Saturday, November 15, 2008

ಕಾಡುವ ಜೀವಗಳು

ಬಾಲ್ಯದಲ್ಲಿ ಮಾಡಿದ ಮಕ್ಕಳಾಟಿಕೆ, ಬಾಲ್ಯದ ಗೆಳತಿ, ಹೈಸ್ಕೂಲ್ ಜೀವನ, ಕಾಲೇಜಿನ ಅದ್ಭುತ ಗೆಳತಿಯರು, ವಿಶ್ವವಿದ್ಯಾನಿಲಯದ ಜೀವನ. ಅವರು ಕಾಡುವ ಜೀವಗಳು

ಬಾಲ್ಯದ ತುಂಟಾಟ ಎನ್ನುವುದು ನನ್ನ ಪಾಲಿಗೆ ಅಲ್ಮೋಸ್ಟ್ ಸಿಕ್ಕೇ ಇಲ್ಲ. ಕಾರಣ ಬಾಲ್ಯದಿಂದಲೂ ಕಾಡಿದ ಅನಾರೋಗ್ಯ. ಆಮೇಲೆ ಅಕ್ಕ ತಂಗಿಯರ ಪ್ರೀತಿ ಅದೂ ಇಲ್ಲ. ಕಾರಣ ಸ್ವಂತಕ್ಕೆಂದು ಇರುವುದು ಇಬ್ಬರು ಸಹೋದರರು ಮಾತ್ರ. ಚಿಕ್ಕಪ್ಪನ ಮಕ್ಕಳು ಇದ್ದರೂ ಅವರು ನಮ್ಮ ಸ್ವಂತ ಅಕ್ಕ ತಂಗಿಯರು ಎನ್ನುವ ಆತ್ಮೀಯತೆ ಇರಲಿಲ್ಲ.
ಇಂದು ಯಾವುದೋ ಮನೆಯಲ್ಲಿ ಕಾಣುವ ಅಕ್ಕ ತಂಗಿಯರ ಪ್ರೀತಿ ಕಾಣುವಾಗ ಐ ಮಿಸ್ ದೆಮ್ ಮೋಸ್ಟ್. ಆದರೆ ಕಾಲೇಜಿನಲ್ಲಿದ್ದ ಗೆಳತಿಯರು ಅಂತಹ ಒಂದು ಕೊರತೆಯನ್ನು ನೀಗಿಸಿದ್ದರು. ಇಂದಿಗೂ ನೀಗಿಸುತ್ತಿದ್ದಾರೆ. ಇಂದಿಗೂ ಅವರೆಲ್ಲರನ್ನೂ ಹೆಸರಿಸಿದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಿಗುತ್ತಾರೆ. ಆದರೆ ಅವರು ನೀಡಿದ ಅದ್ಭುತ ಪ್ರೀತಿಯನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲ ಮತ್ತು ಬೇರೆ ಯಾರಿಗೂ ಸಿಗುವುದೂ ಇಲ್ಲ. ಕಾರಣ ಅವರು ನನ್ನ ಜೀವ. ಬಿಡದೇ ಬೆಂಬಿಡುವ ಜೀವಗಳು. ವಿಕ್ರಮಾದಿತ್ಯನನ್ನು ಕಾಡುವ ಬೇತಾಳನಂತೆ ಅವರೆಲ್ಲರೂ ಕಾಡುತ್ತಾ ಇದ್ದಾರೆ. ಕೆಲವರು ತುಂಬಾ ದೂರದಲ್ಲಿದ್ದು, ಕೆಲವರು ತುಂಬಾ ಸಮೀಪದಲ್ಲಿದ್ದು, ಮತ್ತೆ ಕೆಲವರು ತುಂಬಾ ದೂರದಲ್ಲಿದ್ದಂತಿದ್ದರೂ ಹೃದಯಕ್ಕೆ ತುಂಬಾ ಹತ್ತಿರವಿದ್ದಾರೆ.
ಕೆಲವರನ್ನು ಕಾಲೇಜು ರಜಾ ದಿನಗಳಲ್ಲಿ ಅದೆಷ್ಟು ಮಿಸ್ ಮಾಡ್ತಿದ್ದೆ ಅಂದರೆ ಅವರಿಗೂ ಆ ಕೊರಗು ಅನುಭವವಾಗಿ ಅವರೇ ಫೋನ್ ಮಾಡೋರು. ಫೋನೆತ್ತಿದರೆ ಅವರ ಅದೇ ಹೆಣ್ಣು ಮನಸ್ಸಿನ ಕೊರೆತ ಹೇಳೋರು.
ಇಂದಿಗೂ ಕೆಲವರ ಮಾತುಗಳು ನೆನೆದರೆ ನಗು ಬರುತ್ತದೆ. ಒಬ್ಬಳಿಗೆ ರಾತ್ರಿ ನಿದ್ದೆ ಬಂದಿಲ್ಲಾಂದ್ರೆ ಮರುದಿನ ಬಂದು ಬಯ್ಯೋದು ನನ್ನನ್ನು! ಇನ್ನೊಬ್ಬಳಂತೂ ಸದಾ ಕಾಲ ಜತೆಗೇ ಇದ್ದು ಕಾಲೇಜು ಮುಗಿಸಿದರೂ ಬೆನ್ನ ಹಿಂದೆ ಜೋತು ಬಿದ್ದು ನೆನಪಲ್ಲಿಟ್ಟಿರುವಂತೆ ಅವಳದೇ ಆದ ಕೆಲವು ಸ್ಟೈಲ್ ಹೇಳಿಕೊಟ್ಟಿದ್ದಾಳೆ. ಇನ್ನೊಬ್ಬಳು ನನ್ನ ಪಾಲಿನ ಮೆಡಿಟೇಶನ್ ಗುರು. ಇಂದಿಗೂ ಮೆಡಿಟೇಶನ್ ಮನಸ್ಸಿಗೆ ಇಷ್ಟವಾಗುವುದು ಆ ಒಂದೇ ಕಾರಣಕ್ಕೆ. ಅವಳ ಪ್ರಕಾರ ಮೆಡಿಟೇಶನ್ ಆರಂಭಕ್ಕೆ ಯಾವುದೋ ಒಂದು ಆಬ್ಜೆಕ್ಟ್ ಬೇಕಂತೆ!
ಅಷ್ಟಕ್ಕೂ ನನಗೆ ಅದ್ಭುತ ಗೆಳತಿಯಾಗಿ ಹೊರ ಹೊಮ್ಮಿದ್ದು ಕೇವಲ ಕೆಲವರು. ಪ್ಲಸ್ ಟು ಅರ್ಥಾತ್ ಪಿಯುಸಿ ಮಾಡುತ್ತಿರಬೇಕಾದರೆ ಇದ್ದ ಮುಸ್ಲಿಂ ಗೆಳತಿ. ಯಾವುದೇ ಸಂದರ್ಭದಲ್ಲೂ ಜಾತೀಯತೆಯನ್ನು ಮರೆತು ಅವಳು ಮುಸ್ಲಿಂ ಅಲ್ಲ, ನಾನು ಹಿಂದೂ ಅಲ್ಲ ಎನ್ನುವಂತೆ ಸದಾ ಕಾಲ ಬೆನ್ನಿಗೆ ಬಿದ್ದು ನಿಂತವಳು. ಕ್ಲಾಸಿಗೆ ಬರುವಾಗ ಆರಂಭದಲ್ಲಿ ತಲೆ ಮೇಲೆ ಅವರ ಸಾಂಪ್ರದಾಯಿಕ ಶೈಲಿಯಲ್ಲಿ ಸ್ಕಾರ್ಫ್ ಹಾಕಿಕೊಂಡು ಬರುತ್ತಿದ್ದರೂ ನಂತರದ ದಿನಗಳಲ್ಲಿ ಅವೆಲ್ಲವನ್ನೂ ಮೀರಿ ನಿಂತವಳು. ಕಾಲೇಜು ಮುಗಿದ ನಂತರ ಮದುವೆ ಸಂಸಾರ, ಮಕ್ಕಳು ಎಂಬ ತಾಪತ್ರಯದಲ್ಲಿ ಮುಳುಗಿ ಮರೆಯಾದಳು. ಆದರೆ ಅವಳು ನೀಡಿದ ಸಹೋದರತಾ ಭಾವ ಎಂದಿಗೂ ಮರೆಯಾಗಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಎಲ್ಲರ ಬಗ್ಗೆ ಬರೆಯುತ್ತಾ ಹೋದರೆ ಬ್ಲಾಗ್ ಪೋಸ್ಟ್ ಉದ್ದವಾಗುತ್ತಾ ಹೋಗುತ್ತದೆ. ಅದಕ್ಕೆ ಈಗ ಸಣ್ಣನೆಯ ವಿರಾಮವಿರಲಿ.
ಆ ಮೇಲೆ ಡಿಗ್ರಿ, ಪಿಜಿ ಎಲ್ಲ ಕಡೆ ಗೆಳತಿ ಗೆಳೆಯರು ಸಿಕ್ಕಿದರು. ಕೆಲವರು ಅದ್ಭುತಗಳ ಸರಮಾಲೆಯನ್ನು ಸೃಷ್ಟಿಸಿದರು. ಇನ್ನು ಕೆಲವರು ನನ್ನ ಅದ್ಭುತಗಳ ಪಾಲಿಗೆ ನೀನು ಬೇಕು ಎಂದು ಅವರ ಜೀವನದ ಅವಿಭಾಜ್ಯ ಅಂಗ ಎಂದು ಗೌರವಿಸಿದರು. ಸದ್ಯಕ್ಕೆ ಇಷ್ಟು ಸಾಕು.
ನಿನ್ನೆ ರಾತ್ರಿ ಯಾಕೋ ಕ್ಲೋಸ್ ಟು ಹಾರ್ಟ್ ಎಂಬ ಕಾರ್ಯಕ್ರಮದ ಕೊನೆಯ ಸಾಲಿನಲ್ಲಿ ಅದರಲ್ಲಿದ್ದ ವ್ಯಕ್ತಿ ಎಸ್ಎಂಎಸ್ ಬಗ್ಗೆ ಹೇಳಿದಾಗ ಇಷ್ಟೆಲ್ಲಾ ನೆನಪಾದವು.

2 comments:

Anonymous said...

Very touching. I emphathise with you because I have always longed to have a brother or sister.

ಚಿತ್ರಾ ಸಂತೋಷ್ said...

ಬದುಕೇ ಒಂದು ನೆನಪುಗಳ ಮೆರವಣಿಗೆ..ಯಾರೇ ಆದ್ರೂ ನಮ್ ಜೊತೆ ಇರೋಕ್ಕಿಂತ ದೂರದಲ್ಲಿದ್ರೆನೇ ತುಂಬಾ ಪ್ರೀತಿ ಕೊಡ್ತಾರೆ ಅಲ್ವಾ? ..ಇವರು ಕಾಡುವ ಜೀವಗಳು ಮಾತ್ರವಲ್ಲ..ಸದಾ ನಮ್ ಜೊತೆ ಹೆಜ್ಜೆಹಾಕುವ ಜೀವಂತ ಪ್ರೀತಿ..
-ಚಿತ್ರಾ