Wednesday, February 04, 2009

ವೇಷದಲ್ಲೇ ಬದುಕಿನ ಪಾತ್ರ ಮುಗಿಸಿದ ಶಂಭು ಹೆಗಡೆ

(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ೪-೦೨-೨೦೦೯ರಂದು ಪ್ರಕಟವಾದ ಬರಹಗಳು. ಯಕ್ಷಗಾನದ ಮೇಲಿನ ಪ್ರೀತಿಯಿಂದ ಇದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.)


- ಕುಣಿಯುತ್ತಲೇ ಕುಸಿದ ರಂಗದಿಗ್ಗಜ
- ಮೊದಲು ಯಕ್ಷ ಹೆಜ್ಜೆಯಿಟ್ಟ ಇಡಗುಂಜಿಯಲ್ಲೇ ಸಾವು


ಕ್ಷರಂಗದ ಅಭಿಜಾತ ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಶಂಭು ಹೆಗಡೆ ಕೆರೆಮನೆ (೭೧) ಮಂಗಳವಾರ ನಸುಕಿನಲ್ಲಿ ಇಡಗುಂಜಿಯಲ್ಲಿನ ರಂಗಸ್ಥಳದಲ್ಲೇ ಹೃದಯಾಘಾತದಿಂದ ವೀರಮರಣ ಹೊಂದಿದರು.
ತಮ್ಮ ಆರಾಧ್ಯ ದೈವ ವಿನಾಯಕನ ಸನ್ನಿಧಿಯ ಎದುರು ರಥಸಪ್ತಮಿಯ ದಿನ ಇಷ್ಟವಾದ ರಾಮನ ಪಾತ್ರ ನಿರ್ವಹಿಸಿ ಸಾವಿರಾರು ಜನರನ್ನು ರಂಜಿಸುತ್ತಲೇ ಬಣ್ಣ ಬಳಿದುಕೊಂಡು ಗೆಜ್ಜೆ ಕಟ್ಟಿಕೊಂಡು ಕಣ್ಮುಚ್ಚಿದರು. ಅಕ್ಷರಶಃ ಕೊನೆಯುಸಿರಿರುವರೆಗೆ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದರು. ಅವರಿಗೆ ಪತ್ನಿ ಗೌರಿ, ಪುತ್ರ ಶಿವಾನಂದ, ಪುತ್ರಿ ಶಾರದಾ, ಸೊಸೆ ರಾಜೇಶ್ವರಿ, ಅಪಾರ ಅಭಿಮಾನಿಗಳಿದ್ದಾರೆ.
ಮಂಗಳವಾರ ನಸುಕಿನ ವೇಳೆ ತಮಗೆ ಬಹು ಆಪ್ತವಾದ ‘ಸೀತಾ ವಿಯೋಗ’ ಪ್ರಸಂಗದಲ್ಲಿ ರಾಮನ ಪಾತ್ರದ ವೇಷ ತೊಟ್ಟು ಶಂಭು ಹೆಗಡೆ ಅತ್ಯುತ್ಸಾಹದಿಂದ ನರ್ತನ, ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರು. ಪ್ರಸಂಗದ ಅಂತಿಮ ಹಂತದಲ್ಲಿ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ’ ಎಂದು ಹಾಡು ಹೇಳುತ್ತಿದ್ದಂತೆ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೂ ಹಾಡು ಮುಗಿದ ಮೇಲೆ ‘ಏಳಿ ಹೋಗೋಣ ಏಳಿ ಹೋಗೋಣ’ಎಂದು ಹೇಳಿದ್ದಾರೆ. ನೆಬ್ಬೂರು ಭಾಗವತರತ್ತ ತಿರುಗಿ ‘ನನ್ನ ಹತ್ರ ಇನ್ನು ಆಗ್ತಿಲ್ಲೆ, ನೀವು ಮುಗಿಸಿ’ ಎಂದವರೇ ಚೌಕಿಯತ್ತ ಹೆಜ್ಜೆ ಹಾಕಿದವರು ಕಿರೀಟ ತೆಗೆದಿಟ್ಟು ಎದೆ ಹಿಡಿದು ಮಲಗಿದರು. ಸ್ವಲ್ಪ ವಾಂತಿಯನ್ನೂ ಮಾಡಿದರು. ಅಷ್ಟರಲ್ಲಿ ಮಗ ಶಿವಾನಂದ ಹೆಗಡೆ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಪರಂಧಾಮರಾಗಿದ್ದರು. ಬಣ್ಣ ಹಚ್ಚಿಕೊಂಡೆ ಬಣ್ಣದ ಬದುಕಿಗೆ ವಿದಾಯ ಹೇಳಿದರು.
ಇಲ್ಲಿನ ಆರಾಧ್ಯ ದೈವ ಶ್ರೀ ಇಡಗುಂಜಿ ಮಹಾಗಣಪತಿ ಹೆಸರಿನಲ್ಲಿ ಸ್ಥಾಪಿಸಿದ್ದ ಯಕ್ಷಗಾನ ಮೇಳದ ಹರಕೆಯಾಟವನ್ನು ಪ್ರತಿ ವರ್ಷ ನಡೆಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದು, ಫೆ.೨ರಂದು ಇಡಗುಂಜಿಯಲ್ಲಿ ಜಾತ್ರೆ ಪ್ರಯುಕ್ತ ಸಂಜೆ ರಥೋತ್ಸವ ಕಾರ್ಯಕ್ರಮಗಳು ಮುಗಿದ ನಂತರ ರಾತ್ರಿ ೧೧ಗಂಟೆಗೆ ಜಿ.ಆರ್. ಪಾಂಡೇಶ್ವರರ ಕೃತಿ ‘ಮಾರಾವತಾರ’ಪ್ರಸಂಗವನ್ನು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಬಳಿಕ ‘ಸೀತಾ ವಿಯೋಗ’ ಆರಂಭವಾಯಿತು.
ಕೇವಲ ೩-೪ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯಕ್ಷಗಾನದ ವೈಭವವನ್ನು ವಿಶ್ವಾದ್ಯಂತ ಅನಾವರಣಗೊಳಿಸಿದರು. ಯಕ್ಷಗಾನದ ಸಂಪ್ರದಾಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಅರ್ಧ ಚಂದ್ರಾಕೃತಿಯ ರಂಗಸಜ್ಜಿಕೆ. ಕರುಣಾರಸಕ್ಕೆ ಸೂಕ್ತ ಅಭಿನಯ, ಮೇಳದ ಸಂಘಟನೆ, ಅಪ್ರತಿಮ ಮಾತುಗಾರಿಕೆ, ಚಿಂತನೆಗಳಿಂದ ಅಪರೂಪದ ಅಪೂರ್ವ ಕಲಾವಿದರಾಗಿದ್ದ ಶಂಭು ಹೆಗಡೆ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿದ ಸ್ಥಳದಲ್ಲೇ ಬದುಕಿನ ಕೊನೆಯ ಹೆಜ್ಜೆ ಹಾಕಿದರು.
- ಕಲಾಲೋಕಕ್ಕೆ ಮಾದರಿ: ತಂದೆ ಶಿವರಾಮ ಹೆಗಡೆ ಕೆರೆಮನೆಯವರಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲಾಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡರು. ಶ್ರೀಮಯ ಯಕ್ಷಗಾನ ಕಲಾ ತರಬೇತಿ ಕೇಂದ್ರದ ಸಾರಥ್ಯ ವಹಿಸಿ, ತಂದೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಗಮನ ಸೆಳೆಯುವ ರಂಗಮಂದಿರ ನಿರ್ಮಿಸಿ, ರಾಜ್ಯ ಯಕ್ಷಗಾನ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ತೆರೆಮರೆಯಲ್ಲಿರುವ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಅವರನ್ನು ಬೆಳಕಿಗೆ ತಂದು ಪ್ರೆತ್ಸಾಹಿಸಿದರು. ಶಿವರಾಮ ಹೆಗಡೆಯವರ ಹೆಸರಿನಲ್ಲಿ ನಾಡಿನ ಕಲಾವಿದರನ್ನು ಕರೆತಂದು ಸನ್ಮಾನಿಸಿ ಕಲಾಲೋಕಕ್ಕೆ ಮಾದರಿಯಾಗಿ ನಿಂತವರು.
ಆರಂಭದಲ್ಲಿ ನಾಟಕ ಪಾತ್ರಗಳನ್ನೂ ನಿರ್ವಹಿಸಿದ್ದ ಅವರು ‘ಪರ್ವ’ ಚಿತ್ರದಲ್ಲಿ ನಟಿಸಿದ ಪೋಷಕ ಪಾತ್ರಕ್ಕೆ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವರಾಮ ಹೆಗಡೆಯವರ ಹಿರಿಯ ಮಗನಾಗಿ ೧೯೩೮ರಲ್ಲಿ ಜನಿಸಿದ ಶಂಭು ಹೆಗಡೆ ವಿವಿಧ ವೃತ್ತಿ ಮೇಳಗಳಲ್ಲಿ ತೊಡಗಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರಿಗೆ ಸಂದ ಸಂಘ- ಸಂಸ್ಥೆಗಳ ಅಸಂಖ್ಯ ಸನ್ಮಾನ ಗೌರವಗಳು ವಿರಳಶ್ರೇಣಿಯ ಪ್ರತಿಭೆಗೆ ಸಿಕ್ಕ ಪ್ರತೀಕವಾಗಿದೆ. ಅವರ ನಿಧನದಿಂದ ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯ ಪ್ರಖರ ಬೆಳಕೊಂದು ಆರಿದಂತಾಗಿದೆ.
ಅಷ್ಟೇ ಅಲ್ಲ, ಶಂಭು ಹೆಗಡೆ ನಿಧನದಿಂದ ಯಕ್ಷಲೋಕದ ಹರಿಶ್ಚಂದ್ರ, ನಳ, ಕರ್ಣ, ರಾಮನಿರ್ಯಾಣದ ರಾಮ, ಸತಿ ಸುಶೀಲೆಯ ದುರ್ಜಯ, ಕೃಷ್ಣ ಮೊದಲಾದ ಪಾತ್ರಗಳೂ ಜೀವ ಕಳೆದುಕೊಂಡಿವೆ.
ಯಕ್ಷಲೋಕದಿಂದ ನಕ್ಷತ್ರಲೋಕಕ್ಕೆ: ಕೆರೆಮನೆ ಶಂಭು ಹೆಗಡೆಯವರ ಪಾರ್ಥಿವ ಶರೀರ ಮಂಗಳವಾರ ಸಂಜೆ ೫ ಗಂಟೆಗೆ ಅವರ ಕರ್ಮಭೂಮಿ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದ ಆವರಣದಲ್ಲಿ ಸಿದ್ಧಪಡಿಸಲಾಗಿದ್ದ ಚಿತೆಯಲ್ಲಿ ಪಂಚಭೂತಗಳಲ್ಲಿ ಲೀನವಾಯಿತು.
ಶಂಭು ಹೆಗಡೆಯವರ ಪುತ್ರ ಶಿವಾನಂದ ಹೆಗಡೆ ತಮ್ಮ ತೀರ್ಥರೂಪರ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿಪೂರ್ವಕ ಅಗ್ನಿಸ್ಪರ್ಶ ಮಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್, ಬಳ್ಕೂರು ಕೃಷ್ಣ ಯಾಜಿ, ಪಂ. ಪರಮೇಶ್ವರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೊಳ್ಯೂರು ರಾಮಚಂದ್ರ ರಾವ್, ಕಪ್ಪಕೆರೆ ಸುಬ್ರಾಯ ಭಾಗ್ವತ್, ಭಾಸ್ಕರ ಜೋಷಿ, ಬಿ.ಪಿ. ನಾಯಕ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಲಕ್ಷ್ಮೀನಾರಾಯಣ ಕಾಶಿ ಶಿವಮೊಗ್ಗಾ ಮತ್ತಿತರ ಗಣ್ಯರು, ಕಲಾವಿದರು, ಅಭಿಮಾನಿಗಳು ಶಂಭು ಹೆಗಡೆಯವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹಿರಿಯ ಕಲಾವಿದನ ನಿಧನಕ್ಕೆ ಕಂಬನಿ ಮಿಡಿದರು.

