Sunday, November 28, 2010

ಕರುಣಾಳು ಬಾ ಬೆಳಕೆ, ಆರದಿರಲಿ ಬೆಳಕು

ಇದು ೨೭ರ ಸಂಭ್ರಮ. ಈ ಸಂಭ್ರಮದಲ್ಲಿ ಅದ್ಭುತವಾದ ಸುಖವಿದೆ. ಯಾಕೋ ಗೊತ್ತಿಲ್ಲ. ೨೦೦೪ರ ಬಳಿಕ ಪ್ರತಿ ವರ್ಷದಲ್ಲೂ ಒಂದೊಂದು ಸೊಬಗು. ಒಂದೊಂದು ಅಚ್ಚರಿ. ಕಣ್ಣ ರೆಪ್ಪೆಯ ಬಡಿದು ತೆಗೆದಿರಬೇಕಾದರೆ ಏನೇನೋ ತಿರುವು. ಎಲ್ಲವೂ ಸುಂದರ ದಿನಗಳು. ಅದರ ನಡುವೆ ಒಂದಿಷ್ಟು ಕೋಪ, ಸಿಟ್ಟು, ಸಿಡುಕು, ಸೆಡವು, ಬೇಸರ, ರೌದ್ರತೆ, ಕೊನೆಗೆ ಅತಿ ಕೆಟ್ಟ ಕೋಪ. ಆಮೇಲೊಂದು ಸುದೀರ್ಘ ಮೌನ. ನಂತರ ಕೆಲವು ಮೇಘ ಸಂದೇಶ ಹೀಗೆ ಕಲ್ಪನೆ ಮತ್ತು ವಾಸ್ತವದ ತೆರೆ ಬಿಚ್ಚುತ್ತಾ ಸಾಗುತ್ತದೆ. ಬಹುಶಃ ವ್ಯಕ್ತಿ ಪರಿಪೂರ್ಣಗೊಳ್ಳುವುದು ಹೀಗೆಯೇ ಏನೋ...?

ಎಲ್ಲೋ ದೂರದಲ್ಲಿ ಇಟ್ಟಿದ್ದ ವೀಣೆಯ ತಂತಿ ಹರಿದು ಹೋಗಿತ್ತು. ತಂತಿಯ ಹಿಡಿದು ಸರಿಪಡಿಸಿದರೂ ನಾದ ಹೊರಗೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಆ ಮೌನದಲ್ಲೂ ಏನೋ ಲಯ, ತಾಳ ಎಲ್ಲವೂ ಸಮ್ಮಿಳಿತವಾಗುತ್ತಿತ್ತು. ಇಂದಿಗೂ ನನಗೆ ಸರಿಯಾಗಿ ನೆನಪಿದೆ. ಅದೆಷ್ಟೋ ಸಾರಿ ಆಕಾಶ ದಿಟ್ಟಿಸಿ ಕೆಲವೇ ಕೆಲವು ನಕ್ಷತ್ರಗಳನ್ನು ದಿಟ್ಟಿಸಿ ನೋಡಿದ್ದೇನೆ. ಆ ನಕ್ಷತ್ರಗಳ ಜೊತೆ ಹಲವು ಬಾರಿ ಚಂದಿರನನ್ನೂ ನೋಡಿದ್ದೇನೆ. ಅವ್ಯಾವುದೂ ಬದಲಾಗಲಿಲ್ಲ. ಬದಲಿಗೆ ನಾವು ಬದಲಾದೆವು. ಹಾಗನ್ನೋದಕ್ಕಿಂತಲೂ ನಾವು ಬದಲಾಗಿದ್ದೇವೆ ಎಂದು ಕಲ್ಪಿಸಿಕೊಂಡೆವು. ಅದರೂ ಪ್ರಯೋಜನವಾಗಲಿಲ್ಲ.

ಈ ಕತೆಗಳನ್ನೆಲ್ಲ ಅದ್ಯಾಕೆ ಬರೆದೆನೋ ಗೊತ್ತಿಲ್ಲ. ಇಂದು ಗೆಳತಿಗೆ ೨೭ ಮುಗಿದು ೨೮ರ ಮಡಿಲು ಸೇರಿದ ಸಂಭ್ರಮ. ಬಹುಶಃ ಜೀವನ ಅಂದರೆ ಏನು ಎನ್ನುವುದನ್ನು ಅದ್ಭುತವಾಗಿ ತಿಳಿದ ಗೆಳತಿ. ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ ಪರರ ಹಿತ ಬಯಸುವವಳು. ನನಗೆ ಸುಂದರ ಬದುಕಿನ ಪಾಠ ಹೇಳಿಕೊಟ್ಟವಳು. ಕೆಲವು ದಿನದ ದೀರ್ಘ ಮೌನವನೂ ಸಹಿಸಿಕೊಂಡವಳು. ಅದು ಬಿಟ್ಟರೆ ಈಗಲೂ ಅದೇ ತುಂಟತನ, ವಯ್ಯಾರ, ಹುಸಿಮುನಿಸು. ಇಂತವರು ನಿಮಗೆ ಸಿಗೋದು ಬಲು ಅಪರೂಪ.

ಗೆಳತಿಗೆ, ಇಲ್ಲಿರುವ ಪ್ರತಿ ಪದವೂ ನಿನ್ನನ್ನು ಕಾಡುತ್ತೆ. ಕಾಡುತ್ತೆ ಅನ್ನೋದಕ್ಕಿಂತಲೂ ನಿನ್ನ ತಾಕುತ್ತೆ. ಅದರ ನಡುವೆ ಈ ದಿನದ ಕೊನೆಯ ಕ್ಷಣದಲಿ ನಿನ್ನ ಬಗೆಗೆ ಬರೆಯೋಣ ಎನಿಸಿತು. ಈಗಲೂ ನೀನು ಮೊನ್ನೆ ಹೇಳಿದ ಆ ಹಾಡೂ ಸೇರಿದನಂತೆ ಮತ್ತೆರಡು ಹಾಡು ಕೇಳುತ್ತಾ ಇದನ್ನು ಬರೀತಾ ಇದ್ದೇನೆ. ಅದ್ಯಾಕೋ ಮನದಲ್ಲೇನೋ ಆರ್ದ್ರ ಭಾವ. ನನ್ನ ಇಷ್ಟೆಲ್ಲಾ ಸಂಭ್ರಮಗಳಿಗೆ ಕಾರಣಳಾದ ಸುಂದರ, ಸುಮಧುರ, ಸುಲಕ್ಷಣ ಸಂಪನ್ನೆಗೆ ಶುಭ ಹಾರೈಕೆಯಿದು ಆರದಿರಲಿ ಬೆಳಕೂ..
೨೮ ರ ಶುಭ ಘಳಿಗೆಯಲಿ ನಿನಗೆ ಜನುಮದಿನದ ಶುಭಾಶಯಗಳು.

4 comments:

ಜಲನಯನ said...

ನಿಮ್ಮ ಗೆಳತಿಯ ಹುಟ್ಟು ಹಬ್ಬದ ಸಮಯದಲ್ಲಿ ನಮ್ಮ ಶುಭಕಾಮನೆಗಳು

ಧರಿತ್ರಿ said...

ನನ್ನದೂ ವಿಶ್ ಹೇಳಿ ಮಾರಾಯ್ರೆ............
-ಚಿತ್ರಾ

Nanda Kishor B said...

blog chennaagide...

Kiran said...

Good one..!