ್ರೀತಿಯೆಂಬ ಮಾಯೆಗೆ ಬದಲಾಯಿತು. ಅಲ್ಲಿಗೆ ನೀನು ದೋಸ್ತ್ ದೋಸ್ತ್ ನಾ ರಹಾ!
ಅಷ್ಟಕ್ಕೂ ನಮ್ಮನ್ನು ಇಷ್ಟು ಆಪ್ತವಾಗಿಸಿದ ವಿಷಯಗಳ ಬಗ್ಗೆ ಯೋಚಿಸಿದರೆ ನಾವಿಬ್ಬರೂ ಒಂದಾಗುವುದು ಕೇವಲ ಸಾಹಿತ್ಯದಲ್ಲಿ ಮಾತ್ರ. ನಿನಗೆ ಶೇಕ್ಸ್ ಪಿಯರ್ ಇಷ್ಟವಾಗುತ್ತಾನೆ. ನನಗೆ ಪೌಲೋ ಕೊಹೆಲೋ ಇಷ್ಟವಾಗುತ್ತಾನೆ. ಉಳಿದಂತೆ ನಾವಿಬ್ಬರೂ ವಿರುದ್ಧ ಧ್ರುವಗಳು. ಎಲ್ಲಿಯೂ ಯಾವುದೇ ವಿಷಯದಲ್ಲೂ ನಾವು ಒಂದಾಗುವುದೇ ಇಲ್ಲ. ಆದರೆ ಪರಸ್ಪರ ಗೌರವ, ಹದ ಮೀರದ ಪ್ರೀತಿ, ಇದೆಲ್ಲಕ್ಕೂ ಮಿಗಿಲಾಗಿ ಎರಡೂ ಮನೆಯವರ ಶುಭಾಶೀರ್ವಾದ. ನಮ್ಮ ಪ್ರೀತಿ ಹಸನಾಗಲು ಇದಕ್ಕಿಂತ ಹೆಚ್ಚಿನದು ಇನ್ಯಾವುದು ಬೇಕು ಹೇಳು.
ಯಾವುದೇ ವಿಷಯಗಳು ಬಂದರೂ ಅದನ್ನು ಮಾತಿಗೆ ಮಾತು ಬೆಳೆಸಿ ಹಟಕ್ಕೆ ಬಿದ್ದು ಚರ್ಚಿಸುತ್ತೇವೆ. ಅದೆಷ್ಟು ಫೋನ್ ಕಾಲ್, ಅದೆಷ್ಟು ಎಸ್ಎಂಎಸ್!
ಗೆಳತೀ ಮುಂದಿನ ಶನಿವಾರ ವ್ಯಾಲೆಂಟೈನ್ಸ್ ಡೇ. ಕಳೆದ ವ್ಯಾಲೆಂಟೈನ್ ಡೇಗೆ ನಾವು ನಿನ್ನೂರ ಬೀಚ್ನಲ್ಲಿದ್ದೆವು. ನಮಗೆ ಎಲ್ಲಾ ದಿನವೂ ವಿಶೇಷವೇ. ಆದರೆ ಪ್ರೀತಿಯನ್ನು ಕೇವಲ ಆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಿಸಿದ್ದಿದ್ದರೆ ನಮ್ಮ ಪ್ರೀತಿ ಹೀಗಿರುತ್ತಿತ್ತೇ ಗೆಳತೀ. ನಾವು ಪ್ರೀತಿಗೆ ಮೂಗುದಾರ ಹಾಕಲಿಲ್ಲ. ಅದು ಅದರ ಪಾಡಿಗೆ ಇರುತ್ತಿತ್ತು. ಅದಕ್ಕೇ ಈ ಬಾರಿ ವ್ಯಾಲೆಂಟೈನ್ ಡೇಗೆ ನಮ್ಮದು ದಟ್ಟ ಕಾನನದ ನಡುವಣ ಪ್ರೀತಿ. ಅದಕ್ಕೆ ನಮ್ಮಿಬ್ಬರ ಮನೆಯವರದೇ ಆತಿಥ್ಯ! ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳು.
ಅವರೂ ಹಾಗೇನೇ,
ಬಹುತ್ ಪ್ಯಾರ್ ಕರ್ತೇ ಹೇ ತುಮ್ಕೋ ಸನಮ್
ಕಸಮ್ ಚಾಹೀ ಲೇಲೋ...
