Monday, June 21, 2010

ನನ್ನ ಸ್ಮೃತಿಪಟಲದಲ್ಲಿ ಸದಾ ನೀವಿರುತ್ತೀರಿ

ಇದು ೨೫ ಕಳೆದು ೨೬ಕ್ಕೆ ಕಾಲಿಡುವ ಸಂಭ್ರಮ. ಇದು ಸಂಭ್ರಮವೋ, ಸಡಗರವೋ ಒಂದೂ ತಿಳಿಯದಾಗಿದೆ. ಕಳೆದ ಎರಡು ವರ್ಷದಲ್ಲೂ ಇದೇರೀತಿ. ಯಾಕೆ ಹೀಗೆ ಎಂದು ಯೋಚಿಸಿದಷ್ಟೂ ಅರ್ಥವಾಗುತ್ತಿಲ್ಲ.


೯ ತಿಂಗಳು ತಾಯ ಗರ್ಭದಲ್ಲಿ ಅಡಗಿದ್ದು ಆ ಬಳಿಕ ಈ ಧರೆಗಿಳಿದ ನಾನು ಮಾಡಿದ್ದೇನು ಅಂತಾ ಚಿಂತಿಸಿದರೆ ಅಂತಹ ಯಾವುದೇ ಘನ ಸಾಧನೆ ಮಾಡಿದ ಯಾವುದೇ ವಿಷಯಗಳೂ ನನ್ನ ಮುಂದೆ ಬರುತ್ತಿಲ್ಲ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಈಗೆಲ್ಲೋ ಇದ್ದು ಜೀವನ ಸಾಗಿಸುತ್ತಿದ್ದೇನೆ. ತಾಯಿಯ ಪ್ರೀತಿ, ತಂದೆಯ ಒಲವು, ಸಹೋದರರ ಪ್ರೇಮ, ದೊಡ್ಡಮ್ಮ, ತಿಂಗಳ ಆರಂಭದಲ್ಲಿ ನಾನು ಕಳೆದುಕೊಂಡ ನನ್ನ ಪ್ರೀತಿಯ ಅಜ್ಜಿ ( ಈ ಅಜ್ಜಿಯ ಬಗ್ಗೆ ನಾನು ಶೀಘ್ರದಲ್ಲೇ ಬರೆಯಬೇಕು) ಹಾಗೂ ಅದ್ಭುತವೆನಿಸುವ ಗೆಳೆಯ ಗೆಳತಿಯರ ಪ್ರೀತಿ ಎಲ್ಲವನ್ನೂ ಪಡೆದಿದ್ದೇನೆ. ಯಾರೂ ನನ್ನ ಹಳಿಯಲಿಲ್ಲ, ತುಳಿಯಲಿಲ್ಲ. ನೀನು ಹೇಗೆ ಇರುವೆಯೋ ಅದುವೇ ಚೆನ್ನ ಎಂದರು ಕೆಲವರು. ಇಲ್ಲ ನೀನು ಹೀಗಾಗಬಾರದಿತ್ತು, ಹೀಗಿರಬೇಕಿತ್ತು ಅಂದರು ಹಲವರು. ಯಾರು ಏನೇ ಹೇಳಿದರೂ ಬೇಡವೆನ್ನಲಿಲ್ಲ. ಎಲ್ಲವನ್ನು ಸ್ವೀಕರಿಸು ಅನ್ನೋ ಹಿಂದೆ ಯಾರೋ ಹೇಳಿದ ಮಾತಿನಂತೆ ಎಲ್ಲವನ್ನೂ ಸ್ವೀಕರಿಸಿದೆ.

