ಓದು, ಓದು, ಓದು..... ಇದು ಬಾಲ್ಯಾವಸ್ಥೆಲ್ಲಿದ್ದಾಗ ಮನೆಯವರ ಒತ್ತಡ. ಅದು ಪಠ್ಯವಾಗಿದ್ದರಿಂದ ಬರೀ ಬೋರು.
ಆದರೆ ಇಂದು ಓದು ಎಂದು ಯಾರೂ ಹೇಳಬೇಕಾಗಿಲ್ಲ. ಹಲವು ಪುಸ್ತಕಗಳು ಬಂದು ರಾಶಿ ಬಿದ್ದಿವೆ. ಎಂದೋ ಓದಬೇಕಾಗಿದ್ದ ನೇಮ್ ಸೇಕ್ ಇನ್ನೂ ಮುಗಿದಿಲ್ಲ, ಮುಷರ್ರಫ್ ಚರಿತ್ರೆಯೂ ಮುಂದೆ ಇದೆ. ಆದರೆ ಅದರಲ್ಲಿ ಸುಳ್ಳಿನ ಕಂತೆಗಳೇ ಇರುವುದರಿಂದ ಓದುವ ಆಸಕ್ತಿ ಇಲ್ಲ. ಈಗ ಇರುವವುಗಳಲ್ಲಿ ಗಿಲಾನಿ ಎಂಬ ಪತ್ರಕರ್ತನ ತಿಹಾರ್ ಜೈಲಿನ ಅನುಭವ ಕಥನ ಮನಸ್ಸಿಗೆ ಖುಷಿ ನೀಡುತ್ತಿದೆ. ಜತೆಗೆ ಕೇರಳದ ನಳಿನಿ ಜಮೀಲಾ ಎಂಬಾಕೆಯ ನ್ಯಾನ್ ಲೈಂಗಿಕ ತೊಯಿಲಾಳಿ (ನಾನು ಲೈಂಗಿಕ ಕಾರ್ಯಕರ್ತೆ) ಸಂಪೂರ್ಣವಾಗಿದೆ. ಇನ್ನೂ ಕೆಲವು ಪುಸ್ತಕಗಳ ಪಟ್ಟಿ ಇದೆ. ಹೆಚ್ಚಿನಂಶ ಕೆಲವೇ ದಿನಗಳಲ್ಲಿ ಇನ್ನೂ ಕೆಲವು ಪುಸ್ತಕಗಳು ಬರಲಿವೆ.

ಇಷ್ಟೆಲ್ಲಾ ಪುಸ್ತಕ ರೂಂನಲ್ಲಿ ನೋಡಿ ನನ್ನ ಸ್ನೇಹಿತನೊಬ್ಬ ಯಾಕಪ್ಪಾ ಇಷ್ಟೆಲ್ಲಾ ಖರ್ಚು ಮಾಡ್ತೀಯಾ, ಸುಮ್ಮನೆ ಕೂತು ಬೇರೆ ಯಾರಿಂದಾದರೂ ಸಂಗ್ರಹಿಸಿ ಓದಬಾರದೇ ಎನ್ನುತ್ತಾನೆ. ಆದರೆ, ಆತನಿಗೇನು ಗೊತ್ತು ಓದುವಿಕೆಯಲ್ಲಿನ ಸುಖ. ಕಾಲೇಜಿನಲ್ಲಿ ಪಿಜಿ ಓದುವಾಗಲೂ ಅಷ್ಟೇ, ಪಠ್ಯವಿಷಯ ಬಿಟ್ಟು ಬೇರೆ ಎಲ್ಲಾ ಓದುವ ಚಟ. ಒಂದು ಸಾರಿ ಓದಬೇಕು ಎಂದು ಮನಸ್ಸು ಗಟ್ಟಿಗೊಳಿಸಿ ಕೂತರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಆದರೆ ಲೋಕವೆಲ್ಲಾ ಮಲಗಿರುವ ಸಮಯದಲ್ಲಿ ಓದುವುದರಲ್ಲಿ ಒಂಥರಾ ಖುಷಿ ಇರುತ್ತೆ. ಯಾಕೋ ಕೆಲವು ಪುಸ್ತಕಗಳ ಕೆಲವು ಸಾಲುಗಳು ಆಗಾಗ ತಟ್ಟುತ್ತಿರುತ್ತವೆ. ಅದರಲ್ಲೂ ನಾನು ಓದಿದ ‘ನೋಟ್ಸ್ ಟು ಮೈ ಸೆಲ್ಫ್’ ಪ್ರತಿ ಬಾರಿ ಓದುವಾಗಲೂ ಒಂದು ವಿಚಿತ್ರ ಅನುಭವವನ್ನು ನೀಡುತ್ತದೆ. ಆ ಪುಸ್ತಕ ಮಾತ್ರ ದಿ ಬೆಸ್ಟ್ ಎವರ್...
