Saturday, May 02, 2009

ಮಳೆ ಬಂದು ಹೋದ ಮೇಲೆ ಭಾವಗಳು ಕಾಡಿದೇ...

ಒಂದು ಮಳೆ ಈ ಪರಿ ಕಾಡುತ್ತಾ. ಮಳೆ ಬಂದರೆ ಭಾವನೆಗಳು, ಹಳೆಯ ನೆನಪುಗಳು ಮರುಕಳಿಸುತ್ತಾ? ಕಳೆದ ಸುಂದರ ದಿನಗಳು ನವಿರು ನವಿರಾಗಿ ಬಿಚ್ಚಿಕೊಳ್ಳುತ್ತಾ? ಅದು ಮಳೆಯ ಮಹಿಮೆಯಾ? ಇಲ್ಲ ಮಳೆಯನ್ನು ಒಡಲಾಳಕ್ಕೆ ಸ್ವೀಕರಿಸಿ ಅದುಮಿಕೊಳ್ಳುವ ಧರೆಯ ಮಹಿಮೆಯಾ? ಅಲ್ಲಾ, ಅದಕ್ಕಿಂತಲೂ ಮಿಗಿಲಾದ ಸಂಬಂಧ ಎಲ್ಲಿಂದಲೋ ಬಂದು ನಮ್ಮ ನೆನಪುಗಳನ್ನು ಈ ಪರಿಯಾಗಿ ಕಾಡುತ್ತಾ ಗೊತ್ತಿಲ್ಲ.

ನಿಜಕ್ಕೂ ಈ ಪ್ರಶ್ನೆಗೆ ಉತ್ತರ ನಂಗೆ ಗೊತ್ತಿಲ್ಲ. ಆದರೆ ಹೊರಗೆ ಮಳೆ ಆವರಿಸುತ್ತಿದ್ದರೆ ಇಲ್ಲಿ ಮನದ ಒಳಗಡೆ ನೂರು ಭಾವನೆಗಳ ತಾಳ ಲಯದ ಜತೆ ನರ್ತನವಾಡುತ್ತದೆ. ಎಂದೋ ಕಳೆದ ಮಳೆಗಾಲ ನೆನಪಾಗುತ್ತವೆ. ಅಷ್ಟಕ್ಕೂ ಮಳೆಗೂ ನೆನಪಿಗೂ ಅಂತಹ ಅವಿನಾಭಾವ ಸಂಬಂಧವಿದೆಯಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಕಳೆದ ಮೂರು ಮಳೆಯ ದಿನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

1 ಈ ವರ್ಷದ ಮೊದಲ ಮಳೆ ನನ್ನ ಕಾಡಿದ್ದು ಮಾರ್ಚ್ ತಿಂಗಳಲ್ಲಿ. ಅದು ಊರಲ್ಲಿರುವ ಕಂಬಾರು ದೇವಸ್ಥಾನದ ಜಾತ್ರೆಯಲ್ಲಿ. ಸುಮಾರು ೭ರಿಂದ ೮ ವರ್ಷಗಳ ನಂತರ ಊರ ಜಾತ್ರೆ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದಿತ್ತು. ಅಂದು ರಾತ್ರಿ ಸಾಂಸ್ಕೃತಿಕ ಕಾರ್‍ಯಕ್ರಮದ ನೃತ್ಯ ಆರಂಭವಾಗಿ ಮೂರನೇ ನೃತ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದಿತ್ತು ಮಳೆ. ಅಂದು ಮಳೆ ಬರುತ್ತದೆ ಎನ್ನುವ ಯಾವುದೇ ಸೂಚನೆಯಿರಲಿಲ್ಲ. ಆದರೆ ಅಂದು ಸುರಿದ ಮಳೆಯಲ್ಲೂ ಭಾವನೆಗಳ ತಾಕಲಾಟವಿತ್ತು. ಆದರೂ ಮಳೆ ಮುಗಿದು ಹೋದ ಮೇಲೆ ಯಾಕೋ ಮನಸ್ಸು ಸರಿಯಾದ ಸ್ಥಿಮಿತದಲ್ಲಿರಲಿಲ್ಲ. ಅದು ಮಳೆಯನ್ನು ಯಾರ ಜತೆಗೋ ಹಂಚಿಕೊಳ್ಳಬೇಕು ಎಂಬ ಆಶಯವಾ?

