Wednesday, May 06, 2009

ಗೆಳತಿಯ ಆತ್ಮಸಖಿಗೆ ಶುಭ್ ವಿವಾಹ್!

ಮುದ್ದು ಗೆಳತಿಗೆ,
ನಿನ್ನ ಆತ್ಮ ಸಖಿಗೆ ಪಾಣಿಗ್ರಹಣ ವಿಷಯ ತಿಳಿದು ಸಂತೋಷವಾಯಿತು. ಅದರ ಜತೆಗೆ ನೀನು ಎಂದೋ ಅವಳ ಬಗ್ಗೆ ಹೇಳಿದಾಗ ಕೇಳಿದ್ದ ವಿಷಯಗಳೆಲ್ಲಾ ನೆನಪಿಗೆ ಬಂದು ಮನವ ಕಾಡಿ ಭಾವ ಸಾಂದ್ರವಾಗಿಸಿತು. ಅವಳಿಗೆ ನನ್ನ ಪರಿಚಯವಿಲ್ಲದಿದ್ದರೂ ನೀನು ಹೇಳಿ ಅವಳಿಗೆ ನನ್ನ ಪರಿಚಯವಿದೆ ಎಂದು ತಿಳಿದುಕೊಂಡಿದ್ದೇನೆ. ಅದೇ ಕಾರಣಕ್ಕೆ ಸುಮ್ಮನೆ ಒಂದು ಬಾರಿ ಎಲ್ಲವನ್ನೂ ಮೆಲುಕು ಹಾಕುವ ಯತ್ನವನ್ನು ಮಾಡುತ್ತಿದ್ದೇನೆ.

ನಾವು ಆಗಷ್ಟೇ ಕಾಲೇಜು ಸೇರಿದ್ದೆವು. ಯಾರ ಪೂರ್ವಾಪರದ ಬಗ್ಗೆಯೂ ಯಾರಿಗೂ ಅರಿವಿರಲಿಲ್ಲ. ಕಾಲೇಜು ಸೇರಿ ಸುಮಾರು ಮೂರ್ನಾಲ್ಕು ತಿಂಗಳು ಕಳೆದ ನಂತರವೇ ನಾವು ಚಿರಪರಿಚಿತರಾದೆವು. ಅಂದಿನಿಂದ ನೀನು ಎಲ್ಲಾ ಪೂರ್ವಾಪರಗಳನ್ನೂ ಹೇಳುತ್ತಾ ಹೋದೆ.