ಇಂದಿಗೂ ನಿನ್ನ ನೋಡುವಾಗಿನ ಸಡಗರ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ನಿನ್ನ ಜತೆ ಮಾತಿಗೆ ಕುಳಿತರೆ ಮಾತು ಹೊರಡುವುದಿಲ್ಲ. ನೀನು ಮಾತನಾಡುತ್ತಾ ಹೋಗುವುದಕ್ಕೆಲ್ಲಾ ನಾನು ಕಿವಿಯಾಗುತ್ತೇನೆ. ಆದರೂ ನಿನ್ನಲ್ಲಿ ಮುನಿಸಿಲ್ಲ. ಅದಕ್ಕೆ ಶನಿವಾರ ಬೆಳಗ್ಗೆ ಸೂರ್ಯೋದಯವಾಗುವಾವ ಹೊತ್ತಿಗೆ ದಟ್ಟ ಕಾನನದ ನಡುವೆ ಮರಗಳೆಡೆಯಿಂದ ಹೊರಸೂಸುವ ಹೊಂಗಿರಣಗಳ ಸಾಕ್ಷಿಯಾಗಿ ನಾವಿಬ್ಬರೂ ಎದುರು ಬದುರಾಗಿ ಕುಳಿತಿರುತ್ತೀವಿ. ಹಿನ್ನೆಲೆಯಲ್ಲಿ ಹಕ್ಕಿಗಳ ಕಲರವ ಇರುತ್ತೆ. ಎಲ್ಲೋ ದೂರದಲ್ಲಿ ನೀರು ಹರಿಯುವ ನಿನಾದವ ಕೇಳುತ್ತಾ ನೀ ನನ್ನ ತೋಳಿನಲ್ಲಿ ಬಂಧಿಯಾಗಿರುತ್ತೀ. ಆ ಘಳಿಗೆಗೆ ಕಾಯುತ್ತಿದ್ದಂತೆ ಆಕಾಶದಿಂದ ನಾಲ್ಕು ಹನಿ. ಅದು ಮಳೆಯೋ, ಮಂಜಿನ ಹನಿಯೋ ಅದರ ಪರಿವೆ ನಮಗೆ ಬೇಡ. ಹಾಗೆ ನಿನ್ನ ತೋಳಿಗಾನಿಸಿಕೊಂಡು ನಿಂತ ವೇಳೆಯೇ ನನ್ನ ಕೈಬೆರಳುಗಳು ನಿನ್ನ ಕೇಶರಾಶಿಯ ನಡುವೆ ಹರಿದಾಡುತ್ತಿರುತ್ತವೆ. ನಿನ್ನ ದೇಹದಲ್ಲಿ ಅದೇನೋ ಪುಳಕ. ಆದರೆ ಕಣ್ಣಲ್ಲಿ ದಿಟ್ಟ ಆತಂಕ. ಆದರೆ ನನಗೆ ನಿನ್ನ ಅರ್ಥೈಸಿಕೊಂಡು ನಿನ್ನ ತಬ್ಬಿ ಮುದ್ದು ಮಾಡುವಾಸೆ. ಅದು ನಮ್ಮ ಪಾಲಿನ ರಸ ಘಳಿಗೆ. ಇಷ್ಟು ಕಾಲ ಕಂಡ ಕನಸು ನನಸಾಗಿಸಲು ದೇವರೇ ದಯ ಮಾಡಿಸಿದ ದಿನವಿದು. ಅಂತಹ ಒಂದು ಮುಂಜಾವಿದು. ಈ ಶುಭಘಳಿಗೆಯ ನಿರೀಕ್ಷೆಯಲ್ಲಿ ನಾವು ಅದೆಷ್ಟು ವರ್ಷ ಕಾದೆವೋ ಅಲ್ಲವೇನೇ?
- ‘ನಿನ್ನ ಮಾತ್ರ’ ಪ್ರೀತಿಸುವ ಹುಡುಗ!!!