ನಮ್ಮೂರು ಕಾಸರಗೋಡಿನ ಮಟ್ಟಿಗೆ ಮಾರ್ಚ್ ತಿಂಗಳಲ್ಲಂತೂ ಮಳೆ ಎಂಬುದು ಕನಸಿನ ಮಾತು. ಅಲ್ಲಿ ಮಳೆ ಕಾಲಿಡಲು ಏಪ್ರಿಲ್ ತಿಂಗಳ ಕೊನೆಯಾದರೂ ಆಗಬೇಕು. ಇಲ್ಲವೆಂದರೆ ಮಳೆ ಬರುವುದು ಸಾಧ್ಯವೇ ಇಲ್ಲ. ಅಂದು ಬಿದ್ದ ಆ ಮಳೆಗೆ ಸಾಕಷ್ಟು ನೆನೆದೆ. ಅದು ಈ ಬಾರಿಯ ಮಳೆಯ ಪ್ರಥಮ ನೆನಪು.

2 ಆಮೇಲೆ ಈ ಮಳೆ ಮೊನ್ನೆ ಮಾರ್ಚ್‌ನಲ್ಲಿ ಯುಗಾದಿ ದಿನ ಮಡಿಕೇರಿ ಪಿಕ್‌ನಿಕ್‌ನಲ್ಲಿದ್ದಾಗ ಬಂದ ಮಳೆ. ಮಡಿಕೇರಿಯ ಮಳೆ ನನ್ನ ಪಾಲಿಗೆ ಹೊಸದಲ್ಲ. ಆದರೆ ಮಡಿಕೇರಿ ಮಳೆಗೂ ಅಲ್ಲಿನ ಚಳಿಗೂ ಭಾವನಾಪೂರ್ಣ ನಂಟು. ಅಲ್ಲಿ ಬರುವ ಮಳೆಯ ಹನಿ ಹನಿಯೂ ಅಷ್ಟರ ಮಟ್ಟಿಗೆ ಕಾಡುತ್ತದೆ. ಬಹುಶಃ ಇದು ಕೇವಲ ನನ್ನ ಪಾಲಿಗೆ ಸೀಮಿತವಾಗಿರಲ್ಲ ಎನ್ನುವುದು ನನ್ನ ನಂಬಿಕೆ. ಜೀವನದಲ್ಲಿ ತೀರಾ ಡಿಪ್ರೆಸ್ ಆದಾಗ ನನ್ನ ಪಾಲಿಗೆ ಗೋಚರಿಸುವುದು ಅದೇ ಮಡಿಕೇರಿಯ ಬಿಂಬ. ಇತ್ತೀಚಿನ ದಿನಗಳಲ್ಲಿ ಬುದ್ಧನ ತತ್ವಗಳು ಇಷ್ಟವಾಗುತ್ತಿವೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಳೆ ಬಂದರೆ ಮಾತ್ರ ಭಾವನೆಗಳು ಟಿಸಿಲೊಡೆಯುತ್ತವಾ ಎಂದು ಕೇಳಿದರೆ ನಾ ನೀಡುವ ಉತ್ತರ ಹೌದು ಎನ್ನುವುದು ಮಾತ್ರ. ಎಲ್ಲೋ ಕಳೆದು ಹೋದ ಮಧರ ಬಾಂಧವ್ಯವನ್ನು ಮಳೆ ನಮಗೆ ಮತ್ತೆ ಮರುಕಳಿಸಲು ನೆರವಾಗುತ್ತವೆ. ಅದಕ್ಕೆ ತೀರಾ ಭಾವುಕನಾಗಿ ಏಕಾಂಗಿಯಾಗಿರಬೇಕು ಎನಿಸಿದಾಗ ಇಂತಹ ಸ್ಥಳಗಳು ನನಗೆ ಅತೀವವಾಗಿ ಇಷ್ಟವಾಗುತ್ತದೆ. ಇಲ್ಲಿಗೆ ಮಡಿಕೇರಿ ಕತೆಯನ್ನು ಮುಗಿಸುತ್ತೇನೆ. ಮಡಿಕೇರಿಯ ಭಾವನೆಗಳಿಗೆ ಸ್ಪಂದಿಸುವ ರೀತಿಯನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ.

