Monday, December 08, 2008

ನವಿರು ಸಾಲುಗಳು ಕೇವಲ ನನಗಾಗಿ...

ಗತ ನೆನಪು ಶತ ನೆನಪು
ಇಂದಿಗೂ ಎಲ್ಲಾ ಒನಪು

ಸಂಭ್ರಮದ ಸಂತಸದಿ
ಮನವಿಂದು ನಗುತಿರಲು
ಸುಖ ದುಃಖವೆಲ್ಲಾ ಮರೆಯಾದವೋ
ಇಲ್ಲ ಮರುಕಳಿಸ್ಯಾವೋ?

ಸಂಭ್ರಮವು ಸೂತಕವು
ಮನವ ಚುಚ್ಚುತಿರಲು
ಬದುಕೆಂಬ ಮೂರಕ್ಷರ
ಆರುತಿಹುದು

ಗತ ನೆನಪು ಶತ ನೆನಪು
ಇಂದಿಗೂ ಎಲ್ಲಾ ಒನಪು

20/03/2006

ಇದು ಎಂಸಿಜೆ ಎಂಬ ಪತ್ರಿಕೋದ್ಯಮ ಕೋರ್ಸ್ ಮಾಡುತ್ತಿದ್ದ ಸಂದರ್ಭ ಬೆಳಗ್ಗಿನ ಆರಂಭದ ಮಹಾ ಬೋರಿಂಗ್ ಕ್ಲಾಸ್‌ನಲ್ಲಿ ಬರೆದದ್ದು. ಇದಕ್ಕೆ ಕವಿತೆ, ಕವನ ಎಂದು ಹೆಸರಿಟ್ಟು ಕೊಂಡು ಯಾವುದೇ ರೀತಿಯಲ್ಲೂ ಕವಿಯಾಗಲು ನಾನು ಹೊರಡುವುದಿಲ್ಲ. ಇದು ಮನಸಿನ ಪರಿಶುದ್ಧ ಭಾವನೆಗಳು. ಅರ್ಥಾತ್ ಮೈ ಫೀಲಿಂಗ್ಸ್.
ಯಾಕೆ ಮನಸ್ಸಿನ ಭಾವನೆಗಳು ಈ ರೀತಿ ಅಂದು ಅಕ್ಷರ ರೂಪ ಪಡೆದವು ಎನ್ನುವುದು ಇಂದಿಗೂ ಗೊತ್ತಿಲ್ಲ. ಆದರೆ ಇಂತಹ ಇನ್ನೂ ಹಲವು ಸಾಲುಗಳು ನನ್ನ ಹಲವಾರು ನೋಟ್ಸ್‌ಗಳಲ್ಲಿ ಸಿಗುತ್ತವೆ. ಆದರೆ ಆಗ ಬರೆದಿದ್ದ ಒಂದು ನೋಟ್ ಬುಕ್ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಅದು ಸಿಕ್ಕಿದರೆ ಮರುಭೂಮಿಯ ಓಯಸಿಸ್ ನಾನಾಗುತ್ತೇನೆ. ಅದಕ್ಕೇ ಈಗ ಹುಡುಕಾಟದ ಹಾದಿ. ಮುಂದಿನ ಸಾರಿ ಮಂಗಳೂರಿಗೆ ಹೋದಾಗ ನಾನು ಮಂಗಳೂರಿನ ಯುನಿವರ್ಸಿಟಿಯಲ್ಲಿರುವಾಗ ಪೇಯಿಂಗ್ ಗೆಸ್ಟ್ ಆಗಿದ್ದಾಗ ಇದ್ದ ಮನೆಗೆ ಹೋಗಬೇಕು. ಅಲ್ಲಿ ನನ್ನ ಹಲವು ನೋಟ್ಸ್‌ಗಳಿವೆ. ಆ ಮನೆಯಲ್ಲಿ ಅಭಿಯಿದ್ದಾಳೆ, ಅನಿ ಇದ್ದಾನೆ. ಪ್ರೀತಿಯಿಂದ ನೋಡಿಕೊಂಡ ರೇವತಿ ಅಕ್ಕ, ಉದಯ್ ಇದ್ದಾರೆ. ಜತೆಗೆ ನನ್ನದೇ ಓರಗೆಯವಳಾದ ವಾಣಿ ಇದ್ದಾಳೆ. ಜತೆಗೆ ಕೆಲವು ಸುಂದರ ನೆನಪುಗಳಿವೆ. ಕೆಲವು ಭಯಾನಕ ರಾತ್ರಿಯ ಕಾಲ್ನಡಿಗೆಗಳಿವೆ. ಅವುಗಳು ಕೇವಲ ರಹಸ್ಯಗಳು.
ಅಷ್ಟಕ್ಕೂ ಈ ಅಕ್ಷರ ಸಾಲುಗಳನ್ನು ನಿಮ್ಮ ಮುಂದೆ ಇಟ್ಟು ನಾನು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತದೆ. ಸಾಧನೆ ಎನ್ನುವುದು ಏನೂ ಮಾಡಲಾಗದಿದ್ದರೂ ನಾನು ಇಂತಹ ಹಲವು ಮಜಲುಗಳನ್ನು ದಾಟಿ ಬಂದೆ ಎನ್ನುವ ಖುಷಿಯಿದೆ. ಅಷ್ಟಕ್ಕೂ ನನ್ನಲ್ಲಿರುವ ಈ ಅಕ್ಷರ ಬೆಳೆಯ ಬಗ್ಗೆ ಗೊತ್ತಿರುವುದು ಕೆಲ ವ್ಯಕ್ತಿಗಳಿಗೆ ಮಾತ್ರ.

