Tuesday, January 26, 2010

ಹೋದೋರೆಲ್ಲ ಒಳ್ಳೆಯವರು...

ಕನ್ನಡ ಚಿತ್ರ ರಂಗ ಆಘಾತಗಳ ಮೇಲೆ ಆಘಾತ ಅನುಭವಿಸುತ್ತಿದೆ. ನಾಗರಹಾವು ಅನ್ನೋ ಒಂದು ಚಿತ್ರದಿಂದ ಜೀವನದುದ್ದಕ್ಕೂ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದ ಅವರಿಂದು ನೆನಪು ಮಾತ್ರ. ಕನ್ನಡ ಚಿತ್ರ ರಂಗಕ್ಕೆ ಕಳೆದ ೨೫ ದಿನಗಳಲ್ಲಿ ಆಘಾತಗಳ ಮೇಲೆ ಆಘಾತ. ಮೊದ್ಲು ಗಾಯಕ ಸಿ. ಅಶ್ವಥ್ ಅವರನ್ನು ಕಳೆದು ಕೊಂಡೆವು. ಅಲ್ಲಿಗೆ 'ಕನ್ನಡವೇ ಸತ್ಯ' ಅಜರಾಮರವಾಗಿ ಉಳಿಯಿತು.

ಅದಾಗಿ ಎರಡೇ ದಿನಕ್ಕೆ ಯಜಮಾನನಂತಿದ್ದ ವಿಷ್ಣುವರ್ಧನ್ ಹೊರಟೇ ಬಿಟ್ರು. ಒಂದು ಮುಂಜಾವದಲ್ಲಿ ಅವರು ಮೈಸೂರಿನಲ್ಲಿ ಇಹಲೋಕ ತ್ಯಜಿಸಿದರು. ಅಲ್ಲಿಗೆ ಮತ್ತೊಂದು ಯುಗ ಅಂತ್ಯವಾಯಿತು.

ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು ಹೋಗ್ಬಿಟ್ರು. ಚಿತ್ರ ರಂಗದಲ್ಲಿ ನಾಯಕನಾಗದೆ ಪೋಷಕ ಪಾತ್ರದಲ್ಲೇ ೩೭೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವ್ರು ನಟಿಸಿದ್ದಾರೆಂದರೆ ಅವರ ಪ್ರತಿಭೆ ಯಾವ ಮಟ್ಟಕ್ಕಿರಬಹುದು ಅಂತ ನೀವೇ ಯೋಚಿಸಿ ನೋಡಿ. ಆದ್ರೆ ಇವೆಲ್ಲಕ್ಕಿಂತಲೂ ಅಶ್ವಥ್ ಅವರನ್ನು ಮೇರು ನಟನನ್ನಾಗಿಸಿದ್ದು ನಾಗರಹಾವು. ಈ ಚಿತ್ರ ಸುಮ್ಮನೆ ಖ್ಯಾತಿ ಪಡೆಯಲಿಲ್ಲ. ಚಿತ್ರದುರ್ಗದ ಕೋಟೆಯಲ್ಲಿ ಅಶ್ವಥ್ ಹಾಗೂ ವಿಷ್ಣು ಅದ್ಭುತವಾಗಿ ನಟಿಸಿದರು. ಅಲ್ಲಿ ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿಯ ಕಣ್ಣಾಮುಚ್ಚಾಲೆ ಚೆನ್ನಾಗೆ ನಡೀತು. ಕೋಟೆಯ ಮೇಲೆ ನಿಂತು ಮೇಷ್ಟ್ರು ರಾಮಾಚಾರಿ ಅಂತ ಕರೀತಾ ಇರೋ ದೃಶ್ಯ ಈಗಲೂ ಮನಪಟಲದಲ್ಲಿ ಹಾಗೆ ಅಚ್ಚೊತ್ತಿ ನಿಂತಿದೆ... ಕಿವಿಯಲ್ಲಿ ಅದೇ ರಾಮಾಚಾರೀ ಅನ್ನೋ ಕರೆ ಕೇಳ್ತಾ ಇದೆ. ಮೇಷ್ಟ್ರು ಹುಡುಕಾಡ್ತಾ ಇದ್ದಾರೆ. ಯಾಕೋ ಆ ದೃಶ್ಯಗಳಿಗೆ ಕೊನೆಯೇ ಇಲ್ಲ ಅನ್ನೋ ಭಾವ.

ಯಾಕೋ ಕಲಾವಿದರ ಅಗಲಿಕೆಯ ಆಘಾತ ನೋಡಿದಾಗ ಮನಸ್ಸಿಗೆ ಬರೋದು ಒಂದೇ ಹಾಡು.. ಹೋದೋರೆಲ್ಲ ಒಳ್ಳೆಯವರು..

No comments: