ಇದು ದೀಪಗಳ ಹಬ್ಬದ ಸಂಭ್ರಮದ ಸಮಯ. ಕಳೆದ ಬಾರಿ ಈ ಹಬ್ಬಕ್ಕೆ ಊರಲ್ಲಿದ್ದೆ. ಅದು ಒಂದು ಸಂಸ್ಥೆಯಿಂದ ಬಿಟ್ಟು ಇನ್ನೊಂದು ಸಂಸ್ಥೆಗೆ ಸೇರುವ ಮಧ್ಯೆ ಸಿಕ್ಕಿದ್ದ ಬಿಡುವಿನ ಸಂಭ್ರಮ. ಬಹುಶಃ ಸರಿ ಸುಮಾರು ಒಂದು ತಿಂಗಳ ಕಾಲ ನಾನು ಊರಲ್ಲಿದ್ದೆ. ಆದರೆ ಈ ಬರಿ ಕಾಂಕ್ರೀಟ್ ಕಾಡಲ್ಲಿದ್ದೇನೆ.
ಸಂಭ್ರಮ ಪಡುವುದಕ್ಕೆ ಇದು ಸೂಕ್ತ ಕಾಲವಲ್ಲ. ಕಾರಣ ನಾನು ಊರಲ್ಲಿಲ್ಲ. ಊರಲ್ಲಿದ್ದಿದ್ದರೆ ಸಾಲಾಗಿರಿಸಿದ್ದ ಹಣತೆಯ ಬೆಳಕನ್ನು ನೋಡುವ ಸಂಭ್ರಮ. ಅದಾದ ಮೇಲೆ ಪಟಾಕಿ ಹಚ್ಚುವ ಸಂಭ್ರಮ. ನಮ್ಮ ಊರಿನಲ್ಲಿ ಮನೆಯವರೆಲ್ಲಾ ಒಟ್ಟು ಸೇರಿ ಕುಟುಂಬ ಸಮೇತ ಈ ಹಬ್ಬವನ್ನು ಆಚರಿಸುತ್ತೇವೆ. ಮಕ್ಕಳ ಸಂಭ್ರಮ ಹೇಳತೀರದು.
ಇಂದು ಈ ಬರಹ ಬರೆಯಲು ಕುಳಿತಾಗ ನಾನು ಏಕಾಂಗಿ. ಕತ್ತಲೆಯಲ್ಲಿ ಬೆಳಕು ಹುಡುಕುವ ಸಂಭ್ರಮಕ್ಕಿಂತಲೂ ಯಾಕೋ ಯಾರೂ ಜೊತೆಗಿಲ್ಲ ಎಂಬ ಅನಾಥ ಭಾವ. ಅಷ್ಟಕ್ಕೂ ಈ ಒಂಟಿತನಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಯಾವುದೇ ಕಾರಣ ಹೊಳೆಯುತ್ತಿಲ್ಲ. ನಾವು ಅಷ್ಟು ಬೇಗ ಯಾರಿಗೋ ಕಾಲ ಕಸವಾಗಿಬಿಡುತ್ತೇವಾ..? ಗೊತ್ತಿಲ್ಲ. ಉತ್ತರ ಹುಡುಕುತ್ತಾ ಹೊರಟಿದ್ದೇನೆ. ಯಾಕೆಂದರೆ ಇದು ಫ್ಯಾಮಿಲಿ ಡ್ರಾಮಾ...!! ನನ್ನವರೆನಿಸಿಕೊಂಡ ಸಂಬಂಧಿಕರೇ ಇಲ್ಲಿ ಪಾತ್ರಧಾರಿಗಳು.
ನನ್ನ ಈ ಬ್ಲಾಗ್ ಕೊನೆಗೊಂದು ಸಾರಿ ಉಸಿರಾಡಿದ್ದು ಕಳೆದ ವರ್ಷ ಇದೇ ತಿಂಗಳು. ಇಂದು ನಾನು ಮತ್ತೆ ನಿಮ್ಮ ಮುಂದೆ ಬರೆಯುತ್ತೇನೆ ಎಂಬ ನಿರೀಕ್ಷೆಯೂ ನನ್ನಲ್ಲಿರಲಿಲ್ಲ. ಮನದಲ್ಲಿ ಯಾಕೋ ಅನಾಥ ಭಾವ. ಇಷ್ಟು ದಿನದಿಂದ ಯಾವತ್ತೂ ಕಾಡದಿದ್ದ ಅದೇನೋ ಅನಾಥ ಭಾವ ನನ್ನನ್ನಿಂದು ಕಾಡಿದೆ. ಇದಕ್ಕೆ ಕಾರಣ ಹುಡುಕಿದರೆ ಕಾರಣ ಸಿಗುತ್ತಾ...? ಸದ್ಯಕ್ಕೆ ಇರುವ ಉತ್ತರ ಗೊತ್ತಿಲ್ಲ ಎಂದು. ಆದರೂ ಸಣ್ಣ ಒಂದು ಕೊಂಡಿ ಸಿಕ್ಕಿದರೂ ಸಾಕು. ಪ್ರವಾಹದಲ್ಲಿ ಸಿಲುಕಿದವನಿಗೆ ಕಡ್ಡಿ ಸಿಕ್ಕಿದಂತೆ ನಾನು ಈಜಿ ದಡ ಸೇರುತ್ತೇನೆ.
ಸಂಬಂಧಗಳೆಂಬ ಮಿಸ್ಸಿಂಗ್ ಲಿಂಕಿನಲ್ಲಿ ಎಲ್ಲೋ ಬೆಳೆದ ನಾನು ಇಷ್ಟು ಅನಾಥನಾಗಲು ಕಾರಣವೇನು. ಉಹೂಂ, ಕುಳಿತು ಎಷ್ಟು ಯೋಚಿಸಿದರೂ ಹೊಳೆಯುತ್ತಿಲ್ಲ. ಆದರೆ ಒಂದಂತೂ ನಿಜ ಮನಸ್ಸು ಸುಮಾರು ದಿನಗಳ ನಂತರ, ಅಲ್ಲ ಸಾರಿ, ತಿಂಗಳ ನಂತರ ಯಾಕೋ ಈ ಪರಿ ಕಾಡುತ್ತಿದೆ. ಮಾಡದ ತಪ್ಪನ್ನು ಒಪ್ಪಿಕೋ ಎಂದರೆ ಯಾವ ಮನಸು ತಾನೇ ಒಪ್ಪುತ್ತೆ ಹೇಳಿ. ಮನಸ್ಸಿಗೇನಾಗಿದೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ಬೇಸರ, ಸಂತಸ, ದುಗಡ, ದುಮ್ಮಾನಗಳನ್ನು ದೂರ ಮಾಡಲು ಒಂದು ಬ್ರಹ್ಮ ವಿದ್ಯೆ ಇದ್ದಿದ್ದರೆ....... ಎಂದು ಮನಸು ಬಯಸುತ್ತಿದೆ. ಆದರೆ ಈಗ ಒಂಥರಾ ಬರಗಾಲ ಮನಸ್ಸಿಗೆ. ಹಾಗಾಗಿ ಸದ್ಯಕ್ಕೆ ಮನಸ್ಸೂ ಖಾಲಿ ಖಾಲಿ.
ನನ್ನ ಕನಸಿನಲ್ಲಿ ಬಂದ ಆ ಕೆಟ್ಟ ಘಳಿಗೆ ನಿಜವಾಗದೇ ಇರಲಿ ಎಂದು ಮನಸು ಬಯಸುತ್ತಿರುತ್ತದೆ. ಆದರೆ ಅದೆಲ್ಲವನ್ನೂ ಮೀರಿ ನಾನು ನಿಲ್ಲಬಲ್ಲೆ ಎಂದು ಸುಳ್ಳಿನ ಗೋಪುರ ಕಟ್ಟಿ ಬಾಳುವುದಕ್ಕಿಂತ ಎರಡು ಹನಿ ಕಣ್ಣೀರು ಚುಳ್ಳನೆ ಕೆನ್ನೆಗಿಳಿದರೆ ಮನಸಿನಲಿ ಅದ್ಯಾವುದೋ ಸಮಾಧಾನ. ಭೋರ್ಗರೆದ ಎಲ್ಲಾ ಬೇಸರಗಳು ಅದ್ಯಾವುದೋ ಕ್ಷಣದಲ್ಲಿ ನಮ್ಮನ್ನು ಬಿಟ್ಟು ದೂರ ಸಾಗಿರುತ್ತದೆ. ಕಳೆದ ಅಷ್ಟೂ ವರುಷಗಳಲ್ಲಿ ಯಾವಾಗಲೂ ಏನಾದರೂ ಒಂದು ನಡೆಯುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ.
ನನಗೆ ಯಾರ, ಯಾವ ಕೊರತೆಯಿದೆ. ಉಹೂಂ ಯಾರದ್ದೂ ಇಲ್ಲ. ಒಬ್ಬರನ್ನು ಮೀರಿಸಿದವರೊಬ್ಬರು ಎಂಬಂತಿದ್ದಾರೆ ನನ್ನ ಜೊತೆಗೆ. ಆದರೆ ಜೊತೆಗಿದ್ದವರ ಮನಸ್ಸಿಗೇನಾಗಿದೆ. ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಮನೆಗೆ ಬಂದು ಕುಳಿತರೆ ಎಲ್ಲರೂ ಮನೆಯ ಹೊರಗಡೆ ಕ್ಯಾಂಡಲ್ ಅಥವಾ ಹಣತೆ ಹಚ್ಚಿ ಸಂಭ್ರಮಿಸುತ್ತಿದ್ದರೆ ಇಲ್ಲಿ ಇತ್ತ ನನ್ನ ಕೋಣೆಯಲ್ಲಿ ಅದೇ ಅಮಾವಾಸ್ಯೆಯ ಕಾರ್ಗತ್ತಲು. ಇದೆಲ್ಲವನ್ನೂ ದಾಟಿ ನಾನು ಮುಂದೆ ಹಣತೆ ಬೆಳಗುತ್ತೇನಾ..? ಆ ಹಣತೆ ಮನಸಿನಲ್ಲಿ ಕಾಣಿಸಿರುವ ಕಲ್ಮಶಗಳನ್ನು ದೂರ ಮಾಡುತ್ತಾ ಗೊತ್ತಿಲ್ಲ. ಆದರೆ ನಿರೀಕ್ಷೆಯಿದೆ. ಯಾಕೆಂದರೆ ನಂಬಿಕೆ ಯಾವತ್ತಿಗೂ ಮುಖ್ಯ. ಅದೊಂಥರಾ ಸಣ್ಣ ಮಗುವನ್ನು ನಾವು ಮುದ್ದಾಡುತ್ತಾ ಮೇಲಕ್ಕೆಸೆದಂತೆ. ಮಗುವಿಗೆ ಗೊತ್ತಿರುತ್ತೆ, ನಾನು ಕೆಳಗೆ ಬೀಳಲು ನನ್ನನ್ನು ಎಸೆದ ವ್ಯಕ್ತಿ ಬಿಡಲ್ಲ ಎಂದು. ಅದಕ್ಕೇ ಆ ಮಗು ಅಷ್ಟೆಲ್ಲಾ ರಿಸ್ಕ್ ಜೊತೆ ಮೇಲಕ್ಕೆಸೆಯಲ್ಪಟ್ಟಿದ್ದರೂ ಮಂದಹಾಸದ ನಗುವನ್ನು ನೀಡುತ್ತಿರುತ್ತದೆ. ಸದ್ಯಕ್ಕೆ ನಾನು ಮಗುವಾಗಬೇಕಾದ ಅನಿವಾರ್ಯತೆ.
ಪರವಾಗಿಲ್ಲ, ಕಾಲ ಉರುಳುತ್ತಿರುತ್ತದೆ. ಎಲ್ಲರಿಗೂ ಸತ್ಯ ಯಾವುದೆಂದು ಗೊತ್ತಾಗುತ್ತೆ. ಆದರೆ ಸದ್ಯಕ್ಕೆ ಹಣತೆ ಸರಿಯಿದೆ, ಅದರಲ್ಲಿದ್ದ ಬೆಳಕೂ ಸರಿಯಿತ್ತು. ಆದರೆ ಹಣೆ ಬರಹ ಸರಿಯಿಲ್ಲ. ಅದಕ್ಕಾಗಿ ಈ ಬರಹವನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ. ಸುಮಾರು ದಿನಗಳ ಬಳಿಕ ಬರೆದಿದ್ದೇನೆ. ಸ್ವಲ್ಪ ತಪ್ಪುಗಳಿರಬಹುದು, ಆದರೆ ಬರಹದ ಭಾವಗಳಲ್ಲಿ ತಪ್ಪಿಲ್ಲ. ಯಾಕೋ ಈ ಸಾಲು ಬರೆಯುವ ಹೊತ್ತಿಗೆ ನನ್ನ ಕಣ್ಣುಗಳೆರಡೂ ತೇವವಾಗಿದೆ. ಆ ಅಸ್ಪಷ್ಟತೆಯ ಹಿಂದೆ ಬಂದು ಒಂದು ತುಂಟ ನಗೆ ಬೀರಿ ಹೋದವರು ಯಾರು..? ಅದು ನೀನೇನಾ......?
No comments:
Post a Comment