Friday, July 02, 2010

ಬರಡು ಬದುಕಿನಲಿ ಮಳೆ ತಂದ ತಂಪು...!!!

ಮತ್ತದೇ ಸ್ಥಿತಿ. ಮತ್ತದೇ ಕನವರಿಕೆ. ಯಾವ ಮಳೆಯೂ ಇಲ್ಲಿ ಬೆಂಗಳೂರಲ್ಲಿ ಸುರಿಯುತ್ತಿಲ್ಲ. ಅಲ್ಲಿ ಊರಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ ಇಲ್ಲಿ ಎಂದಿನಂತೆ ಬಿಸಿಲು. ರಾತ್ರಿಯಾದರೆ ಸ್ವಲ್ಪ ತಂಪು. ಆದರೆ ಮಳೆ ಸುರಿಯಲು ಇನ್ನೆಷ್ಟು ದಿನ ನಾವು ಕಾಯಬೇಕೋ?
ಕಳೆದ ತಿಂಗಳ ಎರಡನೇ ವಾರ ನಾನು ಊರಲ್ಲಿದ್ದೆ. ಅಲ್ಲಿ ಒಂದು ವಾರದ ವಾಸ. ಏಳರಲ್ಲಿ ಏಳು ದಿನವೂ ಭರ್ಜರಿ ಮಳೆ. ಮನೆಯ ಹೊರಗೆ ಕಾಲಿಟ್ಟರೆ ದೇಹ ಒದ್ದೆ ಒದ್ದೆ. ಮನೆಯೊಳಗೆ ಹೋದರೆ ಮನದಲ್ಲಿ ಭಾವಗಳು ಒದ್ದೆ ಒದ್ದೆ. ಇಂತಹ ಒಂದು ಮಳೆಗಾಲ ನೋಡಿ ಎಷ್ಟು ವರ್ಷವಾಗಿತ್ತು. ಬೆಂಗಳೂರೆಂಬ ಕಾಂಕ್ರೀಟ್ ನಗರಿಗೆ ಬಂದು ಕಳೆದ ಐದು ವರ್ಷಗಳಲ್ಲೂ ಇಂತಹ ಮಳೆ ನಾನು ನೋಡಿರಲೇ ಇಲ್ಲ. ಕಾಸರಗೋಡು, ಮಂಗಳೂರು, ಮಡಿಕೇರಿ ಎಂದು ಹೋದಲ್ಲೆಲ್ಲಾ ಮಳೆಯದ್ದೇ ಕಾರುಬಾರು. ಆ ಮಳೆಯ ಯಾವುದೊ ಒಂದು ಗುಂಗಿನಲ್ಲಿ ಹಿಂದೆ ಕಳೆದ ಜೀವನ ನೆನಪಿಸಿಕೊಂಡಾಗ ಕಣ್ಣಂಚಿನಲ್ಲಿ ನೀರು ತುಂಬಿದ್ದು ಗೊತ್ತಾಗಲೇ ಇಲ್ಲ. ಮುಖವ ತೋಯಿಸಿದ್ದ ಮಳೆ ನೀರ ನಡುವೆ ಕಣ್ಣೀರು ಸಂಗಮಿಸಿದ್ದು ಯಾರಿಗೂ ತಿಳಿಯಲಿಲ್ಲ.
ಊರಲ್ಲಿ ಮಳೆ ಎಂದರೆ ಹಾಗೆ. ರಭಸವಿಲ್ಲದಿದ್ದರೆ ಅದನ್ನು ಮಳೆ ಎಂದು ಕರೆಯಲ್ಲ. ನಿರಂತರವಾಗಿ ಸುರಿಯದಿದ್ದರೆ ಮಳೆ ಎನ್ನಲ್ಲ. ಹಳ್ಳ ಕೊಳ್ಳಗಳು ತುಂಬಿ ನೀರು ಹರಿಯದಿದ್ದರೆ ಅದು ಮಳೆ ಎನಿಸೀತಾದರೂ ಹೇಗೆ? ಅತ್ತ ಕಾಸರಗೋಡು ದಾಟಿ ಹೋದರೆ ಸಮುದ್ರದ ಅಬ್ಬರ ನೋಡ ಬೇಕಿತ್ತು. ಇನ್ನೆರಡು