ಇವುಗಳ ನಡುವೆ ನನಗೆ ನಿನ್ನಲ್ಲಿ ಇಷ್ಟವಾಗಿ ಕಾಡಿದ್ದು ಒಬ್ಬಳು ಆಸ್ಟ್ರೇಲಿಯಾದಲ್ಲಿರುವ ಹುಡುಗಿ, ಇನ್ನೊಬ್ಬಳು ಈ ಮದುವಣಗಿತ್ತಿ. ವಿಜೇಯ ಬಗ್ಗೆ ಇನ್ನೆಂದಾದರೂ ವಿವರವಾಗಿ ಬರೆದೇನು. ಮದುವಣಗಿತ್ತಿಯ ಬಗ್ಗೆ ನೀನು ಸಂಪೂರ್ಣವಾಗಿ ಹೆಳಿದ್ದು ನಾನು ನಿನ್ನ ಮನೆಗೆ ಬಂದಿದ್ದಾಗ. ಅದಕ್ಕಿಂತ ಮೊದಲು ಈ ಹೆಸರಿನ ಹುಡುಗಿ ಇದ್ದಾಳೆ ಎನ್ನುವುದು ತಿಳಿದಿತ್ತೇ ಹೊರತು ಅವಳ ಬಗ್ಗೆ ನೀ ಹೆಚ್ಚು ಬಾಯಿ ಬಿಟ್ಟಿರಲಿಲ್ಲ ಎನ್ನುವುದೇ ಸೂಕ್ತವಾದೀತೇನೋ?
ಆದರೆ ಅದೊಂದು ದಿನ ನಾನು ನಿನ್ನೂರಿಗೆ ಬಂದಿದ್ದೆ. ನಿನ್ನಲ್ಲಿ ಕೊಟ್ಟ ಮಾತಿಗೆ ಈತ ತಪ್ಪಲಿಲ್ಲ ಎನ್ನುವ ಸಂಭ್ರಮವಿತ್ತು. ನಿನಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತೋರಿಸುವ ಮತ್ತು ಹೇಳುವ ಉನ್ಮಾದವಿತ್ತು. ನನಗೆ ಅದೆಲ್ಲವನ್ನೂ ಕಿವಿಗೆ ತುಂಬಿಕೊಳ್ಳುವ ಕಾತರವಿತ್ತು. ಹಾಗೆ ಅಂದು ಅಪ್ಪ ನಮ್ಮಿಬ್ಬರನ್ನು ನಿನ್ನ ಕಾಲೇಜು ಬಳಿ ಬಿಟ್ಟಾಗ ಮಧ್ಯಾಹ್ನ ಸೂರ್‍ಯ ನೆತ್ತಿ ಮೇಲೇರುವ ಸಮಯ.
ಬಾರೋ ನಿನಗೆ ನನ್ನ ಕ್ಲಾಸ್ ತೋರಿಸ್ತೀನಿ ಎಂದು ನೀ ಕಲಿತ ತರಗತಿಯೊಳಗೆ ಕೊಂಡೊಯ್ದೆ. ಅಲ್ಲಿ ಒಂದೆಡೆ ನೀನು, ಇನ್ನೊಂದೆಡೆ ಮದುವಣಗಿತ್ತಿ, ಮತ್ತೊಂದು ಕಡೆ ನಿನ್ನ ಹಾಸ್ಟೆಲ್‌ಮೇಟ್ ಎಲ್ಲೆಲ್ಲಿ ಕುಳಿತುಕೊಂಡು ಏನೇನು ಕಿತಾಪತಿ ಮಾಡುತ್ತಿದ್ದೀರಿ ಎನ್ನುವುದನ್ನು ವಿವರವಾಗಿ ಹೇಳುತ್ತಾ ಹೋದೆ, ನಾ ಕೇಳುತ್ತಾ ಹೋದೆ. ಕ್ಲಾಸಲ್ಲಿ ಲೆಕ್ಚರರ್‌ಗೆ ಹೊಡೆಯುತ್ತಿದ್ದ ಲೈನ್, ಹೊಡೆಯುತ್ತಿದ್ದ ಶಿಳ್ಳೆ ಇತ್ಯಾದಿ ನಿಮ್ಮಿಬ್ಬರ ಮಸುಕು ನೆನಪಿನ ತೇರನೆಳೆದು ಮತ್ತೆ ಸಂಭ್ರಮಿಸಿದ್ದೆ.:-)