೫ನೇ ತರಗತಿವರೆಗೆ ಜೊತೆಗಿದ್ದ ಗೆಳೆಯ, ೭ನೇ ತರಗತಿಯಲ್ಲಿ ಹತ್ತಿರವಿದ್ದ ಗೆಳೆಯರು, ಶಾಲಾ ಅಧ್ಯಾಪಕರು, ೮ನೆ ತರಗತಿಗೆ ದೂರದ ಊರಿಂದ ಬಂದು ಸೇರಿದ್ದ ಹುಡುಗಿ, ಪ್ಲಸ್ ಟು ಕಲಿಯುವಾಗ ಸಿಕ್ಕಿದ ಗೆಳೆಯರು, ಅಲ್ಲೇ ಸಿಕ್ಕಿದ್ದ ಬೆಕ್ಕಿನ ಕಣ್ಣಿನ ಮುಸ್ಲಿಂ ಹುಡುಗಿ, ಡಿಗ್ರಿಯಲ್ಲಿ ಸಿಕ್ಕಿದವರು, ಪತ್ರಕರ್ತರ ಜಗತ್ತಿಗೆ ದೂಡಿದವರು, ಆಮೇಲೆ ಕಲಿತ ಪತ್ರಿಕೋದ್ಯಮ, ಮ್ಯಾಡಂ, ಆ ವೇಳೆಗಾಗಲೇ ನನ್ನ ಜೊತೆಗಿದ್ದ ಜೀವದ ಆದ್ಯಮ್ ಗೆಳತಿ. ಬೆಂಗಳೂರಲ್ಲಿ ಸಿಕ್ಕಿದ ಯಾಹೂ!, ನಂತರ ಬಂದ ಕ್ಷಮಯಾ ಧರಿತ್ರಿ, ಆಮೇಲೆ ಬರೆದ ಅಸಂಖ್ಯ ಒಲವಿನ ಓಲೆ, ಅಲ್ಲಿ ಸಿಕ್ಕಿದ್ದ ಅಭಿಮಾನಿ ಗೆಳತಿ ಗ್ರಂಥಪಾಲಕಿ ಮತ್ತು ಈಗ ನನ್ನ ಜೊತೆ ಇರುವ ಎಲ್ಲರೂ ಹಾಗೂ ನಿಮ್ಮೆಲ್ಲರ ನಡುವೆ ಇರುವ ನಾನು... ಮರೆತೆನೆಂದರೂ ಮರೆಯಲಿ ಹ್ಯಾಂಗ ನಿಮ್ಮ? ಮರೆತರೂ ನೀವು ಬಿಡ್ತೀರಾ ನನ್ನಾ?

ಜನುಮ ದಿನ ಅನ್ನೋದು ವಿಶೇಷ ದಿನ. ಅವತ್ತು ಮಾತ್ರ ಸಂಭ್ರಮಿಸಬೇಕು ಅನ್ನೋದರಲ್ಲಿ ನನಗೆ ಯಾವುದೇ ಅರ್ಥ ಕಾಣಿಸುತ್ತಿಲ್ಲ. ಆದರೆ ಕಳೆದೆರಡು ವರ್ಷದಂತೆ ಈ ವರ್ಷವಾಗದಿರಲಿ ಎನ್ನುವ ಬಯಕೆ ನನ್ನದು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಈ ಬಾರಿ ಹಾಗಾಗದು ಅನ್ನೋ ವಿಶ್ವಾಸ ನನ್ನದು. ಬರೆಯಲು ಇನ್ನೂ ಬಾಕಿಯಿದೆ. ಸದ್ಯಕ್ಕೆ ಇಷ್ಟು ಸಾಕು. ಈ ಸಂಭ್ರಮದ ಹೊತ್ತಿನಲ್ಲಿ ನಿರಂತರವಾಗಿ ನೀವೆಲ್ಲರೂ ನನ್ನ ಸ್ಮೃತಿಪಟಲದಲ್ಲಿರುತ್ತೀರಿ. ಕನಸುಗಳಿಗೆ ಜೀವ ತುಂಬಿದ ಎಲ್ಲರನ್ನೂ ನೆನಪಿಸಿಕೊಳ್ಳುತ್ತಾ ವಿರಮಿಸುತ್ತಿದ್ದೇನೆ.

3 comments:

Anonymous said...

ninna thale...

Dayananda said...

very nice

Anonymous said...

Nice one Mahesh Chevar.. :) Veena