ಬೇಗ ಮುಗಿಸೋ, ಎನ್ನತ್ರ ಆಗ್ತಿಲ್ಲೆ...

ಕುಣಿಯುವಾಗಲೇ ಬಂದಿತ್ತು ನೋಡಾ ಸಾವು
-ವಸಂತಕುಮಾರ್ ಕತಗಾಲ
ಅದು ‘ಲವ ಕುಶರ ಕಾಳಗ’
(ಸೀತಾ ವಿಯೋಗ)ದ ಕೊನೆಯ ಸನ್ನಿವೇಶ. ಭಾಗವತ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ... ನಾಳಿನ್ನೂ ಸೌಖ್ಯವಾ ಪಡೆಯಬಹುದು’ ಎಂಬ ಹಾಡಿಗೆ ಕುಣಿದ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ನೀರು ಕುಡಿದು ಬಂದ ಶಂಭು ಹೆಗಡೆ ನೆಬ್ಬೂರು ಅವರತ್ತ ತಿರುಗಿ ‘ಬೇಗ ಮುಗಿಸು ನನ್ನತ್ರ ಆಗ್ತಿಲ್ಲೆ’ ಎಂದು ಚೌಕಿಗೆ ಬಳಲುತ್ತ ಸಾಗಿ ಇನ್ನಿಲ್ಲವಾದರು.
ಹೌದು, ಯಕ್ಷರಂಗದ ಮೇರು ನಟ ಶಂಭು ಹೆಗಡೆ ಕೊನೆಯುಸಿರೆಳೆಯುವಾಗ ಇತ್ತ ಪ್ರಸಂಗವೂ ಮುಗಿದಿತ್ತು. ರಂಗಸ್ಥಳ ಹಾಗೂ ಚೌಕಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ಶಂಭು ಹೆಗಡೆ ಅವರಿಗೆ ಸಾವಿನ ಮುನ್ಸೂಚನೆ ಇತ್ತೇ ಅಥವಾ ಕಾಕತಾಳೀಯವೇ ಎನ್ನುವ ಶಂಕೆ ಕಾಡದಿರದು.
ಸೋಮವಾರ ಸಂಜೆ ಚೌಕಿಗೆ ಬಂದ ಶಂಭು ಹೆಗಡೆ ತಮ್ಮ ಮೇಳದ ಭಾಗವತ, ಆಪ್ತ ನೆಬ್ಬೂರು ನಾರಾಯಣ ಭಾಗವತ ಅವರಲ್ಲಿ ಬಂದು ‘ನಾರಾಯಣ ನನಗೂ ವಯಸ್ಸು ಆತು. ನಿನಗೂ ವಯಸ್ಸು ಆತು. ಇನ್ನು ಎಷ್ಟು ದಿನ ಕುಣಿತ್ವ ಗೊತ್ತಿಲ್ಲೆ. ಅದಕ್ಕೆ ಒಂದು ದಾಖಲೆ ಇರ್ಲಿ ಹೇಳಿ ಇಡೀ ಆಟ ವೀಡಿಯೋ ರೆಕಾರ್ಡಿಂಗ್ ಮಾಡ್ಸುಲೆ ಹೇಳಿದ್ದೆ’ ಎಂದರು. ನೆಬ್ಬೂರರು ತಲೆ ಅಲ್ಲಾಡಿಸಿ, ಹೌದು ಒಂದು ದಾಖಲೆ ಇರಬೇಕು ಎಂದಿದ್ದರು.
ಲವ- ಕುಶರ ಕಾಳಗದಲ್ಲಿ ಮಗ ಶಿವಾನಂದ ಹೆಗಡೆ ಶತ್ರುಘ್ನನ ಪಾತ್ರ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸದಾಶಿವ ಕುಶನ ಪಾತ್ರ, ಉದಯ ಹೆಗಡೆ ಮಾಳ್ಕೋಡು ಲವನ ಪಾತ್ರ ವಹಿಸಿದ್ದರು. ಪರಮೇಶ್ವರ ಹೆಗಡೆ ಮೃದಂಗ ಹಾಗೂ ಗಜಾನನ ಹೆಗಡೆ ಚೆಂಡೆ ವಾದಕರಾಗಿದ್ದರು. ಶಿವಾನಂದ ಹೆಗಡೆ ಪಾತ್ರ ಮುಗಿಸಿ ಆಟ (ಯಕ್ಷಗಾನ) ನೋಡುತ್ತಿದ್ದರು.
ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಎಂದಿಗಿಂತ ಲವಲವಿಕೆಯಿಂದ ನರ್ತಿಸುತ್ತಿದ್ದರು. ಪ್ರೇಕ್ಷಕರಿಂದ ಚಪ್ಪಾಳೆಯೂ ಆಗಾಗ ಕೇಳಿಬರುತ್ತಿತ್ತು. ಶಂಭು ಹೆಗಡೆ ಅವರಿಗೆ ಆಯಾಸವಾದೀತು ಎಂದು ನೆಬ್ಬೂರು ಭಾಗವತರು ಹಾಡನ್ನು ಮುಗಿಸಲು ಅನುವಾದಾಗಲೆಲ್ಲ ಮತ್ತೆ ಮತ್ತೆ ಹಾಡನ್ನು ಎತ್ತಿ ಹೇಳಿ ವಿವಿಧ ಭಂಗಿಯಲ್ಲಿ ಕುಣಿದರು. ತಮ್ಮ ಅಸ್ಖಲಿತ ಮಾತಿನಿಂದ ಗಮನ ಸೆಳೆಯುತ್ತಿದ್ದರು.
ಕುಶನೊಂದಿಗೆ ಯುದ್ಧಕ್ಕೆ ಅನುವಾದ ಸನ್ನಿವೇಶ. ಶಂಭು ಹೆಗಡೆ ಸಾವಿಗೆ ಕೇವಲ ಐದು ನಿಮಿಷಗಳ ಮುನ್ನ ನಡೆದ ಮಾತುಕತೆ, ಯುದ್ಧಕ್ಕೆ ಬಂದ ರಾಮನಿಗೆ ಕುಶನ ಪಾತ್ರದಲ್ಲಿದ್ದ ಸದಾಶಿವ ‘ನೀನು ವೀರನಾಗಿ ಇಲ್ಲಿಗೆ ಬಂದಿದ್ದೀಯ. ಆದರೆ ಹೋಗುವಾಗ ಹೇಡಿಯಂತೆ ಹೋಗುವೆ’ ಎಂದರು. ತಕ್ಷಣ ಶಂಭು ಹೆಗಡೆ ‘ನಾನು ಬರವಾಗಲೂ ವೀರನೇ. ಹೋಗುವಾಗಲೂ ವೀರನೇ. ರಣಹೇಡಿಯಂತೆ ಎಂದೂ ಹೋಗಲಾರೆ. ನಾನು ಎಲ್ಲಿದ್ದರೂ ವೀರನಾಗಿಯೇ ಇರುತ್ತೇನೆ’ ಎಂದರು.
ಅಷ್ಟರಲ್ಲಿ ಭಾಗವತರು ‘ಏಳಿ ಪೋಗುವ ಮುನಿಪನಿದ್ದೆಡೆಗೆ..’ ಎಂದು ಹಾಡತೊಡಗಿದರು. ಹಾಡು ಮುಗಿಸುವ ಮುನ್ನ ಶಂಭು ಹೆಗಡೆ ಚೌಕಿಗೆ ಹೋಗಿ ನೀರು ಕುಡಿದು ಬಂದರು. ಆಗಲೇ ಹೆಗಡೆ ಅವರ ದೇಹ ಕಂಪಿಸತೊಡಗಿತ್ತು. ಆದರೂ ಸಾವರಿಸಿಕೊಂಡು ‘ಏಳಿ ಹೋಗೋಣ ಏಳಿ ಹೋಗೋಣ’ ಎಂದು ಲವ ಕುಶರಿಗೆ ಹೇಳಿದರು. ಬೇಗ ಮುಗಿಸಿ ನನ್ನಿಂದ ಆಗದು ಎಂದು ಭಾಗವತರಿಗೆ ತಿಳಿಸಿ ಚೌಕಿಗೆ ಹೋದರು.
ಕೊನೆಯ ಸನ್ನಿವೇಶವಾಗಿದ್ದರಿಂದ ಮತ್ತೆ ಎರಡೆ ನಿಮಿಷದಲ್ಲಿ ಯಕ್ಷಗಾನ ಮುಗಿಯಿತು. ಅಷ್ಟರಲ್ಲಿ ಚೌಕಿಯಲ್ಲಿ ಶಂಭು ಹೆಗಡೆ ಎದೆನೋವಿನಿಂದ ಬಳಲುತ್ತಿದ್ದರು. ಸುದ್ದಿ ತಿಳಿದು ಎಲ್ಲರೂ ಚೌಕಿಯತ್ತ ಮುಗಿಬಿದ್ದರು. ಆದರೆ ತರಾತುರಿಯಿಂದ ಹಚ್ಚಿದ ಬಣ್ಣದಲ್ಲೇ ಶಂಭು ಹೆಗಡೆ ಅವರನ್ನು ಶಿವಾನಂದ ಹೆಗಡೆ ಕಾರಿನಲ್ಲಿ ಹೊನ್ನಾವರ ಆಸ್ಪತ್ರೆಯತ್ತ ಕರೆದೊಯ್ದರು. ಅಲ್ಲಿಗೆ ಶಂಭು ಹೆಗಡೆ ಅವರ ‘ಪರ್ವ’ ಮುಕ್ತಾಯವಾಗಿತ್ತು.