3 ಆ ನಂತರ ಕಾಡಿದ್ದು ಮೊನ್ನೆ ಬೆಂಗಳೂರ ಮಳೆ. ಆ ಮಳೆಯ ರಭಸ ಭಾರೀ ಚೆನ್ನಾಗಿತ್ತು. ಆದರೆ ಊರಿನ ಅಥವಾ ಮಡಿಕೇರಿಯ ಮಳೆಯ ರೀತಿಯಲ್ಲಿ ಈ ಬಾರಿ ಭಾವನೆಗಳು ಉಕ್ಕಿ ಬರಲಿಲ್ಲ ಎನ್ನುವುದು ಮಾತ್ರ ನಿಜ. ಆದರೂ ಕೆಲವು ನೆನಪುಗಳು ಕಾಡಿತ್ತು. ಅದು ಯಾಕೆ ಅಂದು ಆ ರೀತಿ ಕಾಡಿತ್ತು ಗೊತ್ತಿಲ್ಲ. ಅದು ಭಾವನೆ ಹಾಗೂ ಭಾವಗಳ ಜುಗಲ್‌ಬಂದಿ. ಅದರಲ್ಲಿ ಯಾವುದು ಮೊದಲು ಯಾವುದು ಕೊನೆ ಎನ್ನುವುದು ಇಲ್ಲ.

ಹೀಗೆ ಪ್ರತಿ ಮಳೆಯೂ ಬಹುವಾಗಿ ಕಾಡುತ್ತದೆ. ಕೆಲವೊಮ್ಮೆ ಹೆಚ್ಚು, ಇನ್ನು ಕೆಲವೊಮ್ಮೆ ಕಡಿಮೆ. ಕೆಲವು ದಿನದ ಮೋಡದ ವಾತಾವರಣ ನೋಡಿ ಮೂಡ್ ಅಪ್‌ಸೆಟ್ ಆಗಿ ಬಿಡುತ್ತದೆ. ಆದರೆ ಮನಸ್ಸೆಂಬ ಮರ್ಕಟ ಇದನ್ನೆಲ್ಲಾ ಅರ್ಥೈಸಿಕೊಳ್ಳದೆ ಎಲ್ಲಾ ನೆನಪುಗಳನ್ನೂ ಕೆದಕಿ ಜೀವನವನ್ನು ಮುಂದೆ ಸಾಗಹಾಕುತ್ತದೆ. ಇನ್ನು ಮುಂದಿನ ಮಳೆಗಾಗಿ ಕಾಯಬೇಕು. ಆ ಮಳೆ ಬಿದ್ದು ಧರೆಯ ಸೇರಿ ಕ್ಷಣ ಮಾತ್ರದಲ್ಲಿ ಬರುವ ಮಣ್ಣಿನ ಘಮದಂತೆ ನೆನಪುಗಳು ಪ್ರತಿಬಿಂಬಗಳಾಗಿ ಹೊರಹೊಮ್ಮಬೇಕು. ಹಾಗಾದರೆ ಈ ಮಳೆ ಧನ್ಯ, ಜತೆಗೆ ನಾನೂ ಅದರೊಂದಿಗೆ ನೆನಪು ಹಾಗೂ ಭಾವಗಳು...!!!

3 comments:

shivu.k said...

ಸರ್,

ಮಳೆ ನಿಜಕ್ಕೂ ಇಷ್ಟೆಲ್ಲಾ ಅನುಭವ ನೀಡುತ್ತಾ....

ಬರವಣಿಗೆ ತುಂಬಾ ಚೆನ್ನಾಗಿದೆ....

ನನಗೂ ಮಳೆಯ ಅನುಭವ ಬರೆಯಬೇಕೆನಿಸಿದೆ...

ಧನ್ಯವಾದಗಳು..

Priya said...

Mahesh,
That is amazing writing. Rain always brings about a lot of mixed feelings in me, some sad some happy. But I have never been able to put it in writing so beautifully, express my feelings so poetically. Awesome!!!

ಧರಿತ್ರಿ said...

ಮಹೇಶ್ ...
ಮಳೆ-ನೆನಪುಗಳು ಭಾಳ ಚೆನ್ನಾಗಿ ಮೂಡಿಬಂದಿವೆ. ಬಹಳ ದಿನಗಳ ಬಳಿಕ ಮಳೆ ನೆಪದೊಂದಿಗೆ ಈ ಬರಹ ಕೊಟ್ಟಿದ್ದೀರಿ. ಬೆಂಗಲೂರಿನ ತುಂತುರು ಮಳೆ ಹನಿಗಳನ್ನು ನೋಡಿ ಖುಷಿಗೊಂಡು ನಾನೂ ನನ್ನ ಬ್ಲಾಗ್ ನಲ್ಲಿ ನೆನಪುಗಳ ಮೆರವಣಿಗೆಯಲ್ಲಿ ಹೆಜ್ಜೆಹಾಕಿದ್ದೆ. ಅಭಿನಂದನೆಗಳು
-ಧರಿತ್ರಿ