ದಿನ ಮಳೆ ಸುರಿದಿದ್ದಾದರೆ ಸಮುದ್ರದ ಅಲೆ ರಸ್ತೆ ದಾಟಿ ಇತ್ತ ಕಡೆಗೆ ಬಂದು ಕೆಲವು ಮನೆಗಳು ಮುಳುಗಿ ಹೋಗುತ್ತಿತ್ತು. ಹಾಗೆ ಬಂದ ಮಳೆಯಲ್ಲಿ ನೆನೆಯುತ್ತಾ ನನ್ನ ನಾನು ಮರೆತೇ ಹೋದೆ. ಹೃದಯದ ಭಾವಗಳು ಮನ ತಾಕಿದಾಗ ಅದ್ಯಾಕೋ ಒಂಥರಾ..! ಮನಸ್ಸು ಮಳೆಗೆ ಆ ಪರಿಯಲ್ಲಿ ಕಾಡುತ್ತೆ ಅಂತ ಗೊತ್ತಾಗಿದ್ದು ಅದೇ ಮಳೆಗೆ. ಇಲ್ಲ ನಿನ್ನಲ್ಲಿನ್ನೂ ಭಾವಗಳು ಕಳೆದು ಹೋಗಿಲ್ಲ ಅಂತ ಹೇಳಿದ್ದೂ ಅದೇ ಮಳೆ. ಆ ಭಾವಗಳು ಟಿಸಿಲು ಒಡೆಯಲು ಬರಡು ಬದುಕು ಸುಂದರ ನಂದನವಾಗುತ್ತೆ ಅಂತ ಮನಸ್ಸಿಗೆ ಯಾರೋ ಹೇಳಿದ ನೆನಪು ಸುಂದರ ಚಿತ್ತಾರವನ್ನೇ ಸೃಷ್ಟಿಸಿತು. ಆ ಚಿತ್ತಾರ ನನ್ನ ತಂದು ನಿಲ್ಲಿಸಿದ್ದು ಒಂದಾರು ವರ್ಷ ಹಿಂದಕ್ಕೆ. ಅದೆಷ್ಟು ಹೊತ್ತು ಆ ಪರಿ ಕುಳಿತಿದ್ದೆನೋ, ಅದ್ಯಾಕೆ ಆ ರೀತಿ ನೆನಪು ಬಿಚ್ಚಿಕೊಳ್ಳುತ್ತಾ ಹೋಯಿತೋ ಒಂದೂ ನಾ ಕಾಣೆ. ಹಾಗೆ ಒಂದು ವಾರ ನಾನು ಮಳೆಯಲ್ಲಿ ಕೂತಿದ್ದರೆ ಈ ಮನದಲ್ಯಾಕೋ ಹಿತಾನುಭವ. ಎಷ್ಟೆಂದರೂ ಮನವು ಬಿಡದು ಮಾಯೆ. ಹಾಗೆ ಆ ಮಳೆಯ ಮಾಯೆಯಿಂದ ಸಾಗಿ ಇಲ್ಲಿ ಬಂದಿಳಿದರೆ ಇಲ್ಲಿ ಮತ್ತೆ ಯಥಾ ಸ್ಥಿತಿ. ಕಾಯ್ತಾ ಇದ್ದೇನೆ ಇಲ್ಲಿ ಬಾರೋ ಬಾರೋ ಮಳೆ ರಾಯ ಎಂಬ ಅದೇ ಹಳೆಯ ಹಾಡಿನೊಂದಿಗೆ. ಮಳೆ ಇಲ್ಲಿಯೂ ಬಂದು ಮನವ ಕಾಡುತ್ತೆ ಅನ್ನೋ ಆಸೆಯೊಂದಿಗೆ...!!!

1 comment:

Anonymous said...

manada feeling bareyuvaga bayige bandaddu bareyabedavo chinna. Swalpa arthvaguva hage bereyiri....Ellavu odde... Yavaga odde... hege odde.... Rathriyalli oddeyo