ಅವರೊಂದಿಗೆ ಗೆಜ್ಜೆ ಕಟ್ಟಿ ಕುಣಿವ ಆಸೆ ಈಡೇರಲೇ ಇಲ್ಲ...
- ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ: ಚಿಟ್ಟಾಣಿ ರಾಮಚಂದ್ರ ಹೆಗಡೆ
ಬಡಗುತಿಟ್ಟು ಯಕ್ಷರಂಗದಲ್ಲಿ ಚಿಟ್ಟಾಣಿ ಮತ್ತು ಶಂಭುಹೆಗಡೆ ಎರಡು ಮೇರು ತಾರೆಗಳು. ಇವರಿಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ವೈಷಮ್ಯ ಇಲ್ಲದಿದ್ದರೂ ಪ್ರೇಕ್ಷಕ ವರ್ಗದಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿಬಿಟ್ಟಿತ್ತು.
ತಮ್ಮ ಹಾಗು ಶಂಭು ಹೆಗಡೆ ನಡುವಿನ ಒಡನಾಟವನ್ನು ಚಿಟ್ಟಾಣಿ ಇಲ್ಲಿ ಬಿಚ್ಚಿಟ್ಟಿದ್ದಾರೆ.





- ಚಿಟ್ಟಾಣಿ ರಾಮಚಂದ್ರ ಹೆಗಡೆ
ಕೋಟಿಗೊಬ್ಬ ಕಲಾವಿದ ಶಂಭು ಹೆಗಡೆ. ಅಂತಹ ಕಲಾವಿದ ಶಂಭು ಅವರೊಂದಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬೇಕೆಂಬ ಆಸೆ ಕೊನೆಗೂ ಈಡೇರಲಿಲ್ಲ. ಅದಕ್ಕೆ ವಿಧಿ ಅವಕಾಶವನ್ನೇ ಕೊಡಲಿಲ್ಲ.
ಕರುಣ ರಸದ ಅಭಿವ್ಯಕ್ತಿಯಲ್ಲಿ ಮೇರು ಸದೃಶರಾಗಿದ್ದ ಶಂಭು ಹೆಗಡೆ ಅವರ ಗೆಜ್ಜೆಯ ನಾದ, ಹೆಜ್ಜೆಯ ಸದ್ದು ಕಲಾಭಿಮಾನಿಯ ಹೃದಯದಲ್ಲಿ ಅಚ್ಚೊತ್ತಿದೆ. ಅವರು ರಾಮನಾಗಿಯೇ ಹೊರಟರು. ಅದೂ ರಥಸಪ್ತಮಿ, ಆರಾಧ್ಯದೇವ ಇಡಗುಂಜಿ ವಿನಾಯಕನ ಸನ್ನಿಧಿ, ಮೇಲಾಗಿ ಬಣ್ಣ ಬಳಿದುಕೊಂಡೇ ಬದುಕಿಗೆ ವಿದಾಯ ಹೇಳಿದರು. ಇಂತಹ ಮರಣ ಮಹಾತ್ಮರಿಗಲ್ಲದೆ ಮತ್ತಿನ್ನಾರಿಗೆ ಬರಲು ಸಾಧ್ಯ? ನಸುಕಿನ ಜಾವ ನಿದ್ದೆಯಲ್ಲಿದ್ದ ನನಗೆ ಅವರ ನಿಧನದ ಸುದ್ದಿ ಬಡಿದೆಬ್ಬಿಸಿತು. ಆ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು.