ಕವಿತೆಗಳು ನನ್ನನ್ನು ಯಾವತ್ತೂ ಬರೆಯಲೇ ಬೇಕು ಎಂದು ಒತ್ತಡ ಹೇರಿಲ್ಲ. ನಿನಗೆ ಬರೆಯುವ ಶಕ್ತಿಯಿದೆ ಅದಕ್ಕೋಸ್ಕರವಾದರೂ ನೀನು ಬರೆಯಲೇಬೇಕು ಎಂದು ಯಾವತ್ತೂ ಅನಿಸಿಲ್ಲ. ಹಾಗಂತ ಭಾವನೆಗಳು ಯಾವತ್ತೂ ನನ್ನನ್ನು ಕಟ್ಟಿ ಹಾಕಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಇರುವಂತೆ ಸುಖ ದುಃಖ, ನೋವು, ನಲಿವು ಎಲ್ಲವೂ ಜೀವನದಲ್ಲಿ ಲಭಿಸಿದವು. ಆದರೂ ಇದೆಲ್ಲಾ ಬರೆದೆ. ಯಾಕೆ ಎಂದು ಮಾತ್ರ ಕೇಳಬೇಡಿ. ಎಂಸಿಜೆ ಕ್ಲಾಸಿನ ಕೆಲವರ ಬೋರಿಂಗ್ ಕ್ಲಾಸ್ ಲೈಕ್ ‘ಥಿಂಗ್ಸ್’ನಲ್ಲಿ ಕೂತರೆ ಯಾವತ್ತಿಗೂ ಕ್ಲಾಸ್ ಕೇಳಿಯೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದೊಂದು ಕ್ಲಾಸ್ ಎಂದು ಅನಿಸಲೇ ಇಲ್ಲ. ಆ ಕ್ಲಾಸಿನಲ್ಲೇ ಕೆಲವು ಅಸೈನ್‌ಮೆಂಟ್‌ಗಳು ಮುಗಿದು ಹೋಗುತ್ತಿದ್ದವು.

ಹೀಗೆ ಇನ್ನೂ ಹಲವು ನೆನಪುಗಳು ಇವೆ. ಅದಕ್ಕೆ ಪ್ರತಿಯೊಂದಕ್ಕೂ ಒಂದರ ಹಿಂದೆ ಒಂದೊಂದು ಕಾರಣವಿದೆ. ಅದನ್ನು ಮುಂದೆ ಬರೆಯೋಣ. ಸದ್ಯಕ್ಕೆ ಇಷ್ಟು ಸಾಕು. ಏನಂತೀರಾ?