ಈ ಪ್ರೇಮಪತ್ರ ಕಡೆಯ ಅಕ್ಷರದ ತನಕವೂ ಮತ್ತೆ ಮತ್ತೆ ನೀ ಓದಿರುತ್ತೀಯಾ. ಮನದಲ್ಲಿ ಸಾವಿರ ಕನಸು ಕಟ್ಟಿಕೊಂಡವನ ಬಗ್ಗೆ ಪ್ರೀತಿ ತುಂಬಿದ ತಿರಸ್ಕಾರ ಇರುತ್ತದೆ. ಇಷ್ಟೆಲ್ಲಾ ಆದರೂ ನಿನ್ನ ಮನಸ್ಸು ಕೇಳುತ್ತೆ ಪ್ರೀತಿ ಅಂದ್ರೆ ಇಷ್ಟೂ ಪ್ರೀತ್ಸೋದಾ? ಹಾಗಾಗುತ್ತಿದ್ದಂತೆ ಹಿಂದೆ ನಾವು ಆಡಿತ ಮಾತುಗಳು ತುಂಬು ಪ್ರೀತಿಯಿಂದ ಮನದ ಮುಂದೆ ಬಿಚ್ಚಿಕೊಳ್ಳುತ್ತೆ. ಮತ್ತೆ ನೆನಪುಗಳ ನೇವರಿಸುತ್ತಾ ಕಣ್ಣ ತುಂಬಾ ಕಣ್ಣೀರಧಾರೆ. ಆದರೆ ಅದು ನಿನ್ನ ಕಣ್ಣಿಂದ ಹೊರಡುವುದಿಲ್ಲ ನಿನ್ನ ಹಟದಂತೆ. ಅದು ನನಗೆ ಅರ್ಥವಾಗುತ್ತದೆ. ಮರುಕ್ಷಣ ಕಣ್ಣೀರಿಲ್ಲದ ಉಸಿರುಗಟ್ಟಿಸುವಿಕೆ, ಜತೆಗೆ ಬಿಕ್ಕಳಿಕೆ. ಮುಂದಿನ ಪ್ರಶ್ನೆಗಳಿಗೆಲ್ಲಾ ನಿನ್ನ ಮೌನವೇ ಆಭರಣ. ಅದಕ್ಕೇನಿದ್ದರೂ ರಾತ್ರಿಯೇ ಸಮಯ. ರಾತ್ರಿ ಸೂರ್ಯ ಹುಟ್ಟುವ ವಿರುದ್ಧ ದಿಕ್ಕಿಗೆ ತಲೆದಿಂಬಿಗೊರಗಿ ತಲೆಯಾನಿಸಿದರೆ ಅಲ್ಲಿ ಕಣ್ಣೀರಧಾರೆ. ಇಷ್ಟೆಲ್ಲಾ ನಿನಗಾದರೆ ಅಲ್ಲಿಗೆ ಪಾಪಿ ಚಿರಾಯು, sorry ನನ್ನ ನಿನ್ನ ಪ್ರೀತಿ ಚಿರಾಯು!!!
10 comments:
ಪ್ರೀತಿಗೆ ದಿನ ನಿಗದಿ ಮಾಡುವುದು ನಿಜಕ್ಕೂ ಸರಿಯಲ್ಲ. ತುಂಬಾ ಸೊಗಸಾಗಿ ಪ್ರೀತಿ ಬಗ್ಗೆ, ಪತ್ರದೊಂದಿಗೆ ಬರೆದಿರುವಿರಿ. ಓದಿ ತುಂಬಾ ಖುಷಿಯಾಯಿತು. ಪ್ರೀತಿಸಿದರೆ ಹೀಗೆ ಪ್ರೀತಿಸಬೇಕು... ಎಂಬತಿದೆ.
ಸರ್,
ಅದ್ಬುತವಾದ ಪತ್ರ....ಪ್ರೀತಿಗೆ ದಿನಗಳನ್ನೂ ಎಂದು ನಿಗದಿಮಾಡಬಾರದು.... ನಿಮ್ಮ ಅಪ್ಪಣೆಯಿಲ್ಲದೆ ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ....
ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ....ಪ್ರತಿಕ್ರಿಯಿಸಿ....
ಚೇವಾರ್..
"ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯಾ ಹುಚ್ಚ?
ಹಗಲಿರುಳು ದುಡಿದರೂ, ಹಲಜನುಮ ಕಳೆದರೂ
ನೀ ತೆತ್ತಲಾರೆ ಬರೇ ಅಂಚೆ ವೆಚ್ಚ.." ಪ್ರೀತಿ ಕುರಿತಾಗಿ ಬೇಂದ್ರೆ ಅಜ್ಜ ಹೇಳಿದ ಮಾತು ನಿಮ್ಮ ಪತ್ರ ಓದುತ್ತಿದ್ದಂತೆ ನೆನಪಾಯಿತು. ಪ್ರೀತಿ, ಮಮತೆ, ಆಪ್ತತೆ ಎಲ್ಲದರಲ್ಲೂ ಅದ್ದಿ ತೆಗೆದ ಪತ್ರ..ಮನಸ್ಸಿಗೆ ಖುಷಿ ಕೊಡ್ತು. ಇನ್ನೂ ಹೆಚ್ಚು ಬರಹಗಳನ್ನು ಬರೆಯಿರಿ..ಭಾವನೆಗಳನ್ನು ಬಿಚ್ಚಿಡಿ. ಪುರುಸೋತ್ತು ಮಾಡಿಕೊಂಡು ಬಂದು ಓದುತ್ತೇವೆ..