ಆನಂತರ ನಾವು ಶಾಲೆಯ ಬಳಿ ಹೋಗಿ ಅಲ್ಲಿ ಮಣ್ಣಿನಲ್ಲೇ ಕುಳಿತಿದ್ದು ನೆನಪಿದೆಯಾ? ಅಲ್ಲಿನ ಮರಗಳ ನಡುವಣ ಗುಡ್ಡವನ್ನು ತೋರಿಸಿ ನೋಡು ಇಲ್ಲೇ ನಾವಿಬ್ಬರೂ ಆಟವಾಡುತ್ತಾ ಇದ್ದಿದ್ದು. ನಾವು ಮಾಡದ ತಂಟೆಗಳಿಲ್ಲ ಎಂದು ಹೇಳಿದ್ದೆ. ಹಾಗೇ ಇನ್ನೂ ಏನೇನೋ ವಿಷಯಗಳನ್ನು ಅವಳ ಬಗ್ಗೆ ವಿವರವಾಗಿ ಹೇಳಿದ್ದೆ. ಆನಂತರ ಮನೆಗೆ ವಾಪಸಾಗಬೇಕಾದರೆ ಮನೆಗೆ ಬರುವ ಯಾವುದೋ ಕ್ರಾಸ್‌ನಲ್ಲಿ ನಿಲ್ಲಿಸಿ,ಇಲ್ಲಿ ನಾವು ಐಸ್‌ಕ್ರೀಂ ತಿನ್ನುತ್ತಾ ಇದ್ವಿ ಎಂದಿದ್ದೆ. ಆ ಬಾಲ್ಯದ ದಿನಗಳೆಲ್ಲಾ ನಿನ್ನ ಗೆಳತಿಯ ಹೆಸರಲ್ಲಿ ನಿನ್ನನ್ನು ಬಹುವಾಗಿ ಕಾಡುತ್ತೆ. ಅವಳು ನೀನು ಮಾಡುತ್ತಿದ್ದ ಕಿತಾಪತಿ, ಮನೆಗೆ ಬಂದರೆ ಅಮ್ಮನ ಮಧ್ಯಸ್ಥಿಕೆ, ನಿನ್ನ ತಂಟೆ, ಗೆಳತಿಯ ಜತೆಗಿನ ಜಗಳ ಇತ್ಯಾದಿ ಇತ್ಯಾದಿ... ನೀನು ಗೆಳತಿಯ ಬಗ್ಗೆ ಹೇಳಿದ ಎಲ್ಲಾ ಮಾತುಗಳನ್ನು ಬರೆಯಲು ಹೊರಟರೆ ಅದುವೇ ಒಂದು ಕತೆಯಾದೀತೇನೋ?
ಅದಾದ ನಂತರದ ದಿನಗಳಲ್ಲಿ ನೀನು ಅವಳ ಬಗ್ಗೆ ಹೇಳಿದ್ದು ಆಕೆ ಬೆಳೆದು ಬಂದ ಪರಿಸ್ಥಿತಿ. ನೀವಿಬ್ಬರೂ ಒಬ್ಬರಿಗೊಬ್ಬರು ನೆರವಾಗುವ ರೀತಿ, ಪೇಟೆಯ ಬೀದೀಲಿ ನಡೆದುಕೊಂಡು ಹೊರಟರೆ ಉಂಟಾಗುತ್ತಿದ್ದ ಸಂಚಲನ. ಅವಳ ಮನೆ, ಅವಳ ಕಷ್ಟ, ಅವಳು ಕೆಲಸ, ಬದುಕಿನ ನಡುವಿನ ಅವಳ ಹೋರಾಟ..... ಈ ಎಲ್ಲಾ ಕಾರಣಗಳಿಗಾಗಿ ನಿಮ್ಮಿಬ್ಬರ ಮೇಲಿನ ಅಭಿಮಾನ ಇನ್ನೂ ಜೀವಂತ. ಆ ಗೆಳತಿ ಕಳೆದ ಒಂದೂವರೆ ದಶಕಗಳಿಂದಲೂ ಹೆಚ್ಚು ಕಾಲ ನಿನ್ನ ಬೆನ್ನಿಗೆ ನೆರಳಾಗಿ ನಿಂತಿದ್ದಳು ಎನ್ನುವ ಅಭಿಮಾನ.