6 comments:

ಚಿತ್ರಾ ಸಂತೋಷ್ said...

ಹೌದು..ಮನದ ಭಾವಗಳು ಮಾತುಗಳಾಗುವ ಬದಲು ಅಕ್ಷರಗಳಾಗುತ್ತವೆ. "ಗತ ನೆನಪು ಶತ ನೆನಪು
ಇಂದಿಗೂ ಎಲ್ಲಾ ಒನಪು.."ಸಮಸ್ತ ಜೀವನದಲ್ಲೂ ಅಷ್ಟೇ. keep it up..al d best..ಒಳ್ಳೆ ಬರಹ.
-ಪ್ರೀತಿಯಿಂದ,
ಚಿತ್ರಾ...

Anonymous said...

hmm...writing emotinal things like ravi belegare..

sahaanubhooti gittisuvudarinda yaaraadaroo sikkabahudu...

best wishes..

-- Kolya Singh

ಚಿತ್ರಾ ಸಂತೋಷ್ said...

ನೆನಪು ಬಿಚ್ಚಿಕೊಳ್ಳುವುದು ಯಾವಾಗ? ಮುಂದಿನ ಬರಹ ಬಂದೇ ಇಲ್ಲ...
-ಚಿತ್ರಾ

ಬಾನಾಡಿ said...

ಚಿತ್ರಾ...
ಇವನು ಬರೆಯುವುದು ...ಗುಂಪೆಗುಡ್ಡೆಯಲ್ಲಿ ಅಳೆಯುವುದೂ ಒಂದೇ ಮಾರಾಯ್ತಿ. ಬರವಣಿಗೆ ಒಳ್ಳೆದು ಉಂಟು. ಆದರೆ ಸ್ವಲ್ಪ ನಿಧಾನ ಬರೆಯುತ್ತಾನೆ. ಕೋಣಾಜೆಯಿಂದ ದೇರಳಕಟ್ಟೆಗೆ ಹೋಗುವಾಗ ಅಸೈಗೋಳಿಯನ್ನು ಬಿಟ್ಟುಬಿಡಲಿಕ್ಕೆ ಆಗುವುದಾ? ನಾವು ಆಗಾಗ ಬಂದು ಇವನ ಕಾರ್ಬಾರು ನೋಡಿ ಹೋಗುವುದು. ಒಳ್ಳೆಯ ಮಳೆ ಬರುವಾಗ ಬೆಚ್ಚನೆ ಬೂದಿ ಸಿಕ್ಕಿದ ನಾಯಿಗಳು ಮಲಗುವುದಿಲ್ಲವ ಹಾಗೆಯೇ ಇವನು ಒಮ್ಮೊಮ್ಮೆ ಮಲಗಿ ಬಿಡುತ್ತಾನೆ. ಎಂಥದೋ ಗೊತ್ತಿಲ್ಲ. ಒಮ್ಮೊಮ್ಮೆ ಬಹಳ ಭಾವುಕನಾಗ್ತಾನೆ. ಮದುವೆ ಆಯ್ತೇನೋ?
ಚೇವಾರ್,
ಎಲ್ಲವೂ ನಿನ್ನ ಮೇಲಿನ ಪ್ರೀತಿಯಿಂದ
ಒಲವಿನಿಂದ
ಬಾನಾಡಿ.

ಚಿತ್ರಾ ಸಂತೋಷ್ said...

"ಒಳ್ಳೆಯ ಮಳೆ ಬರುವಾಗ ಬೆಚ್ಚನೆ ಬೂದಿ ಸಿಕ್ಕಿದ ನಾಯಿಗಳು ಮಲಗುವುದಿಲ್ಲವ ಹಾಗೆಯೇ ಇವನು ಒಮ್ಮೊಮ್ಮೆ ಮಲಗಿ ಬಿಡುತ್ತಾನೆ. " ಬಾನಾಡಿ ಸರ್,,,,ಎಡ್ಡೆ ಪಂಡರ್, ವರ್ಣನೆ ಮಸ್ತು ಉಂಡು...
-ಚಿತ್ರಾ

sanjeevmurthy said...

yes caret but nobody will not understand