ಕ್ರಮೇಣ ನನ್ನ ಅವರ ಒಡನಾಟ, ಅವರ ಪಾತ್ರ ಚಿತ್ರಣ ಇವೆಲ್ಲವುಗಳ ಬಗ್ಗೆ ಮನಸ್ಸು ಮೆಲಕು ಹಾಕಿತು. ಹೌದು, ಯಕ್ಷರಂಗದಲ್ಲಿ ನನ್ನ ಬೆಳವಣಿಗೆಗೆ ಶಂಭು ಹೆಗಡೆ ಸಹ ಕಾರಣರು. ಹಾಗೆ ಅವರ ಬೆಳವಣಿಗೆಗೂ ನಾನೂ ಒಂದು ಕಾರಣ ಎಂದು ನಾನು ನಂಬಿದ್ದೇನೆ. ಒಬ್ಬ ಪ್ರಬಲ ಪ್ರತಿಸ್ಪರ್ಧಿ ಇದ್ದಾಗ ಮಾತ್ರ ಇನ್ನೊಬ್ಬ ಮೇಲೆ ಬರಲು ಸಾಧ್ಯ. ನಿಜಕ್ಕೂ ಹೇಳಬೇಕೆಂದರೆ ವೈಯಕ್ತಿಕ ನೆಲೆಯಲ್ಲಿ ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ. ಆದರೆ ಪ್ರೇಕ್ಷಕರಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿದ್ದು ಮಾತ್ರ ಸುಳ್ಳಲ್ಲ. ಬಹುಶಃ ನಾನು ಹಾಗೂ ಶಂಭು ಒಟ್ಟಿಗೆ ಗೆಜ್ಜೆ ಕಟ್ಟದಿರಲು ಇದೂ ಕಾರಣವಿರಬೇಕು.
- ನಮ್ಮಲ್ಲಿ ದ್ವೇಷವಿರಲಿಲ್ಲ: ನನಗಂತೂ ಅವರೊಂದಿಗೆ ಹೆಜ್ಜೆ ಹಾಕಬೇಕೆಂದು ಅತೀವ ಆಸೆ ಇತ್ತು. ಇದಕ್ಕಾಗಿ ಹಲವರ ಪ್ರಯತ್ನ ಕೂಡ ನಡೆಯಿತು. ನಾನೂ ಒಮ್ಮೆ ಅವರಲ್ಲಿ ಹೇಳಿದ್ದೆ. ನನಗೆ ಬೇರೇನೂ ಆಸೆ ಇಲ್ಲ. ಒಮ್ಮೆ ನಿಮ್ಮೊಂದಿಗೆ ಕುಣಿಯಬೇಕು ಎಂದಿದ್ದೆ. ಆದರೆ ಕಾಲ ಕೂಡಿ ಬರಲಿಲ್ಲ. ಆ ಆಸೆ ಮರೀಚಿಕೆಯಾಗಿಯೇ ಉಳಿಯಿತು. ಆದರೆ ಅವರೆಂದೂ ನನ್ನನ್ನು ದೂರಿಲ್ಲ. ನಾನೂ ಅವರ ಬಗ್ಗೆ ದೂರಲಿಲ್ಲ. ನಾನು ಮತ್ತು ಅವರು ಸಾರ್ವಜನಿಕವಾಗಿ ಒಟ್ಟಿಗೆ ಸೇರಿದ್ದು ತುಂಬ ವಿರಳ. ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಸಮಾರಂಭದಲ್ಲಿ ಸೇರಿದ್ದೆವು. ಆತ್ಮೀಯತೆಯಿಂದ ಮಾತನಾಡಿದೆವು. ತರುವಾಯ ಅಂದರೆ ಕಳೆದ ಎರಡು ವರ್ಷಗಳ ಹಿಂದೆ ಶಿರಸಿ ಸಮೀಪದ ಬಕ್ಕಳದಲ್ಲಿ ನಮ್ಮಿಬ್ಬರಿಗೂ ಸನ್ಮಾನ ಏರ್ಪಡಿಸಲಾಗಿತ್ತು. ಸಂಘಟಕರು ಶಂಭು ಹೆಗಡೆ ಅವರನ್ನು ಮೊದಲು ಕರೆದರು. ಆಗ ಶಂಭು ಹೆಗಡೆ, ‘ಚಿಟ್ಟಾಣಿ ನನಗಿಂತ ಹಿರಿಯರು. ದೊಡ್ಡ ನಟರು ಅವರಿಗೆ ಮೊದಲು ಸನ್ಮಾನ ಮಾಡಬೇಕಿತ್ತು’ ಎಂದಿದ್ದರು ವಿಶಾಲ ಹೃದಯಿ ಶಂಭು ಹೆಗಡೆ. ನನಗೂ ಇದು ಖುಷಿ ತಂದಿತ್ತು.
ಇದಕ್ಕೂ ಮುನ್ನ ಕಾರವಾರದ ಸಮಾರಂಭದಲ್ಲಿ ಒಟ್ಟಿಗೆ ಸೇರಿದ್ದೆವು. ಆಗ ಯಕ್ಷಗಾನದ ಆಗುಹೋಗುಗಳ ಬಗ್ಗೆ ಇಬ್ಬರೂ ಸುದೀರ್ಘವಾಗಿ ಸಮಾಲೋಚನೆ ನಡೆಸಿದೆವು. ಕಲೆ ನಡೆಯುತ್ತಿರುವ ದಾರಿಯ ಬಗ್ಗೆ ಆತಂಕವೂ ಉಂಟಾಯಿತು.