(ಚಿತ್ರ ಕೃಪೆ: ಇಂಟರ್ ನೆಟ್)

ಈಗ ಅವಳಿಗೆ ಮದುವೆ ಸಂಭ್ರಮ. ಸಪ್ತಪದಿ ತುಳಿದು, ಹಿನ್ನೆಲೆಯಲ್ಲಿ ಮಾಂಗಲ್ಯಂ ತಂತು ನಾನೇನಾ.... ಎಂದು ಹೇಳುತ್ತಿದ್ದರೆ ಅವಳು ಅಲ್ಲಿ ಮಾಂಗಲ್ಯ ಕೊರಳಿಗೇರಿಸಲು ತಲೆ ಬಾಗಿಸಿರುತ್ತಾಳೆ. ಆ ವೇಳೆ ಅವಳ ಮುಖದಲ್ಲಿ ನಾಚಿಕೆಯ ರಂಗೊಡೆದಿರಬೇಕು. ನಿನ್ನ ಪರಮಾಪ್ತೆ, ಸಖಿ, ಅತ್ಮ ಬಂಧು ಎಂಬ ವಿಶೇಷಣಗಳೊಂದಿಗೆ ನಿನ್ನ ಕಣ್ಣ ಮುಂದೆ ಬೆಳೆದ ಹುಡುಗಿ, ಇದುವರೆಗಿನ ಒಂಟೀ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸುತ್ತಿದ್ದಾಳೆ. ಹಾಗೆ ಅವಳು ಪ್ರೀತಿಯ ಹುಡುಗನ ಮುಂದೆ ತಲೆಬಾಗಿ ಕೊರಳೊಡ್ಡಿ ನಿಂತಾಗ, ಮಾಂಗಲ್ಯ ಅವಳ ಕೊರಳು ಸೇರಿದಾಗ ಅಲ್ಲಿ ಅಕ್ಷತೆ ಹಾಕಲು ನೀನಿರಬೇಕು. ಅದು ಅವಳ ಸುಂದರ ಭವಿಷ್ಯಕ್ಕೆ ನೀ ಬರೆವ ಮುನ್ನುಡಿ. ಆ ಕ್ಷಣ ಅವಳ ಪಾಲಿಗೆ ಧನ್ಯ ನಿಮಿಷ. ಅವಳ ಸಂತಸಕ್ಕೆ ನಿನ್ನದೊಂದು ಅಭಿಮಾನದ ಅಪ್ಪುಗೆಯಿರಲಿ. ಅದರಲ್ಲಿ ಅವಳು ಕಳೆದು ಹೋಗದಿರಲಿ. ಮತ್ತೇನಿದ್ದರೂ ಅವಳ ಪ್ರೀತಿಯ ಹುಡುಗನಿದ್ದಾನಲ್ಲ. ನಿನ್ನ ಶುಭಹಾರೈಕೆಯ ಅಕ್ಷತೆಯಲ್ಲಿ ನನ್ನದೂ ಒಂದು ಹಾರೈಕೆ ಇರುತ್ತದೆ.
ಆ ಹಾರೈಕೆ ಸಾಲುಗಳಿವು-
ಗೆಳತಿಯ ಸಖಿಯೇ ನಿನಗಿದೋ ಸುಖೀ ದಾಂಪತ್ಯದ ಶುಭಾಶಯ.
ಗೆಳತಿಯ ಆತ್ಮಸಖಿಗೆ ಶುಭ್‌ವಿವಾಹ್!!!

ಇಂತಿ ನಿನ್ನ ಪ್ರೀತಿಯ ಗೆಳತಿಯ ಗೆಳೆಯ.

3 comments:

shivu.k said...

ಸರ್,

ಒಂದು ಸುಂದರ ಮತ್ತು ಸೊಗಸಾದ ಲೇಖನ. ಭಾಲ್ಯ, ಕಾಲೇಜು, ಇತ್ಯಾದಿ ನೆನಪುಗಳು ಕಣ್ಣಿಗೆ ಕಟ್ಟಿದ ಚಿತ್ರಗಳಾಗಿ ಲೇಖನದಲ್ಲಿ ಚಲಿಸುತ್ತವೆ...
ಧನ್ಯವಾದಗಳು.

ಮನಸು said...

oh!!
tumba chennagi barediddeeri gelati bagge tumba ista aytu...

Priya said...

Beautiful as always! Brought me back a lot of college memories. Its not for nothing that people say that Friendship is forever! Wishing your friend's friend a very happy life!!!!