ಅಷ್ಟಕ್ಕೂ ನನಗೆ ಈ ಓದಿನ ಹುಚ್ಚು ಹಿಡಿದಿದ್ದು ಪಿಜಿ ವ್ಯಾಸಂಗದ ದಿನಗಳಲ್ಲಿ. ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅಷ್ಟೂ ಪತ್ರಿಕೆಗಳನ್ನು ಓದಿ ನಿಯತಕಾಲಿಕೆಗಳನ್ನು ಹರಡಿ ಕೂತುಕೊಂಡರೆ ನನ್ನ ಲೋಕ ನನಗೆ. ಕೆಲವು ಬಾರಿ ನನ್ನ ಜತೆ, ಮುಂಭಾಗದಲ್ಲಿ ಹರಟೆಗೆ ಕೂರಲು ಇನ್ನೂ ಕೆಲವರು ಇರುತ್ತಿದ್ದರು. ಆದರೆ ಓದು ನನಗೆ ಇಷ್ಟವಾಗುತ್ತಿತ್ತು. ಎಷ್ಟೋ ಬಾರಿ ಓದನ್ನು ಮಿಸ್ ಮಾಡ್ಕೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ. ಆದರೆ ಅದು ನನ್ನ ವಿದ್ಯಾಭ್ಯಾಸದ ಓದು ಅಲ್ಲ ಎನ್ನುವುದು ಮಾತ್ರ ನಿತ್ಯ ಸತ್ಯ.
ಈಗೀಗ ಓದಿನಲ್ಲೂ ಕೆಲವು ಖುಷಿ ಲಭಿಸಿದೆ. ಹಿಂದೆ ಹಲವು ಬಾರಿ ಕೆಲವು ನೋವುಗಳನ್ನು ಕಳೆಯಲು ಓದಿಗೆ ಶರಣಾಗಿದ್ದೆ. ಆದರೆ ಇಂದು ಸಂತಸ, ನೋವು ಯಾವುದೇ ಇರಲಿ ಓದು ನನ್ನ ಜತೆ ಇರುತ್ತೆ. ಜತೆಯಲ್ಲಿರುವ ಅಣ್ಣನಿಗೆ ಕಿರಿಕಿರಿಯಾಗುತ್ತೆ ಎಂದು ಆತನೂ ಕೆಲವು ಸಲ ವರಾತ ಎಬ್ಬಿಸುತ್ತಾನೆ. ಸ್ಟಿಲ್ ರೀಡಿಂಗ್ ಈಸ್ ರೀಡಿಂಗ್.
ಅಷ್ಟಕ್ಕೂ ಓದಿನ ಬಗ್ಗೆ ಆಸಕ್ತಿ ಹುಟ್ಟಲು ಕಾರಣವೇನು ಎಂದು ಹಲವು ಬಾರಿ ಚಿಂತಿಸಿದ್ದೇನೆ ಆದರೆ ಎಂದೂ ಉತ್ತರ ಲಭಿಸಿಲ್ಲ. ಎಲ್ಲವೂ ವ್ಯರ್ಥ ವ್ಯರ್ಥ ಪ್ರಯತ್ನಗಳು. ಅದಕ್ಕೆ ಈಗ ಅದರ ಬಗ್ಗೆ ಚಿಂತಿಸುತ್ತಿಲ್ಲ. ಓದಿಗೆ ಕಾರಣವೂ ಬೇಕಿಲ್ಲ. ಅದನ್ನು ಜ್ಞಾನ ವಿಸ್ತರಣೆಗೆ ಅನ್ನಿ, ನೋವು ಶಮನಕ್ಕೆ ಅನ್ನಿ, ಎಲ್ಲವನ್ನೂ ಅರಿಯುವ ಕುತೂಹಲ ಅನ್ನಿ. ಎಲ್ಲವುಗಳ ಸಮ್ಮಿಶ್ರಣ ಅನ್ನಿ. ಎಲ್ಲಾ ಅವರವರ ಭಾವಕ್ಕೆ ತಕ್ಕಂತೆ. ಅದನ್ನು ಪ್ರಶ್ನಿಸಬಾರದು ಎನ್ನುವುದು ನಿಲವು.
ಅದಕ್ಕೇ, ಓದಲು ಇನ್ನೂ ಪುಸ್ತಕಗಳು ಬರುತ್ತಾ ಇದೆ. ಈಗ ಇರೋದನ್ನು ಮುಗಿಸಬೇಕಾಗಿದೆ. ಪ್ರೇಮಿ ತನ್ನ ಪ್ರಿಯತಮೆಯನ್ನು ಎದುರುಗೊಂಡಂತೆ ನಾನು ಪುಸ್ತಕಗಳನ್ನು ಎದಿರುಗೊಳ್ಳಬೇಕು. ಅದಕ್ಕಾಗಿ ಕಾಯಬೇಕು. ಅದರಲ್ಲೂ ಒಂದು ಸುಖವಿದೆ. ಸದ್ಯದ ಮಟ್ಟಿಗೆ ಓದೂ ನಿರಂತರ...!!!
1 comment:
Hi Mahesh nice post.
Post a Comment