ತೀರಾ ಈಚೆಗೆ ಅಂದರೆ, ಕಳೆದ ಜ.೩೦ರಂದು ಕುಮಟಾದಲ್ಲಿ ಒಟ್ಟಿಗೆ ಸೇರಿದ್ದೆವು. ನಾನು ಇದ್ದ ರೂಮಿನಲ್ಲಿ ಇತರ ಗಣ್ಯರೂ ಇದ್ದರು. ನನಗೆ ಬೀಡಿ ಸೇದದೆ ತುಂಬ ಸಮಯವಾಗಿತ್ತು. ಶಂಭು ಹೆಗಡೆ ನನ್ನಲ್ಲಿ ಬಂದು ತಮ್ಮ ರೂಮಿಗೆ ಬಾ ಎಂದು ಕರೆದೊಯ್ದರು. ‘ನಿಮ್ಗೆ ಏನೋ ತೊಂದ್ರೆ ಆತು ಅನ್ಸ್ತು. ನಂಗೇನೂ ತೊಂದ್ರೆ ಇಲ್ಲೆ, ಇಲ್ಲಿ ಬೀಡಿ ಸೇದಿ’ ಎಂದರು. ಅವರೊಂದಿಗೆ ಹರಟುತ್ತ ಬೀಡಿ ಸೇದಿದೆ. ಅದೆಲ್ಲ ಈಗ ನೆನಪು ಮಾತ್ರ.
- ಹೊಸತನದ ಹರಿಕಾರ: ಯಕ್ಷರಂಗದಲ್ಲಿ ಅವರ ಬಗ್ಗೆ ಹೇಳುವುದಾದರೆ, ನಾನು ಅವರ ಕೆಲ ಪಾತ್ರಗಳನ್ನು ನೋಡಿದ್ದೇನೆ. ಅವರ ಕರ್ಣ, ಕೃಷ್ಣ, ಮಾಗಧ, ಕಾರ್ತವೀರ್ಯ, ರಾಮ, ಹರಿಶ್ಚಂದ್ರನ ಪಾತ್ರಗಳು ಈಗಲೂ ನನ್ನ ಕಣ್ಮುಂದೆ ಇವೆ. ಶಿರಸಿ ಜಾತ್ರೆ ಸಂದರ್ಭದಲ್ಲಿ ರಾಮ ನಿರ್ಯಾಣದ ರಾಮನ ಪಾತ್ರವಂತೂ ಅದ್ಭುತ. ಅಲ್ಲಿ ದೂರ್ವಾಸರನ್ನು ಒಂದೆಡೆ ಸಂಭ್ರಮದಿಂದ ಸ್ವಾಗತಿಸಬೇಕು, ಅದೇ ಸಂದರ್ಭದಲ್ಲಿ ತಮ್ಮ ಲಕ್ಷ್ಮಣನಿಗೆ (ನೋವಿನಿಂದ) ಮರಣದಂಡನೆ ವಿಧಿಸಬೇಕು. ಈ ಸನ್ನಿವೇಶದ ನಡುವಣ ಪಾತ್ರ ಚಿತ್ರಣ ಶಂಭು ಹೆಗಡೆ ಅವರಿಂದ ಮಾತ್ರ ಸಾಧ್ಯ. ಸ್ಮಶಾನ ಕಾಯುವ ಹರಿಶ್ಚಂದ್ರನ ಪಾತ್ರವನ್ನು ಹೃದಯಕ್ಕೆ ತಟ್ಟುವಂತೆ ಅನಾವರಣ ಮಾಡುವ ಕಲೆ ಅವರಲ್ಲಿ ಮಾತ್ರ ಇತ್ತು.
ಒಮ್ಮೆ ಶಂಭು ಹೆಗಡೆ ನನ್ನಲ್ಲಿ ಹೇಳಿದ್ದು ನೆನಪಿದೆ- ‘ಕರುಣ ರಸಕ್ಕೆ ಕುಣಿದು ನಾನು ಹೊಸ ಪ್ರಯೋಗ ಮಾಡಿದ್ದೇನೆ’ ಎಂದಿದ್ದರು. ಹೌದು, ಅವರು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಗೆದ್ದರು. ಕೋರಿಯೋಗ್ರಫಿ ಅಳವಡಿಸಿಕೊಂಡರು. ಅಗಾಧ ಪಾಂಡಿತ್ಯ, ಚಾಣಾಕ್ಷರಾಗಿದ್ದ ಅವರನ್ನು ಕಳೆದುಕೊಂಡಿದ್ದರಿಂದ ಆಘಾತ ಉಂಟಾಗಿದೆ. ತುಂಬಾ ಪಶ್ಚಾತ್ತಾಪ ಆಗಿದೆ. ಅವರು ನೂರು ವರ್ಷ ಬದುಕಬೇಕಿತ್ತು.
- ಬರಹ ರೂಪ: ವಸಂತಕುಮಾರ್ ಕತಗಾಲ