.ಹಾಗೇ ಓದಿದವರಿಗೆ ಥ್ಯಾಂಕ್ಸ್ ಹೇಳಕೆ ಮರೆಯಬೇಡಿ..(:)
-ಚಿತ್ರಾ
ಚೇವಾರ್ ಅವರೆ,
ಪ್ರೀತಿ ತುಂಬಿದ ಬರಹ ಇಷ್ಟವಾಯಿತು. ಒಂದು ದಿನದ ಪ್ರೀತಿಯಿಂದ ಸಿಗುವ ಆನಂದ ಎಷ್ಟು ಕ್ಷಣಿಕ ಎಂದು ಹೇಳುತ್ತಿದೆ ನಿಮ್ಮ ಬರಹ. ಪ್ರೀತಿ ಚಿರಾಯುವಾಗಲು ಅದು ಕಾಲನನ್ನೂ ಮೀರಿರಬೇಕು ಅಲ್ಲವೇ? ಬರೆಯುತ್ತಿರಿ. ಬರುತ್ತಿರುವೆ.
ನನ್ನ ಬ್ಲಾಗ್ ಅನ್ನು ಸಧ್ಯವೇ ಅಪ್ಡೇಟ್ ಮಾಡುವೆ. ಸಮಯಾವಕಾಶವಿಲ್ಲದೇ ತುಸು ಕಾಲ ನಿಂತಿತ್ತು. ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.
ಮಲ್ಲಿಕಾರ್ಜುನರಿಗೆ ಪ್ರೀತಿಗೆ ದಿನ ಅಗತ್ಯ ಇಲ್ಲ ಎಂಬ ಮಾತಿಗೆ ಸಹಮತ.
ಶಿವು,
ಖಂಡಿತಾ ಬೇಟಿ ನೀಡುವೆ.
ಚಿತ್ರಾ,
ಓದಿದವರಿಗೆ ಥ್ಯಾಂಕ್ಸ್ ಹೇಳಕೆ ಮರೆತಿಲ್ಲ. ಹೀಗೆ ಆಗಾಗ ಎಚ್ಚರಿಸುತ್ತಿರಿ:)
ತೇಜಸ್ವಿನಿ ಅಕ್ಕನಿಗೆ,
ಪ್ರೀತಿ ಚಿರಾಯುವಾಗಲು ಅದು ಕಾಲನನ್ನೂ ಮೀರಿರಬೇಕು ಅಲ್ಲವೇ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು. ಪ್ರೋತ್ಸಾಹ ನಿಮಗೆ ನಮ್ಮ ಭಾಗದಿಂದ ಎಂದಿಗೂ ಇರುತ್ತದೆ.
ಬರಹ ತುಂಬಾ ಇಷ್ಟವಾಯಿತು. ನಾನು ಧರಿತ್ರಿ ಬ್ಲಾಗ್ ಲೋಕಕ್ಕೆ ಹೊಸಬಳು. ಒಂದು ಸಲ ಬಂದು ಧರಿತ್ರಿಗೆ ಕಣ್ಣಾಡಿಸ್ತೀರಾ?
-ಧರಿತ್ರಿ
ಪ್ರೀತಿಯ ಹುಡುಗಿಯ ಮನಸ್ಸು ಅರಿಯಲು ನೀವು ಬರೆದ ಪತ್ರ ತುಂಬಾ ಭಾವನಾತ್ಮಕವಾಗಿದೆ. "ನನ್ನ ನಿನ್ನ ಪ್ರೀತಿ ಚಿರಾಯು" ಅಂದರೆ ನಿಮ್ಮದು ಒಮ್ಮುಖ ಪ್ರೀತಿಯಾಗಿರಲಿಲ್ಲ ಅನ್ನಿಸುತ್ತೆ. ಮತ್ತೇಕೆ "ದೋಸ್ತ್ ದೋಸ್ತ್ ನಾ ರಹಾ" ಆಯಿತೋ ಗೊತ್ತಾಗ್ಲಿಲ್ಲ. ಮನಮುಟ್ಟುವ ಬರಹಕ್ಕೆ ಅಭಿನಂದನೆಗಳು. ಹೀಗೇ ಬರುತ್ತ ಇರುತ್ತೇನೆ, ಹೀಗೇ ಬರೆಯುತ್ತಾ ಇರಿ :) .
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
Love uuuuuuuuuuuuuuuuuuuuuuuuuuuuuuuuuuuuuuuuuuuuuuuuuu
-(:?)
ಚೆನ್ನಾಗಿದೆ. ಪ್ರೀತಿ ಪ್ರೇಮದ ಬಗ್ಗೆ ನಿಮಗಿರುವ ಕಲ್ಪನೆ ನೋಡಿ ಪ್ರೀತಿಸದವರೂ ಪ್ರೀತಿಸಲು ಶುರುಮಾಡಬಹುದು.
Post a Comment