ಕೃಪೆ- ಕನ್ನಡಪ್ರಭ
ಚಿತ್ರಕೃಪೆ-
http://keremane.blogspot.com/

3 comments:

ಚಿತ್ರಾ ಸಂತೋಷ್ said...

ಯಕ್ಷಗಾನದ ಮೇಲಿನ ಪ್ರೀತಿಯಿಂದ ಬರೆದದ್ದಲ್ವಾ? ಇರಲಿ ಬಿಡಿ..ಎಲ್ಲಿ ಪ್ರಕಟವಾದರೇನಂತೆ..ನಾನಿದ್ದನ್ನು ಬೆಳಿಗ್ಗೆಯೇ ಓದಿದ್ದೆ. ಶಂಭು ಹೆಗಡೆ ಸಾವು ಆಕಸ್ಮಿಕ. ಅವರ ಸ್ಥಾನನಾ ತುಂಬೋದು ಕಷ್ಟ.
-ಚಿತ್ರಾ

shivu.k said...

ಸರ್,

ಇದು ಯಕ್ಷಗಾನ ಕಲೆಗಾದ ನಷ್ಟ.....

Ittigecement said...

ಸರ್...

ನನ್ನ ಕಣ್ಣುಗಳು ತುಂಬಿ ಬಂದವು...

ಕಣ್ಣ ಹನಿಗಳ ಬಿಂದುವೇ ..

ಅವರಿಗೆ.., ಅವರ ಕಲೆಗೆ..

ಶ್ರದ್ಧಾಂಜಲಿ...